ಚಿಕ್ಕಬಳ್ಳಾಪುರ: ಮರದ ತುಂಡುಗಳಿಂದ ಹೊಡೆದಾಡಿಕೊಂಡು, ಒರ್ವ ಸ್ಥಳದಲ್ಲೇ ಸಾವನ್ನಪ್ಪಿ, ಮತ್ತಿಬ್ಬರು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿರುವ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ.
ಜಿಲ್ಲೆಯ ಚಿಂತಾಮಣಿ ನಗರದ ಕೆನರಾ ಬ್ಯಾಂಕ್ ಮುಂಭಾಗದ ಪಾಳು ಬಿದ್ದ ಕಟ್ಟಡವೊಂದರಲ್ಲಿ ಗಲಾಟೆ ನಡೆದಿದ್ದು, 40 ವರ್ಷದ ನಟರಾಜ್ ಸಾವನ್ನಪ್ಪಿದ್ದಾನೆ. ನಟರಾಜ್ ಪತ್ನಿ ಮುನಿಲಕ್ಷ್ಮಮ್ಮ ಹಾಗೂ ರಾಮಾಂಜಿ ತೀವ್ರ ಗಾಯಗೊಂಡಿದ್ದು ಅವರನ್ನು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಶಾಂತ್‍ನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಘಟನಾ ಸ್ಥಳಕ್ಕೆ ಪ್ರಭಾರ ಎಸ್‍ಪಿ ಕಾರ್ತಿಕ್ ರೆಡ್ಡಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಘಟನೆ ಬಗ್ಗೆ ಮಾಹಿತಿ ಪಡೆದಿದ್ದಾರೆ. ಘಟನೆಗೆ ನಿಖರ ಕಾರಣ ಏನೆಂಬುದು ಇನ್ನೂ ತಿಳಿದು ಬಂದಿಲ್ಲ. ತನಿಖೆ ನಡೆಯುತ್ತಿದೆ ಎಂದು ಮಾಹಿತಿ ನೀಡಿದರು. ಈ ಕುರಿತು ಚಿಂತಾಮಣಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.