ಬೆಂಗಳೂರು/ಬೆಳಗಾವಿ: ರಾಜ್ಯ ಸರ್ಕಾರವು ಗ್ಯಾರಂಟಿ ಹೆಸರಿನಲ್ಲಿ ಜನರಿಗೆ ಮೋಸ ಮಾಡುತ್ತಿದೆ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್.ಅಶೋಕ್ (R.Ashok) ಟೀಕಿಸಿದ್ದಾರೆ.
ಮಾಧ್ಯಮಗಳ ಜೊತೆ ಗುರುವಾರ ಮಾತನಾಡಿದ ಅವರು, ಫಟಾಫಟ್ ಎಂದು ಗೃಹಲಕ್ಷ್ಮಿಯ (Gruhalakshmi Scheme) 5 ಸಾವಿರ ಕೋಟಿ ಲೂಟಿ ಹೊಡೆದಿದ್ದು ನಿನ್ನೆ ಗೊತ್ತಾಗಿದೆ. ಸುಮಾರು 1.26 ಕೋಟಿ ಮನೆಯ ಗೃಹಿಣಿಯರಿಗೆ ಅದು ತಲುಪಬೇಕಿತ್ತು. ಇದರಲ್ಲಿ ಮೋಸ ಮಾಡಿದ್ದಾರೆ ಎಂದು ದೂರಿದರು. ಇದನ್ನೂ ಓದಿ: ಸದನದಲ್ಲಿ ‘ಗೃಹಲಕ್ಷ್ಮಿ’ ಗದ್ದಲ – ಬಿಜೆಪಿ, ಜೆಡಿಎಸ್ ಸದಸ್ಯರಿಂದ ಸಭಾತ್ಯಾಗ
ಶಕ್ತಿ ಯೋಜನೆಯಲ್ಲೂ ಹಣ ಬಾಕಿ ಇದೆ. ಕಾರ್ಮಿಕರು ಬೀದಿಗಿಳಿದು ಹೋರಾಡುವಂತಾಗಿದೆ. ಕಾಂಗ್ರೆಸ್ ಸರ್ಕಾರ ದಿವಾಳಿ ಆಗಿದೆ. ಸಂಬಳ ಕೊಡಲೂ ಹಣ ಇಲ್ಲ. ಆ ಪರಿಸ್ಥಿತಿ ಬಂದಿದೆ. ಕಾಂಗ್ರೆಸ್ಸಿನ ಮಾನ ಮರ್ಯಾದೆ ಬಟಾಬಯಲಾಗಿದೆ ಎಂದು ಟೀಕಿಸಿದರು.
ಹಣ ಇಲ್ಲ, ಇನ್ನೊಂದೆಡೆ ತೆರಿಗೆ ಮೇಲೆ ತೆರಿಗೆ. ಈಗ ಸ್ಟಾಂಪ್ ಡ್ಯೂಟಿ ಹೆಚ್ಚಿಸುವುದಾಗಿ ಹೇಳುತ್ತಿದ್ದಾರೆ ಎಂದು ಆಕ್ಷೇಪ ವ್ಯಕ್ತಪಡಿಸಿದರು. ಮುಂದಿನ ಬಜೆಟ್‍ನಲ್ಲಿ ಎಣ್ಣೆ ತೆಗೆದುಕೊಳ್ಳುವವರ ಮೇಲೂ ಟ್ಯಾಕ್ಸ್ ಬೀಳಲಿದೆ. ಮನೆ ತೆರಿಗೆ ಹೆಚ್ಚಿಸಲಿದ್ದಾರೆ. ನಾಗರಿಕರಿಗೆ ಕೊಡುವ ಸೌಲಭ್ಯಕ್ಕೆ ಕತ್ತರಿ ಹಾಕುವ ತುಘಲಕ್ ಸರ್ಕಾರ ಇದು ಎಂದು ದೂರಿದರು. ಇದನ್ನೂ ಓದಿ: 2 ತಿಂಗಳ ಗೃಹಲಕ್ಷ್ಮಿ ಹಣ ಬಾಕಿಯಿದೆ – ʻಪಬ್ಲಿಕ್ ಟಿವಿʼ ವರದಿ ಬಳಿಕ ಸತ್ಯ ಒಪ್ಪಿಕೊಂಡ ಲಕ್ಷ್ಮಿ ಹೆಬ್ಬಾಳ್ಕರ್

