ಮುಂಬೈ: ಬಾಲಿವುಡ್ ನಟಿ ರಾಧಿಕಾ ಆಪ್ಟೆ ಈ ಹಿಂದೆ ಕಾಸ್ಟಿಂಗ್ ಕೌಚ್ ಬಗ್ಗೆ ಮಾತನಾಡಿ ಸುದ್ದಿಯಾಗಿದ್ದರು. ಇದೀಗ ಸಹನಟನೊಬ್ಬ ತನಗೆ ಕಿರುಕುಳ ನೀಡಿದ್ದಾನೆ ಅಂತ ಆರೋಪ ಮಾಡಿದ್ದಾರೆ.
`ಮೀಟೂ’ ಎಂಬ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಮಾತನಾಡಿದ ಆಪ್ಟೆ ಸದ್ಯ ಸಹ ನಟನೊಬ್ಬ ತನ್ನ ಜೊತೆ ಅನುಚಿತವಾಗಿ ನಡೆದುಕೊಂಡಿದ್ದನು ಎಂದು ಬಹಿರಂಗವಾಗಿಯೇ ಹೇಳಿದ್ದಾರೆ.
ರಾಧಿಕಾ ಆಪ್ಟೆ ಹೇಳಿದ್ದೇನು?:
ಇತ್ತೀಚೆಗೆ ಶೂಟಿಂಗ್ ವೇಳೆ ನನಗೆ ವಿಪರೀತ ಬೆನ್ನು ನೋವು ಕಾಣಿಸಿಕೊಂಡಿತ್ತು. ಬೆನ್ನು ನೋವಿನ ನಡುವೆಯೂ ನನಗೆ ಕೊಟ್ಟ ಪಾತ್ರವನ್ನು ನಾನು ಅಚ್ಚುಕಟ್ಟಾಗಿ ನಿಭಾಯಿಸಿದ್ದೆ. ಶೂಟಿಂಗ್ ನಂತರ ನಾನು ಲಿಫ್ಟ್ ನಲ್ಲಿ ರೂಮಿಗೆ ಹೋಗುವಾಗ ನನ್ನ ಜೊತೆಯಲ್ಲಿ ಸಹನಟ ಕೂಡ ಇದ್ದ. ನಾನು ನಟಿಸುತ್ತಿರುವ ಚಿತ್ರದಲ್ಲಿ ಆತ ಕೂಡ ನಟಿಸುತ್ತಿದ್ದಾನೆ ಎಂಬುದು ಗೊತ್ತು. ಅದು ಬಿಟ್ಟರೆ ನನಗೆ ಆತನ ಬಗ್ಗೆ ಯಾವುದೇ ವಿಷಯ ಗೊತ್ತಿರಲಿಲ್ಲ. ಇದೂವರೆಗೂ ನಾನು ಆತನ ಜೊತೆ ಮಾತನಾಡಿರಲಿಲ್ಲ ಹಾಗೂ ನನಗೆ ಆತನ ಪರಿಚಯ ಕೂಡ ಇರಲಿಲ್ಲ ಎಂದ್ರು.
ಲಿಫ್ಟ್ ನಲ್ಲಿ ನಾವು ಹೋಗುವಾಗ ಆತ `ನಿಮಗೆ ಏನಾದರೂ ಸಹಾಯ ಬೇಕೆಂದರೆ ನನ್ನಲ್ಲಿ ಹೇಳಿ. ಮಧ್ಯರಾತ್ರಿ ಆದರೂ ಪರವಾಗಿಲ್ಲ. ನಾನು ಬಂದು ನಿಮಗೆ ಸೊಂಟ ಮಸಾಜ್ ಮಾಡುತ್ತೀನಿ’ ಎಂದು ಹೇಳಿದ್ದ. ಆತನ ಮಾತು ಕೇಳಿ ನಾನು ಒಂದು ಕ್ಷಣ ಬೆಚ್ಚಿಬಿದ್ದೆ. ಅಲ್ಲದೇ ಮಾರನೇ ದಿನ ನಾನು ಆ ಸಹನಟನ ವಿಷಯವನ್ನು ನನ್ನ ಚಿತ್ರತಂಡದ ಕೆಲವು ಜನರ ಬಳಿ ಹೇಳಿಕೊಂಡೆ. ಆಗ ಚಿತ್ರತಂಡದಲ್ಲಿದ್ದ ಹಿರಿಯರು ಆತನನ್ನು ಕರೆದು ಮಾತನಾಡಿದರು. ಆಗ ಆತ ನನ್ನ ಬಳಿ ಕ್ಷಮೆ ಕೇಳಿದ ಎಂದು ರಾಧಿಕಾ ಆಪ್ಟೆ ತಿಳಿಸಿದರು.
ಮೀಟೂ ಲೈಂಗಿಕ ಕಿರುಕುಳದ ಬಗ್ಗೆ ಸಾರ್ವಜನಿಕರ ಮುಂದೆ ಹೇಳುವ ಕಾರ್ಯಕ್ರಮವಾಗಿದೆ. ಹಾಲಿವುಡ್ ಕಲಾವಿದರು ಈ ಕಾರ್ಯಕ್ರಮವನ್ನು ಶುರು ಮಾಡಿದ್ದರು.
ಈ ಹಿಂದೆ ಖಾಸಗಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ರಾಧಿಕಾ ತಮಗಾದ ಲೈಂಗಿಕ ಕಿರುಕುಳದ ಬಗ್ಗೆ ಹೇಳಿಕೊಂಡಿದ್ದರು. ಅದು ನನ್ನ ಮೊದಲ ದಿನದ ಚಿತ್ರೀಕರಣವಾಗಿತ್ತು. ಶೂಟಿಂಗ್‍ಗೆ ಹೋದಾಗ ಮೊದಲ ದಿನವೇ ನನ್ನ ಪಕ್ಕ ಬಂದ ಕುಳಿತ ಆ ನಟ ತನ್ನ ಕಾಲಿಂದ ನನ್ನ ಕಾಲಿಗೆ ಉಜ್ಜಿ ಅಸಭ್ಯವಾಗಿ ನಡೆದುಕೊಂಡನು. ಕೂಡಲೇ ನಾನು ಆತನ ಕೆನ್ನೆಗೆ ಬಾರಿಸಿದೆ ಅಂತಾ ರಾಧಿಕಾ ಆಪ್ಟೆ ಹೇಳಿಕೊಂಡಿದ್ದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv