ಮುಂಬೈ: ಔಷಧ ವ್ಯಾಪಾರಿ ಉಮೇಶ್ ಪ್ರಹ್ಲಾದ್ ರಾವ್ ಕೊಲ್ಹೆ ಅವರನ್ನು ಸುನ್ನಿ ಇಸ್ಲಾಮಿಕ್ ಸಂಘಟನೆಯಾದ ತಬ್ಲೀಘಿ ಜಮಾತ್‌ನ(Tablighi Jamaat) ಮೂಲಭೂತವಾದಿ ಇಸ್ಲಾಮಿಸ್ಟ್‌ಗಳು ಹತ್ಯೆ ಮಾಡಿದ್ದಾರೆ ಎಂದು ರಾಷ್ಟ್ರೀಯ ತನಿಖಾ ದಳ(NIA) ಹೇಳಿದೆ.
ಪೂರ್ವ ಮಹಾರಾಷ್ಟ್ರದ ಅಮರಾವತಿಯ(Amravati) ಔಷಧ ವ್ಯಾಪಾರಿ ಉಮೇಶ್ ಪ್ರಹ್ಲಾದರಾವ್ ಕೊಲ್ಹೆ(54) ಅವರ ಹತ್ಯೆಯ ತನಿಖೆ ನಡೆಸಿದ ಎನ್‌ಐಎ 11 ಆರೋಪಿಗಳ ವಿರುದ್ಧ ನ್ಯಾಯಾಲಯಕ್ಕೆ ಚಾರ್ಜ್‌ಶೀಟ್ ಸಲ್ಲಿಸಿದೆ.
ಬಿಜೆಪಿ ವಕ್ತಾರೆ ನೂಪೂರ್ ಶರ್ಮಾ ಅವರನ್ನು ಬೆಂಬಲಿಸಿ ಉಮೇಶ್ ಕೊಲ್ಹೆ ವಾಟ್ಸಪ್‌ನಲ್ಲಿ ಸ್ಟೇಟಸ್ ಹಾಕಿದ್ದರು. ಈ ಸ್ಟೇಟಸ್ ನೋಡಿ ನಮ್ಮ ಧರ್ಮಕ್ಕೆ ಅವಮಾನ ಮಾಡಿದ್ದಾರೆ ಎಂದು ತಿಳಿದು ಆರೋಪಿಗಳು ಹತ್ಯೆ ಮಾಡಿದ್ದಾರೆ ಎಂದು ಎನ್‌ಐಎ ಆರೋಪಪಟ್ಟಿಯಲ್ಲಿ ಉಲ್ಲೇಖಿಸಿದೆ.
ಉಮೇಶ್ ಕೊಲ್ಹೆ ಜೂನ್ 21 ರಂದು ಕೆಲಸ ಮುಗಿಸಿ ಹಿಂತಿರುಗುತ್ತಿದ್ದಾಗ ಮೂವರು ದುಷ್ಕರ್ಮಿಗಳಿಂದ ಬರ್ಬರವಾಗಿ ಹತ್ಯೆಯಾಗಿದ್ದರು. ಇದನ್ನೂ ಓದಿ: ನನ್ನ ಪಾಲಿಗೆ ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ ಕಸ: ನಿರ್ದೇಶಕ ಸಯಿದ್ ಅಖ್ತರ್
ಪ್ರವಾದಿಗೆ ಅವಮಾನ ಮಾಡಿದ್ದಕ್ಕೆ ಆರೋಪಿಗಳು ಪ್ರತೀಕಾರಕ್ಕೆ ತೀರಿಸಲು ಪುತ್ರನ ಎದುರುಗಡೆಯೇ ಬರ್ಬರವಾಗಿ ಹತ್ಯೆ ಮಾಡಿದ್ದರು. ಎಲ್ಲಾ ಆರೋಪಿಗಳು ತಬ್ಲೀಘಿ ಜಮಾತ್ ಸಂಘಟನೆಯ ಸದಸ್ಯರಾಗಿದ್ದರು. ಈ ಕೃತ್ಯದ ಮಾಸ್ಟರ್ ಮೈಂಡ್ ತಬ್ಲಿಘಿ ಜಮಾತ್ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡುತ್ತಿದ್ದ ಎಂದು ಎನ್‌ಐಎ ಹೇಳಿದೆ.
ಇದು ಸಾಮಾನ್ಯ ಕೊಲೆಯಲ್ಲ. ಧಾರ್ಮಿಕ ಮೂಲಭೂತವಾದವನ್ನು ಬೆಳೆಸಿಕೊಂಡ ಮುಸ್ಲಿಂ ಯುವಕರು ಜನರಿಗೆ ಭಯ ಮಾಡಿಸಲು ಎಸಗಿದ ಈ ಕ್ರಿಮಿನಲ್ ಪಿತೂರಿ ಭಯೋತ್ಪಾದನಾ ಕೃತ್ಯಕ್ಕೆ ಸಮವಾಗಿದೆ. ಈ ಕೃತ್ಯದ ಬಳಿಕ ಆರೋಪಿಗಳು ಸಂಭ್ರಮಿಸಿದ್ದರು ಎಂದು ಉಲ್ಲೇಖಿಸಿದೆ.
ಸೌದಿ ಸರ್ಕಾರದಿಂದ ನಿಷೇಧ:
ಸೌದಿ ಅರೇಬಿಯಾ ಸರ್ಕಾರ ಸುನ್ನಿ ಇಸ್ಲಾಮಿಕ್ ಸಂಘಟನೆಯಾಗಿರುವ ತಬ್ಲಿಘಿ ಜಮಾತ್ ಅನ್ನು ನಿಷೇಧಿಸಿದೆ. ಈ ಸಂಘಟನೆ ಭಯೋತ್ಪಾದನೆ ಚಟುವಟಿಕೆಗಳಿಗೆ ಹೆಬ್ಬಾಗಿಲು ಎಂದಿರುವ ಸರ್ಕಾರ ಈ ಸಂಘಟನೆಯಿಂದ ದೂರ ಇರುವಂತೆ ಪ್ರಜೆಗಳಿಗೆ 2021ರ ಡಿಸೆಂಬರ್‌ನಲ್ಲಿ ಸೂಚಿಸಿತ್ತು.
ತಬ್ಲಿಘಿಗಳು ಯಾರು?
ಬ್ರಿಟಿಷರ ಅವಧಿಯಲ್ಲಿ 1926 ರಲ್ಲಿ ಭಾರತದಲ್ಲಿ ಹುಟ್ಟಿಕೊಂಡ ತಬ್ಲಿಘಿ ಜಮಾತ್ ಸುನ್ನಿ ಇಸ್ಲಾಮಿಕ್ ಮಿಷನರಿ ಸಂಘಟನೆಯಾಗಿದೆ. ಮುಸ್ಲಿಂ ಸಂಪ್ರದಾಯ, ಆಚರಣೆ, ಉಡುಪುಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕೆಂದು ಎಂದು ಪ್ರತಿಪಾದಿಸುತ್ತದೆ. ಜಗತ್ತಿನಾದ್ಯಂತ 35 ರಿಂದ 40 ಕೋಟಿ ಅನುಯಾಯಿಗಳು ಇದ್ದಾರೆ ಎಂದು ಅಂದಾಜಿಸಲಾಗಿದೆ. ರಾಜಕೀಯ ಚಟುವಟಿಕೆಯಿಂದ ದೂರ ಇದ್ದು ಧರ್ಮ ಪ್ರಚಾರ ಮಾತ್ರ ನಮ್ಮ ಕೆಲಸ ಎಂದು ಸಂಘಟನೆ ಹೇಳಿಕೊಳ್ಳುತ್ತದೆ.