ಬೆಂಗಳೂರು: ಕಂದಾಯ ಸಚಿವ ಆರ್.ಅಶೋಕ್ ಮತ್ತು ಸಿಎಂ ಯಡಿಯೂರಪ್ಪ ಅವರಿಗೂ ಹೊಂದಾಣಿಕೆಯೇ ಆಗುತ್ತಿಲ್ಲ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.
ಇಂದು ಮಾಧ್ಯಮ ಸಂವಾದದಲ್ಲಿ ಮಾತನಾಡಿದ ಹೆಚ್.ಡಿ.ಕುಮಾರಸ್ವಾಮಿ, ರಾಜ್ಯದಲ್ಲಿ ಕಂದಾಯ ಸಚಿವರು ಇದ್ದಾರಾ ಎಂಬ ಪ್ರಶ್ನೆ ಮೂಡುತ್ತಿದೆ. ಕಂದಾಯ ಸಚಿವರು ಎಷ್ಟು ಜಿಲ್ಲೆಗಳಿಗೆ ಭೇಟಿ ನೀಡಿ ಸಭೆ ನಡೆಸಿದ್ದಾರೆ. ನೆರೆ ಹಾವಳಿ ಸಂದರ್ಭದಲ್ಲಿ ಕಂದಾಯ ಸಚಿವರು ಕೆಲಸ ಮಾಡಿದ್ದನ್ನು ಎಲ್ಲಿಯೂ ಕಾಣಲಿಲ್ಲ ಎಂದು ಕಿಡಿಕಾರಿದರು.
ಪ್ರಕೃತಿ ವಿಕೋಪದ ಸಮಯದಲ್ಲಿ ಸಿಎಂ ಯಡಿಯೂರಪ್ಪನವರು ಅಸಹಾಯಕರಾದರು. ಹೊಸ ಸರ್ಕಾರ ರಚನೆಯಾಗಿದ್ದರಿಂದ ಕೆಲಸ ವೇಗವನ್ನು ಪಡೆದುಕೊಳ್ಳಲಿಲ್ಲ. ಹಾಗಾಗಿ ಮುಖ್ಯಮಂತ್ರಿಗಳಿಗೆ ಸ್ವಲ್ಪ ಸಮಯ ನೀಡಬೇಕು. ಹಲವು ಅಡಚಣೆ ನಡುವೆಯೂ ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿದ್ದಾರೆ. ಪ್ರವಾಹದ ವೇಳೆ ಕೇಂದ್ರ ಸರ್ಕಾರ ನಮ್ಮ ಮುಖ್ಯಮಂತ್ರಿಗಳನ್ನ ಹೇಗೆ ನಡೆಸಿಕೊಂಡಿದೆ ಎಂಬುದನ್ನು ರಾಜ್ಯದ ಜನತೆ ನೋಡಿದ್ದಾರೆ. ಯಾರೆ ಸಿಎಂ ಆಗಿರಲಿ ಅಂತಹ ಸಂದರ್ಭದಲ್ಲಿ ನಾವು ಅವರ ವಿರುದ್ಧ ಮಾತನಾಡಬಾರದು. ನನ್ನ ಅನುಭವದ ಆದಾರದ ಮೇಲೆ ಈ ಮಾತು ಹೇಳುತ್ತಿದ್ದೇನೆ ಎಂದು ಸಿಎಂ ಪರ ಬ್ಯಾಟ್ ಬೀಸಿದರು.
ಬೆಳೆ ಪರಿಹಾರ ನೀಡಿದ್ದೇವೆ ಎಂದು ಬಿಜೆಪಿ ಸರ್ಕಾರ ಹೇಳಿಕೊಂಡಿದೆ. ಎಲ್ಲ ಮೊತ್ತವನ್ನು ಹೆಚ್ಚಳ ಮಾಡಲಾಗಿದೆ ಎಂದು ಹೇಳುತ್ತಾರೆ. ಸರ್ಕಾರ ನೀಡುತ್ತಿರುವ ರೈತ ಉಳಿಯುತ್ತಾನಾ ಎಂದು ತಿಳಿದುಕೊಳ್ಳಬೇಕು. ಪ್ರವಾಹದಿಂದ ತತ್ತರಿಸಿರುವ ರೈತರಿಗೆ ಸುಧಾರಿಸಿಕೊಳ್ಳಲು ಎರಡು ವರ್ಷವಾದ್ರೂ ಬೇಕಿದೆ. ಹಾಗಾಗಿ ಸರ್ಕಾರ ಇನ್ನು ಹೆಚ್ಚಿನ (50 ರಿಂದ 60 ಸಾವಿರ ರೂ.) ಅನುದಾನ ನೀಡಬೇಕು ಎಂದು ಹೆಚ್.ಡಿ.ಕುಮಾರಸ್ವಾಮಿ ಆಗ್ರಹಿಸಿದರು.
ಸರ್ಕಾರದ ನೂರು ದಿನದ ಜಾಹೀರಾತು ನೋಡಿದ್ದೇನೆ. ಮೀನುಗಾರರು ಹಾಗೂ ನೇಕಾರರ ಸಾಲ ಮನ್ನ ಆಗಿದೆ ಅಂತಿದೆ. ಯಾರಿಗೆ ಎಷ್ಟು ದುಡ್ಡು ಹಾಕಿದ್ದೇವೆ ಅಂತ ಅದನ್ನು ಜಾಹಿರಾತು ಹಾಕಿದ್ರೆ ಕೈ ಮುಗಿಯುತ್ತೇನೆ. ಸಾಲಮನ್ನ ಜಾಹೀರಾತಲಷ್ಟೆ ಇದೆ ಜಾರಿಯಾಗಿಲ್ಲ. ವಾಸ್ತವವಾಗಿ ಸಾಲಮನ್ನಾ ಆಗಿಲ್ಲ. ಪ್ರವಾಹ ಪೀಡಿತ ಜನರಿಗೆ 5 ಲಕ್ಷ ಹಣ ಬೇಡ. ನಮ್ಮನ್ನು ಪರ್ಮನೆಂಟಾಗಿ ಸ್ಥಳಾಂತರ ಮಾಡಿ ಎನ್ನುತ್ತಿದ್ದಾರೆ. ಆದರೆ ಸರ್ಕಾರಿ ಅಧಿಕಾರಿಗಳ ನಡುವೆಯೆ ಸಮನ್ವಯತೆ ಇಲ್ಲಾ ಸರ್ಕಾರ ಸಮರ್ಪಕವಾಗಿ ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿದರು.