ಬೆಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ (Congress Government) ಬಂದ ಮೇಲೆ ಜನಿವಾರ, ಶಿವದಾರ, ಉಡುದಾರ ಎಲ್ಲದಕ್ಕೂ ಕತ್ತರಿ ಬೀಳುತ್ತಿದೆ. ತಾಳಿಗೆ ಭಾಗ್ಯ ಇಲ್ಲ, ಹಿಜಬ್‌ಗೆ ಬಹುಪರಾಕ್ ನಡೆಯುತ್ತಿದೆ ಎಂದು ವಿಪಕ್ಷ ನಾಯಕ ಆರ್.ಅಶೋಕ್ (R Ashok) ವಾಗ್ದಾಳಿ ನಡೆಸಿದರು.
ಹೈಕಮಾಂಡ್ (High Command) ಸೂಚನೆ ಮೇರೆಗೆ ನ್ಯಾಷನಲ್ ಹೆರಾಲ್ಡ್ ಪ್ರಕರಣ (National Herald Case) ಸಂಬಂಧ ವಿಧಾನಸೌಧದಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇಲ್ಲಿ ಅಂಬೇಡ್ಕರ್ ಸಂವಿಧಾನದ ಸರ್ಕಾರ ಇಲ್ಲ. ಧಾರವಾಡದಲ್ಲಿಯೂ ಜನಿವಾರ ಪ್ರಕರಣ ನಡೆದಿದೆ. ನಂದನ್ ಎಂಬ ವಿದ್ಯಾರ್ಥಿಗೆ ಜನಿವಾರ ಕತ್ತರಿಸಿ ಪರೀಕ್ಷೆ ಬರೆಸಿದ್ದಾರೆ. ಪರೀಕ್ಷೆ ಅಂದರೆ ಎಲ್ಲ ವಿದ್ಯಾರ್ಥಿಗಳಲ್ಲೂ ಉದ್ವೇಗ ಇರುತ್ತದೆ. ಆದರೆ ಜನಿವಾರ ತೆಗೆಯಲು ತಿಳಿಸಿ ಆ ಭಾವನೆಯನ್ನು ಘಾಸಿ ಮಾಡುತ್ತೀರಾ. ಈ ಮೊದಲು ಸಾಬರಿಗೆ ಹಿಜಬ್ ತೆಗೆದಿದ್ದಕ್ಕೆ ಬಾಯಿ ಬಾಯಿ ಬಡಿದುಕೊಂಡಿದ್ದರು. ಜನಿವಾರ ಒಂದು ದಾರ ಅಷ್ಟೇ, ಅದು ಹಿಜಬ್ ಥರ ಬಟ್ಟೆ ಅಲ್ಲ. ಜನಿವಾರದಲ್ಲಿ ಕಾಪಿ ಮಾಡೋಕ್ಕಾಗುತ್ತಾ? ಶಿವದಾರವನ್ನೂ ತೆಗೆಸಿದ್ದಾರೆ, ಕತ್ತರಿ ಹಾಕಿದ್ದಾರೆ, ಒಕ್ಕಲಿಗರ ಉಡುದಾರ ಕಟ್, ತಾಳಿಗೂ ಭಾಗ್ಯ ಇಲ್ಲ. ಇದು ಮನೆಹಾಳ ಸರ್ಕಾರ, ದುರುಳ ಕಾಂಗ್ರೆಸ್, ಹೆಣ್ಣಿನ ತಾಳಿಗೆ ಕೈ ಹಾಕಿದವರು ಸರ್ವನಾಶವಾಗುತ್ತಾರೆ, ಓಲೆಯನ್ನೂ ತೆಗೆಸಿದ್ದಾರೆ. ಕಾಂಗ್ರೆಸ್ ಸತ್ತು ಹೋಗುತ್ತದೆ ಎಂದು ತಾಳಿ, ಓಲೆ ತೆಗೆಸಿದ ಫೋಟೋ ತೋರಿಸಿ ಆರೋಪಿಸಿದರು.ಇದನ್ನೂ ಓದಿ: ಆಗೋದೆಲ್ಲಾ ಒಳ್ಳೆಯದಕ್ಕೆ ಭಗವಂತ ನಮ್ಮೊಂದಿಗೆ ಇದ್ದಾನೆ: ಕಹಿ ಘಟನೆ ನೆನೆದ ವೈಷ್ಣವಿ
ಕಾಂಗ್ರೆಸ್ ಸರ್ಕಾರ ಹಿಂದೂಗಳನ್ನು ದಮನ ಮಾಡುತ್ತಿದೆ, ಅವಮಾನ ಮಾಡುತ್ತಿದೆ. ಸರ್ಕಾರ ಹಿಂದೂಗಳನ್ನು ಅವಮಾನ ಮಾಡಿ ವಿಕೃತ ಸಂತೋಷ ಪಡುತ್ತದೆ. ಕೇಂದ್ರದ ಮಾನವ ಹಕ್ಕು ಆಯೋಗ, ರಾಜ್ಯ ಮಾನವ ಹಕ್ಕುಗಳ ಆಯೋಗಗಳು ಕೂಡಲೇ ಸರ್ಕಾರದ ಮೇಲೆ ಕ್ರಮ ಕೈಗೊಳ್ಳಲಿ. ಹೆಣ್ಣುಮಕ್ಕಳ ತಾಳಿ, ಓಲೆ ತೆಗೆಸಿದ ಪ್ರಕರಣ ಸಂಬಂಧ ನಾನು ಕೇಂದ್ರದ ಮಹಿಳಾ ಆಯೋಗಕ್ಕೆ ಪತ್ರ ಬರೆಯುತ್ತೇನೆ ಎಂದರು.
ಇನ್ನೂ ಸೋನಿಯಾ ಗಾಂಧಿ (Sonia Gandhi) ಹಾಗೂ ರಾಹುಲ್ ಗಾಂಧಿ (Rahul Gandhi) ವಿರುದ್ಧ ಚಾರ್ಜ್‌ಶೀಟ್ ಸಲ್ಲಿಕೆ ವಿಚಾರವಾಗಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷ ದೇಶ ಲೂಟಿ ಮಾಡುವ ಪಕ್ಷ, ಮನಮೋಹನ್ ಸಿಂಗ್ (Manmohan Singh) ಕಾಲದಲ್ಲಿ ಹಗರಣಗಳ ಸರಮಾಲೆ ನಡೆದಿತ್ತು. ಈಗ ಪತ್ರಿಕೆಯನ್ನೇ ಲೂಟಿ ಮಾಡಿದ್ದಾರೆ. ಹಿಂದೆ 1937ರಲ್ಲಿ ಶುರುವಾದ ನ್ಯಾಷನಲ್ ಹೆರಾಲ್ಡ್ ಪತ್ರಿಕೆಯಲ್ಲಿ ಈಗ ಲೂಟಿ ಮಾಡಿದ್ದಾರೆ. 2008ರಲ್ಲಿ ನ್ಯಾಷನಲ್ ಹೆರಾಲ್ಡ್ ಪತ್ರಿಕೆ ನಷ್ಟದ ಕಾರಣ ನೀಡಿ ಮುಚ್ಚಲಾಗಿತ್ತು. ನಂತರ ಅದರ 3,000 ಕೋಟಿ ರೂ. ಆಸ್ತಿ ಮೇಲೆ ರಾಹುಲ್, ಸೋನಿಯಾ ಗಾಂಧಿ ಕಣ್ಣು ಬಿದ್ದಿತ್ತು. ನಂತರ ಯಂಗ್ ಇಂಡಿಯನ್ ಕಂಪನಿ ಎಂಬ ಚಾರಿಟೆಬಲ್ ಕಂಪನಿ ಮಾಡಿ ಅದರ ಆಸ್ತಿ ಲೂಟಿ ಮಾಡಿದ್ದಾರೆ. 50 ಲಕ್ಷ ರೂ. ಕೊಟ್ಟು ನ್ಯಾಷನಲ್ ಹೆರಾಲ್ಡ್ನ ಎರಡು ಸಾವಿರ ಕೋಟಿ ತಗೆದುಕೊಂಡರು.ನ್ಯಾಷನಲ್ ಹೆರಾಲ್ಡ್‌ನ ಆಸ್ತಿಗಳಿಂದ ಬಂದ ನೂರಾರು ಕೋಟಿ ಬಾಡಿಗೆ ಹಣದ ಲೆಕ್ಕವೂ ಕೊಡಲಿಲ್ಲ. ಇದು ಕಾಂಗ್ರೆಸ್‌ನ ಪತ್ರಿಕೆ ಅಲ್ಲ, ಸ್ವಾತಂತ್ರ‍್ಯ ಹೋರಾಟಗಾರರು ಆರಂಭಿಸಿದ್ದ ಪತ್ರಿಕೆ ಎಂದು ಆಕ್ರೋಶ ಹೊರಹಾಕಿದರು.
ಸೋನಿಯಾ ಗಾಂಧಿ, ರಾಹುಲ್ ಗಾಂಧಿಗೆ ಸುಪ್ರೀಂ ಕೋರ್ಟ್‌ನಲ್ಲಿಯೂ ವಿನಾಯಿತಿ ಸಿಗಲಿಲ್ಲ. ಕೋರ್ಟ್ ಆದೇಶದ ಹಿನ್ನೆಲೆ ಈ ಪ್ರಕರಣದ ತನಿಖೆ ಇಡಿ ನಡೆಸುತ್ತಿದೆ. ಕಾಂಗ್ರೆಸ್‌ಗೆ ಲೂಟಿ ಮಾಡುವ ಅಧಿಕಾರ ಯಾರು ಕೊಟ್ಟರು? ಚಾರಿಟೆಬಲ್ ಟ್ರಸ್ಟ್ ಅಡಿ ಅವ್ಯವಹಾರ ನಡೆದರೆ ಸರ್ಕಾರ ಮಧ್ಯಪ್ರವೇಶ ಮಾಡೇ ಮಾಡುತ್ತದೆ. ಯಂಗ್ ಇಂಡಿಯನ್ ಎಂಬ ನಾಮದ ಕಂಪನಿ ಹೇಗೆ ನ್ಯಾಷನಲ್ ಹೆರಾಲ್ಡ್ ಆಸ್ತಿ ಖರೀದಿಸಿತು? ಇವರು ದೇಶದ ಆಸ್ತಿ ಲೂಟಿ ಮಾಡಿದ್ರೂ ಯಾರೂ ಕೇಳಬಾರದಾ? ಇಂದಿರಾ ಅಂದ್ರೆ ಇಂಡಿಯಾ, ಇಂಡಿಯಾದ ಆಸ್ತಿಯೆಲ್ಲ ಇಂದಿರಾ ಕುಟುಂಬಕ್ಕೆ ಸೇರಿದ್ದು ಎನ್ನುವ ಮನಸ್ಥಿತಿಯಲ್ಲಿ ಕಾಂಗ್ರೆಸ್‌ನವರಿದ್ದಾರೆ. ಇವತ್ತು ಈ ಪ್ರಕರಣ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ ಮಾಡುತ್ತಿದೆ, ಅದು ಬೂಟಾಟಿಕೆಯ ಪ್ರತಿಭಟನೆ, ಅದಕ್ಕೆ ಏನೂ ಅರ್ಥ ಇಲ್ಲ. ಕಾಂಗ್ರೆಸ್‌ಗೆ ಈಗ ರಾಹುಕಾಲವಿದೆ. ರಾಹು ಬಿಡಬೇಕಾದರೆ ಇನ್ನೂ ನೂರು ವರ್ಷ ಬೇಕು. ಎಪ್ಪತ್ತು ವರ್ಷ ಆಳ್ವಿಕೆ ನಡೆಸಿ ಲೂಟಿ ಮಾಡಿದ್ದರು. ಆಗ ಅವರ ಬಳಿಯಿದ್ದ ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಂಡರು. ಎಮರ್ಜೆನ್ಸಿ ತಂದು ಆ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಂಡಿದ್ದು ಯಾರು? ಕಾಂಗ್ರೆಸ್‌ನವರು 70 ಸಲ ಸಂವಿಧಾನಕ್ಕೆ ತಿದ್ದುಪಡಿ ತಂದು ಕಾನೂನು ಉಲ್ಲಂಘಿಸಿದ್ದರು ಎಂದು ಆಗ್ರಹಿಸಿದರು.ಇದನ್ನೂ ಓದಿ: ಅಮೆರಿಕ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ನಾಳೆ ಭಾರತಕ್ಕೆ ಭೇಟಿ – ಪ್ರಧಾನಿ ಮೋದಿಯಿಂದ ವಿಶೇಷ ಔತಣಕ್ಕೆ ಸಿದ್ಧತೆ