– ಶೇಕ್ ಹ್ಯಾಂಡ್ ಕಾಂಟ್ರವರ್ಸಿಗೆ ಇಂದು ಮತ್ತಷ್ಟು ಕಿಚ್ಚು
ಬೆಂಗಳೂರು/ದುಬೈ: ಏಷ್ಯಾಕಪ್‌ನಲ್ಲಿ (Asia Cup 2025) ಭಾರತ- ಪಾಕ್ (Ind VS Pak) ಇಂದು ಎರಡನೇ ಬಾರಿಗೆ ಮುಖಾಮುಖಿಯಾಗಲಿವೆ. ಇಂದು ಭಾರತ ಪಾಕ್ ನಡುವೆ ಹೈವೋಲ್ಟೇಜ್ ಸೂಪರ್ 4 ಮ್ಯಾಚ್ ನಡೆಯಲಿದೆ. ಕಳೆದ ಬಾರಿ ಭಾರೀ ಹೈಡ್ರಾಮಕ್ಕೆ ಕಾರಣವಾಗಿದ್ದ ದುಬೈ ಕ್ರೀಡಾಂಗಣದಲ್ಲೇ (Dubai Stadium) ಮತ್ತೆ ಭಾರತ-ಪಾಕ್ ಸೆಣಸಾಡಲಿದೆ. ಈ ಪಂದ್ಯಕ್ಕೂ ಮ್ಯಾಚ್ ರೆಫರಿಯಾಗಿ ಆ್ಯಂಡಿ ಪೈಕ್ರಾಫ್ಟ್ (Andy Pycroft) ಮುಂದುವರೆಯಲಿದ್ದಾರೆ ಎನ್ನಲಾಗಿದೆ.
ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಕ್ರಿಕೆಟ್ ಮೂಲಕವೂ ಪ್ರತಿಕಾರ ತೀರಿಸಿಕೊಂಡ ಭಾರತ, ಪಾಕ್ ಆಟಗಾರರಿಗೆ ಹಸ್ತಲಾಘವ ಮಾಡದೇ ಜಗತ್ತಿನ ಮುಂದೆ ಪಾಕಿಸ್ತಾನಕ್ಕೆ ತಕ್ಕ ಶಾಸ್ತಿ ಮಾಡಿತ್ತು. ಭಾರತದ ಈ ನಿರ್ಧಾರದಿಂದ ಪಾಕಿಸ್ತಾನ ಜಗತ್ತಿನ ಮುಂದೆ ಬೆತ್ತಲಾಗಿ ಅವಮಾನಕ್ಕೀಡಾಗಿತ್ತು. ಐಸಿಸಿ ನಿಯಮಗಳನ್ನ ಮ್ಯಾಚ್ ರೆಫರಿ ಉಲ್ಲಂಘಿಸಿದ್ದಾರೆ. ಭಾರತದ ಆಟಗಾರರು ಕ್ರೀಡಾ ಸ್ಫೂರ್ತಿ ಮೆರೆಯಲಿಲ್ಲ ಎಂದು ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಹಾಗೂ ಐಸಿಸಿಗೆ ದೂರು ನೀಡಿತ್ತು. ಎಲ್ಲಾ ಕಡೆಯಿಂದಲೂ ಪಾಕ್‌ಗೆ ಅವಮಾನವಾಗಿತ್ತು. ಇದೀಗ ಭಾರತದ ವಿರುದ್ಧ ಗೆದ್ದು ಬೀಗಲು ಸರ್ವಪ್ರಯತ್ನ ಮಾಡುತ್ತಿದೆ. ಆದರೆ ಭಾರತ ಮತ್ತೊಮ್ಮೆ ಪಾಕಿಸ್ತಾನಕ್ಕೆ ಬುದ್ಧಿ ಕಲಿಸಲು ತಯಾರಿ ನಡೆಸಿಕೊಂಡಿದೆ.
ದುಬೈನಲ್ಲಿ ನಡೆಯಲಿರುವ ಈ ಪಂದ್ಯದಲ್ಲಿ ಟಾಸ್ ನಿರ್ಣಾಯಕ. ಭಾರತ ಟಾಸ್ ಗೆದ್ದು ಪಾಕ್ ಬೌಲರ್‌ಗಳಿಗೆ ಬೆವರಿಳಿಸಲು ಸಜ್ಜಾಗಿದೆ. ಯಾವ್ಯಾವ ಬ್ಯಾಟರ್‌ಗಳ ಪಾತ್ರ ಏನು ಎಂಬುದನ್ನ ಲೆಕ್ಕಚಾರ ಮಾಡಿದ್ದು, ಪಂದ್ಯದ ಮೇಲೆ ಹಿಡಿತ ಸಾಧಿಸಲು ತಂಡದ ಆಟಗಾರರು ಉತ್ಸುಕರಾಗಿದ್ದಾರೆ. ಭಾರತದ ಈ ಸ್ಟ್ರಾಟಜಿಗೆ ಪಾಕ್‌ನ ಆಟಗಾರರು ಕೂಡ ಸೇಡು ತೀರಿಸಿಕೊಳ್ಳಲು ಕಾಯುತ್ತಿದ್ದಾರೆ.