ಬೆಂಗಳೂರು: ಮನೆ ಖರೀದಿಸುವಾಗ ರಾಧಿಕಾ ಕುಮಾರಸ್ವಾಮಿ (Radhika Kumaraswamy) ನನಗೆ 2 ಕೋಟಿ ರೂ. ಸಾಲ ನೀಡಿದ್ದರು ಎಂದು ವಸತಿ ಸಚಿವ ಜಮೀರ್ ಅಹಮದ್ (Zameer Ahmed Khan) ತಿಳಿಸಿದ್ದಾರೆ.
ರಾಧಿಕಾ ಕುಮಾರಸ್ವಾಮಿ ಲೋಕಾಯುಕ್ತ ವಿಚಾರಣೆ ಎದುರಿಸಿದ ಬಗ್ಗೆ ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಸಾಲ ಕೊಟ್ಟಿರುವುದನ್ನು ನಾನು ಆದಾಯ ತೆರಿಗೆಯಲ್ಲಿ ತೋರಿಸಿದ್ದೇನೆ. ರಾಧಿಕಾ ಕುಮಾರಸ್ವಾಮಿ ಅವರು ಅವರ ಆದಾಯ ತೆರಿಗೆ ಫೈಲ್ ಮಾಡುವಾಗ ತೋರಿಸಿದ್ದಾರೆ. ಇಡಿ ದಾಳಿ ನಂತರ ಈಗ ಲೋಕಾಯುಕ್ತದಲ್ಲಿ ವಿಚಾರಣೆ ನಡೆಯುತ್ತಿದೆ. ಹೀಗಾಗಿ ವಿಚಾರಣೆಗೆ ಹಾಜರಾಗಿ ಹೇಳಿಕೆ ನೀಡಿದ್ದಾರೆ ಎಂದು ಹೇಳಿದರು.
ಅಕ್ರಮ ಆಸ್ತಿ ಸಂಪಾದನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ಪೊಲೀಸರು, ವಸತಿ ಸಚಿವರ ಆದಾಯದ ಮೂಲಗಳನ್ನು ಪರಿಶೀಲಿಸಿದಾಗ ಸಾಲ ನೀಡಿದ ವ್ಯಕ್ತಿಗಳ ಪಟ್ಟಿ ಸಿಕ್ಕಿತ್ತು. ಈ ಪಟ್ಟಿಯಲ್ಲಿ ರಾಧಿಕಾ ಕುಮಾರಸ್ವಾಮಿ ಅವರ ಹೆಸರು ಇದ್ದ ಕಾರಣ ಪೊಲೀಸರು ವಿಚಾರಣೆ ನಡೆಸಿದ್ದರು. ವಿಚಾರಣೆ ವೇಳೆ ರಾಧಿಕಾ, ದಶಕದ ಹಿಂದೆ ತಾವು ಸಚಿವ ಜಮೀರ್ ಅವರಿಗೆ ಸಾಲ ಕೊಟ್ಟಿದ್ದನ್ನು ಒಪ್ಪಿಕೊಂಡು ಹೇಳಿಕೆ ದಾಖಲಿಸಿದ್ದರು. ಇದನ್ನೂ ಓದಿ: ಬೆಂಗಳೂರಲ್ಲಿ ಈದ್ ಮಿಲಾದ್ ಹೆಸರಲ್ಲಿ ಧರ್ಮಪ್ರಚಾರ – ಸಚಿವ ಜಮೀರ್ ನೇತೃತ್ವದ ಕಾರ್ಯಕ್ರಮಕ್ಕೆ ಭಾರಿ ವಿರೋಧ
ಏನಿದು ಪ್ರಕರಣ?
2019ರಲ್ಲಿ ಐ ಮಾನಿಟರಿ ಅಡ್ವೈಸರಿ ಕಂಪನಿಯ ಬಹುಕೋಟಿ ವಂಚನೆ ಹಗರಣ ಬೆಳಕಿಗೆ ಬಂದಿತ್ತು. ಈ ವಂಚಕ ಕಂಪನಿ ಜತೆ ನಂಟು ಹೊಂದಿದ್ದ ಆರೋಪದ ಮೇರೆಗೆ ಜಮೀರ್ ಅಹಮದ್ ಅವರ ಮೇಲೆ ಜಾರಿ ನಿರ್ದೇಶನಾಲಯ (ED) ದಾಳಿ ನಡೆಸಿತ್ತು.
ಇಡಿ ವರದಿಯ ಅನ್ವಯ ಆಗ ಮೈತ್ರಿ ಸರ್ಕಾರದಲ್ಲಿ ಸಚಿವರಾಗಿದ್ದ ಜಮೀರ್ ಖಾನ್ ವಿರುದ್ಧ ಅಕ್ರಮ ಆಸ್ತಿ ಸಂಪಾದನೆ ಆರೋಪದಡಿ ಅಂದು ಅಸ್ತಿತ್ವದಲ್ಲಿದ್ದ ಭ್ರಷ್ಟಾಚಾರ ನಿಗ್ರಹ ದಳವು (ಎಸಿಬಿ) ಪ್ರಕರಣ ದಾಖಲಿಸಿತ್ತು. ಎಸಿಬಿ ರದ್ದಾದ ಬಳಿಕ ಈ ಪ್ರಕರಣ ತನಿಖೆಯೂ ಲೋಕಾಯುಕ್ತ ಪೊಲೀಸರಿಗೆ (Lokayukta Police) ವರ್ಗವಾಗಿತ್ತು. ಈಗ ಸಚಿವರ ವಿರುದ್ಧ ಅಕ್ರಮ ಆಸ್ತಿ ಸಂಪಾದನೆ ಬಗ್ಗೆ ಲೋಕಾಯುಕ್ತ ಪೊಲೀಸರು ತನಿಖೆ ನಡೆಸುತ್ತಿದ್ದು ಹಲವರ ವಿಚಾರಣೆ ನಡೆಸುತ್ತಿದ್ದಾರೆ.
ನಾನು ಯಾರ ಬಳಿ ಸಾಲ ಪಡೆದಿದ್ದೇನೆ ಎನ್ನುವುದರ ಬಗ್ಗೆ ಜಮೀರ್ ಲೋಕಾಯುಕ್ತ ಪೊಲೀಸರಿಗೆ ಲಿಖಿತವಾಗಿ ಪಟ್ಟಿ ನೀಡಿದ್ದರು. ಈ ಪಟ್ಟಿಯಲ್ಲಿ ರಾಧಿಕಾ ಕುಮಾರಸ್ವಾಮಿ ಬಳಿಯಿಂದ 2.5 ಕೋಟಿ ರೂ. ಸಾಲ ಪಡೆದಿರುವ ವಿಚಾರವನ್ನು ಹಂಚಿಕೊಂಡಿದ್ದರು. ಇದನ್ನೂ ಓದಿ: ರಷ್ಯಾದಿಂದ ತೈಲ ಖರೀದಿಸಿ ಬ್ರಾಹ್ಮಣರು ಶ್ರೀಮಂತರಾಗುತ್ತಿದ್ದಾರೆ: ಭಾರತದ ವಿರುದ್ಧ ಟ್ರಂಪ್ ಆಪ್ತನಿಂದ ಜಾತಿ ಅಸ್ತ್ರ
ವಿಚಾರಣೆ ಸಂದರ್ಭದಲ್ಲಿ, ನಾನು 2012ರಲ್ಲಿ ಶಮಿಕಾ ಎಂಟರ್‌ಪ್ರೈಸಸ್ ಹೆಸರಿನಲ್ಲಿ ಯಶ್ ಹಾಗೂ ರಮ್ಯಾ ಅಭಿನಯದ ಲಕ್ಕಿ ಸಿನಿಮಾ ನಿರ್ಮಾಣ ಮಾಡಿದ್ದೆ.ಮನರಂಜನಾ ಚಾನೆಲ್‌ಗಳಿಗೆ ಈ ಸಿನಿಮಾದ ಸ್ಯಾಟಲೈಟ್ ಹಕ್ಕು ಹಾಗೂ ಚಲನಚಿತ್ರದ ಯಶಸ್ವಿನಿಂದ ಸಂಪಾದಿಸಿದ ಹಣದಲ್ಲಿ ಆರ್ಥಿಕ ಸಂಕಷ್ಟದಲ್ಲಿದ್ದ ಜಮೀರ್ ಅಹ್ಮದ್ ಅವರಿಗೆ 2.5 ಕೋಟಿ ರೂಗಳನ್ನು ಸಾಲವಾಗಿ ನೀಡಿದ್ದೆ ಎಂದು ರಾಧಿಕಾ ತಿಳಿಸಿರುವ ವಿಚಾರ ಮೂಲಗಳಿಂದ ತಿಳಿದು ಬಂದಿತ್ತು.