ಚಾಮರಾಜನಗರ: ಜನ ಸೇವಕ, ರಾಜಕಾರಣಿ ಆರ್.ಧ್ರುವನಾರಾಯಣ್ (R.Dhruvanarayan) ಇನ್ನು ನೆನಪು ಮಾತ್ರ. ಮಾರ್ಚ್ 11ರಂದು ಹೃದಯಾಘಾತದಿಂದ ನಿಧನರಾದ ಧ್ರುವನಾರಾಯಣ್ ಅವರ ಅಂತ್ಯಕ್ರಿಯೆ (Funeral) ಸರ್ಕಾರಿ ಗೌರವಗಳೊಂದಿಗೆ ಹುಟ್ಟೂರಾದ ಚಾಮರಾಜನಗರ (Chamarajanagara) ಜಿಲ್ಲೆಯ ಹೆಗ್ಗವಾಡಿಯಲ್ಲಿ (Heggavadi) ನೆರವೇರಿತು. ನೂರಾರು ಗಣ್ಯರು, ಸಹಸ್ರಾರು ಜನರ ಅಶ್ರುತರ್ಪಣದೊಂದಿಗೆ ಧ್ರುವನಾರಾಯಣ್ ಮಣ್ಣಲ್ಲಿ ಲೀನವಾದರು.
ರಾಜಕೀಯ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿ ಜನಪ್ರತಿನಿಧಿಗಳಿಗೆ ಮಾದರಿಯಾಗಿದ್ದ ಚಾಮರಾಜನಗರ ಮಾಜಿ ಸಂಸದ, ಕೆಪಿಸಿಸಿ (KPCC) ಮಾಜಿ ಅಧ್ಯಕ್ಷ ಆರ್.ಧ್ರುವನಾರಾಯಣ್ ಅವರ ಯುಗಾಂತ್ಯವಾಗಿದೆ. ಶನಿವಾರ ನಿಧನರಾದ ಆರ್.ಧ್ರುವನಾರಾಯಣ ಅವರ ಪಾರ್ಥಿವ ಶರೀರವನ್ನು ಮೈಸೂರಿನಿಂದ (Mysuru) ಚಾಮರಾಜನಗರ ಜಿಲ್ಲೆ ಹೆಗ್ಗವಾಡಿ ಗ್ರಾಮಕ್ಕೆ ಮಧ್ಯರಾತ್ರಿ ತರಲಾಗಿತ್ತು. ತಡರಾತ್ರಿಯಾದರೂ ದಾರಿಯುದ್ದಕ್ಕೂ ಗ್ರಾಮ ಗ್ರಾಮಗಳಲ್ಲಿ ಕಾದು ನಿಂತಿದ್ದ ಸಹಸ್ರಾರು ಸಾರ್ವಜನಿಕರು ಅಗಲಿದ ನಾಯಕನ ಅಂತಿಮ ದರ್ಶನ ಪಡೆದರು. ಇದನ್ನೂ ಓದಿ: ಸ್ವಾಮೀಜಿ ಮಾತು ನಂಬಿ ಶನಿ ದೇವರಿಗೆ ಮಾಂಸದ ಹಾರ ತಂದಿದ್ದ ವ್ಯಕ್ತಿ ಅರೆಸ್ಟ್
Advertisement
Advertisement
ಧ್ರುವನಾರಾಯಣ್ ಅವರ ಪಾರ್ಥಿವ ಶರೀರವನ್ನು ಹೆಗ್ಗವಾಡಿಯಲ್ಲಿರುವ ತಮ್ಮ ನಿವಾಸದ ಆವರಣದಲ್ಲಿ ತ್ರಿವರ್ಣಧ್ವಜ ಹೊದಿಸಿ ಸಾರ್ವಜನಿಕರ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿತ್ತು. ಕೊನೆಯ ಬಾರಿ ತಮ್ಮ ನೆಚ್ಚಿನ ನಾಯಕನನ್ನು ಕಣ್ತುಂಬಿಕೊಳ್ಳುವ ಸಲುವಾಗಿ ಬೆಳಗಿನ ಜಾವದಿಂದಲೇ ಅಪಾರ ಜನಸಾಗರ ಹರಿದುಬಂದಿತ್ತು. ಮಧ್ಯಾಹ್ನದವರೆಗೂ ಸಾರ್ವಜನಿಕರ ದರ್ಶನಕ್ಕೆ ಅವಕಾಶ ನೀಡಿದ ನಂತರ ಧ್ರುವನಾರಾಯಣ್ ಅವರ ತೋಟದಲ್ಲಿ ತಮ್ಮ ತಂದೆ ತಾಯಿ ಸಮಾಧಿ ಪಕ್ಕದಲ್ಲೇ ಅವರ ಅಂತ್ಯಕ್ರಿಯೆಯನ್ನು ಸರ್ಕಾರಿ ಗೌರವಗಳೊಂದಿಗೆ ನೆರವೇರಿಸಲಾಯಿತು. ಮೃತರ ಗೌರವಾರ್ಥ ಜಿಲ್ಲಾ ಸಶಸ್ತ್ರ ಮೀಸಲು ಪಡೆ ಪೊಲೀಸರು ಗಾಳಿಯಲ್ಲಿ ಮೂರು ಸುತ್ತು ಗುಂಡು ಹಾರಿಸಿದರು. ರಾಷ್ಟ್ರಗೀತೆ ನುಡಿಸಿ ಒಂದು ನಿಮಿಷ ಮೌನಾಚರಣೆ ಮಾಡುವ ಮೂಲಕ ಗೌರವ ಸಲ್ಲಿಸಿದರು. ಬಳಿಕ ಧ್ರುವನಾರಾಯಣ್ ಅವರ ತಂದೆ ತಾಯಿ ಸಮಾಧಿ ಪಕ್ಕದಲ್ಲೇ ಹಿಂದೂ ಸಂಪ್ರದಾಯದಂತೆ ಮಣ್ಣು ಮಾಡಿ ಅಂತ್ಯಸಂಸ್ಕಾರ ನೆರವೇರಿಸಲಾಯಿತು. ಇದನ್ನೂ ಓದಿ: ಉದ್ಘಾಟನೆ ದಿನವೇ ಎಕ್ಸ್‌ಪ್ರೆಸ್‌ವೇಯಲ್ಲಿ ಅಪಘಾತ
Advertisement
Advertisement
ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಅಖಿಲಭಾರತ ವೀರಶೈವ ಲಿಂಗಾಯತ ಮಹಾಸಭಾ ರಾಜ್ಯಾಧ್ಯಕ್ಷ ಶಾಮನೂರು ಶಿವಶಂಕರಪ್ಪ, ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಸತೀಶ್ ಜಾರಕಿಹೊಳಿ, ಈಶ್ವರ ಖಂಡ್ರೆ, ಮಾಜಿ ಸಚಿವರಾದ ಪರಮೇಶ್ವರ್, ದಿನೇಶ್ ಗುಂಡೂರಾವ್ ಸೇರಿದಂತೆ ಅಸಂಖ್ಯಾತ ಗಣ್ಯರು ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡು ಅಗಲಿದ ನಾಯಕನಿಗೆ ಅಶ್ರುತರ್ಪಣ ಸಲ್ಲಿಸಿದರು. ಇದನ್ನೂ ಓದಿ: JDS ಕಾರ್ಯಕರ್ತರಿಗೆ ಭರ್ಜರಿ ಬಾಡೂಟ -ನಾನು ರಾಮನಗರದಲ್ಲೇ ಮಣ್ಣಾಗೋದು ಎಂದ HDK
ಇದೇ ವೇಳೆ ಧ್ರುವನಾರಾಯಣ್ ಪುತ್ರ ದರ್ಶನ್ ಅವರಿಗೆ ನಂಜನಗೂಡು (Nanjangudu) ವಿಧಾನಸಭಾ ಕ್ಷೇತ್ರದಿಂದ ಟಿಕೆಟ್ ನೀಡಬೇಕೆಂದು ಅಭಿಮಾನಿಗಳು ರಾಜ್ಯ ಕಾಂಗ್ರೆಸ್ (Congress) ನಾಯಕರ ಮುಂದೆ ಒತ್ತಾಯ ಮಾಡಿದರು.
ಆಶಾಕಿರಣವಾಗಿ ರಾಜಕೀಯ ಕ್ಷೇತ್ರದಲ್ಲಿ ಮಿಂಚಿ ಮರೆಯಾದ ಧ್ರುವನಾರಾಯಣ್‌ಗೆ ಸಹಸ್ರಾರು ಜನ ಅಶ್ರುತರ್ಪಣಗೈದು ಬೀಳ್ಕೊಟ್ಟರು. ಇದರೊಂದಿಗೆ ರಾಜಕೀಯ ಕ್ಷೇತ್ರದಲ್ಲಿ ಧ್ರುವತಾರೆಯಾಗಿ, ದೀನದಲಿತರ, ನೊಂದವರ ದನಿಯಾಗಿದ್ದ ಧ್ರುವನಾರಾಯಣ್ ಅವರ ಯುಗಾಂತ್ಯವಾದದ್ದು ತುಂಬಲಾರದ ನಷ್ಟವೇ ಸರಿ. ಇದನ್ನೂ ಓದಿ: ಮೋದಿಗೆ ಬೆಲ್ಲದ ಉಡುಗೊರೆ ನೀಡಿ ಮುಖದಲ್ಲಿ ಮಂದಹಾಸ ತರಿಸಿದ ಸಂಸದೆ ಸುಮಲತಾ