ಬೆಂಗಳೂರು: ಯಡಿಯೂರಪ್ಪ ಸರ್ಕಾರದಲ್ಲಿ ಬಯಸದೇ ಬಂದ ಭಾಗ್ಯ ಅಂದ್ರೆ ಡಿಸಿಎಂ ಕುರ್ಚಿ. ಒಂದಲ್ಲ, ಎರಡಲ್ಲ ಬರೋಬ್ಬರಿ ಮೂರು ಡಿಸಿಎಂ ಹುದ್ದೆ. ಅಷ್ಟಕ್ಕೂ ಡಿಸಿಎಂ ಹುದ್ದೆ ಸೃಷ್ಟಿಸಿದ್ದು ಯಡಿಯೂರಪ್ಪ ಅಲ್ಲ. ಹೈಕಮಾಂಡ್ ಅಚ್ಚರಿ ರೀತಿಯಲ್ಲಿ ಡಿಸಿಎಂ ಹುದ್ದೆ ಸೃಷ್ಟಿಸಿತು. ಆದರೆ ಈ ಡಿಸಿಎಂ ಹುದ್ದೆ ಮಾತ್ರ ಶ್ರೀರಾಮುಲು ಅವರಿಗೆ ದಕ್ಕಲೇ ಇಲ್ಲ. ಆಗ ದಕ್ಕದ ಹುದ್ದೆಗೆ ಈಗ ದಕ್ಕಿಸಿಕೊಳ್ಳುವ ಪ್ರಯತ್ನಗಳು ನಡೆದಿವೆ. ಆದರೂ ಈ ಡಿಸಿಎಂ ಹುದ್ದೆ ಹೋರಾಟ ರಾಮುಲು ಅವರಿಗೆ ನುಂಗಲಾರದ ಬಿಸಿತುಪ್ಪವಾಗಿದೆ.
2018ರ ವಿಧಾನಸಭೆ ಚುನಾವಣೆ ವೇಳೆ ರಾಮುಲು ಡಿಸಿಎಂ ಎಂದೇ ಪ್ರಚಾರ ನಡೆಸಲಾಗಿತ್ತು. ಸರ್ಕಾರ ಬಂದರೆ ಶ್ರೀರಾಮುಲು ಪಕ್ಕಾ ಡಿಸಿಎಂ ಅನ್ನೋ ಆಸೆ ಹುಟ್ಟಿಸಿದ್ದರು. ಆಗ ಅತಂತ್ರ ಪರಿಸ್ಥಿತಿ ನಿರ್ಮಾಣವಾಗಿ ರಾಮುಲುಗೆ ನಿರಾಸೆ ತಂದೊಡ್ಡಿತ್ತು. ಬದಲಾದ ರಾಜಕೀಯ ಪರಿಸ್ಥಿತಿ, ಆಪರೇಷನ್ ಕಮಲದ ಟರ್ನ್ ಪಾಯಿಂಟ್ ನಿಂದ ಹೈಕಮಾಂಡ್ ಲೆಕ್ಕಾಚಾರದಲ್ಲಿ ಶ್ರೀರಾಮುಲು ಅವರಿಗೆ ಅದೃಷ್ಟ ಕೈಕೊಟ್ಟಿತ್ತು.
ಈಗ ಮತ್ತೆ ಡಿಸಿಎಂ ಪಟ್ಟ ಹೋರಾಟ ಮುನ್ನಲೆಗೆ ಬಂದಿದೆ. ಎಸ್ ಟಿ ಸಮುದಾಯಕ್ಕೆ ಡಿಸಿಎಂ ಪಟ್ಟ ಬೇಕು ಅನ್ನೋ ಬೇಡಿಕೆ ಜೋರಾಗಿಯೇ ನಡೆಯುತ್ತಿದೆ. ಎಸ್ ಟಿ ಸಮುದಾಯದಲ್ಲಿ ಆಪರೇಷನ್ ಡೈನಾಮಿಕ್ ಸ್ಟಾರ್ ರಮೇಶ್ ಜಾರಕಿಹೊಳಿ ಸಹ ರೇಸ್ ನಲ್ಲಿ ಇರೋದು ರಾಮುಲು ಅವರಿಗೆ ಅಡೆತಡೆ ಎದುರಾಗಿದೆ. ಹಾಗಾಗಿ ಈ ಬಾರಿ ಹೈಕಮಾಂಡ್ ಡಿಸಿಎಂ ಪಟ್ಟವನ್ನ 4ಕ್ಕೆ ಏರಿಸುತ್ತಾ? 2ಕ್ಕೆ ಇಳಿಸುತ್ತಾ? ಇಲ್ಲ ಎಲ್ಲವನ್ನು ರದ್ದುಗೊಳಿಸುತ್ತಾ ಅನ್ನೋದರ ಆಧಾರದ ಮೇಲೆ ರಾಮುಲು ಡಿಸಿಎಂ ಭವಿಷ್ಯ ನಿಂತಿರೋದಂತೂ ಸತ್ಯ.
ಈ ನಡುವೆ ಈ ಬಿಸಿತುಪ್ಪದ ಡಿಸಿಎಂ ಬಗ್ಗೆ ಸುದ್ದಿಗಳು ಹರಿದಾಡುತ್ತಿರೋದು ರಾಮುಲು ಅವರಿಗೆ ಪಕ್ಷದಲ್ಲಿ ಇರುಸುಮುರುಸಿಗೆ ಕಾರಣವಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿದ ಶ್ರೀರಾಮುಲು, ಬಿಜೆಪಿಯಲ್ಲಿ ಸ್ಥಾನಮಾನಕ್ಕಾಗಿ ಹೋರಾಟ ಮಾಡಿದ ಜನ ನಾವಲ್ಲ. ಯಾವುದೇ ಖಾತೆಯಲ್ಲಿ ಅಪೇಕ್ಷೆ ಪಟ್ಟವನು ನಾನಲ್ಲ. ಆದರೆ ಶ್ರೀರಾಮುಲುಗೆ ಡಿಸಿಎಂ ಕೊಡಬೇಕು ಅಂತಾ ಜನರ ಒತ್ತಾಯ ಇದೆ. ಜನರ ಒತ್ತಾಯ ಇರುವಾಗ ನಾನು ಅದನ್ನು ಬೇಡ ಎನ್ನಲು ಹೋಗುವುದಿಲ್ಲ. ಎಲ್ಲಾ ದೇವರ ಇಚ್ಛೆ ಎಂದು ಹೇಳುವ ಮೂಲಕ ಡಿಸಿಎಂ ಗದ್ದಲಕ್ಕೆ ತೇಪೆ ಹಚ್ಚಲು ಶ್ರೀರಾಮುಲು ಯತ್ನಿಸಿದ್ದಾರೆ.