ಹೆಚ್.ಎಸ್.ನಾಗಶ್ರೀ ಅವರು ನಿರ್ಮಿಸಿರುವ ನೂತನ ಚಿತ್ರ ಪ್ಯಾರ್ (Pyaar Movie). ಈ ಚಿತ್ರದಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್ (Ravichandran) ಅವರು ನಾಯಕಿಯ ತಂದೆಯಾಗಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ರಿಶ್ವಿನ್, ರಾಶಿಕಾ ಶೆಟ್ಟಿ ನಾಯಕ, ನಾಯಕಿಯಾಗಿ ಬಣ್ಣ ಹಚ್ಚಿದ್ದಾರೆ. ಚಿತ್ರಕ್ಕೆ ಎಸ್.ಸುಪ್ರೀತ್ ಕಥೆ, ಚಿತ್ರಕಥೆ ಬರೆದು ಅ್ಯಕ್ಷನ್ ಕಟ್ ಹೇಳಿದ್ದಾರೆ. ಆ್ಯನ್ ಎಮೋಷನಲ್ ಜರ್ನಿ ಆಫ್ ಲವ್ ಎಂಬ ಅಡಿಬರಹ ಈ ಚಿತ್ರಕ್ಕಿದೆ. ಈಗಾಗಲೇ ರಿಲೀಸಾಗಿ, ಸಂಗೀತ ಪ್ರಿಯರ ಮನ ಗೆದ್ದಿರುವ ‘ಒಂದೇ ಮಾತಲಿ ಹೇಳೋದಾದರೆ’ ಎಂಬ ಹಾಡಿನ ಸುಂದರ ವೀಡಿಯೋ ಇನ್‌ಸ್ಟಾಗ್ರಾಂನಲ್ಲಿ 100 ಮಿಲಿಯನ್‌ಗೂ ಹೆಚ್ಚು ವೀಕ್ಷಣೆಯಾಗಿದೆ. ಅಲ್ಲದೇ, ಮಿಲಿಯನ್ ಪ್ಲಸ್ ವ್ಯೂವ್ಸ್ ಆಗಿದೆ. ಪಳನಿ ಡಿ.ಸೇನಾಪತಿ ಅವರ ಸಂಗೀತ, ಕೆ.ಎಸ್.ಚಂದ್ರಶೇಖರ್ ಅವರ ಕ್ಯಾಮೆರಾದಲ್ಲಿ ಲಡಾಕ್‌ನ ರಮಣೀಯ ಪರಿಸರದಲ್ಲಿ ಈ ಹಾಡನ್ನು ಸೆರೆ ಹಿಡಿಯಲಾಗಿದೆ. ಇತ್ತೀಚೆಗೆ ನಡೆದ ಪತ್ರಿಕಾಗೋಷ್ಠಿಯಲ್ಲಿ ಈ ಹಾಡಿನ ಯಶಸ್ಸಿನ ಖುಷಿಯನ್ನು ಚಿತ್ರತಂಡ ಮಾಧ್ಯಮದೊಂದಿಗೆ ಹಂಚಿಕೊಂಡಿತು.
ಮೊದಲಿಗೆ ಈ ಚಿತ್ರಕ್ಕೆ ಬೆನ್ನೆಲುಬಾಗಿ ನಿಂತಿರುವ ಡಾ. ಬಿ.ಎಸ್.ನಾಗರಾಜು ಮಾತನಾಡುತ್ತ ಲಡಾಕ್, ಕಾಶ್ಮೀರ, ಜೈಸಲ್ಮೇರ್‌ನಲ್ಲಿ ಶೂಟ್ ಮಾಡಲಾಗಿರುವ ಈ ಹಾಡು ಅದ್ಭುತವಾಗಿ ಮೂಡಿಬಂದಿದೆ ಎಂದರು. ನಿರ್ದೇಶಕ ಸುಪ್ರೀತ್ ಮಾತನಾಡುತ್ತ ನಮ್ಮ ಚಿತ್ರದಲ್ಲಿ ರವಿ ಸರ್ ಅಭಿನಯಿಸಲು ಒಪ್ಪಿದಾಗ ಈ ಟೈಟಲ್ ಇಟ್ಟಿದ್ದಕ್ಕೂ ಸಾರ್ಥಕ ಎನಿಸಿತು. ಪ್ರೀತಿ-ಪ್ರೇಮದ ಕಥೆಯ ಜತೆಗೆ ತಂದೆ ಮಗಳ ನಡುವಿನ ಭಾವನಾತ್ಮಕ ಸಂಬಂಧವನ್ನೂ ತೆರೆದಿಡುವಂಥ ವಿಭಿನ್ನ ಕಾನ್ಸೆಪ್ಟ್ ನಮ್ಮ ಚಿತ್ರದಲ್ಲಿದೆ. ಕಥೆ ಮಾಡಿಕೊಂಡ ಮೇಲೆ ಮುಖ್ಯವಾಗಿ ಗಮನ ಹರಿಸಿದ್ದೇ ಹಾಡುಗಳ ಮೇಲೆ. 7 ವರ್ಷಗಳ ನಂತರ ಈ ಹಾಡನ್ನು ಸೋನು ನಿಗಂ, ಶ್ರೇಯಾ ಘೋಷಾಲ್ ಅದ್ಭುತವಾಗಿ ಹಾಡಿದ್ದಾರೆ. ಇದನ್ನೂ ಓದಿ: ಟಾಕ್ಸಿಕ್ ಟೀಮ್‌ನಿಂದ ನಯನತಾರಾ ಪಾತ್ರದ ಫಸ್ಟ್ ಲುಕ್ ರಿಲೀಸ್
ಉತ್ತರ ಭಾರತದ ಕಾಶ್ಮೀರದಲ್ಲಿ ತುಂಬಾ ಎತ್ತರದ ಲೊಕೇಶನ್‌ನಲ್ಲಿ 4 ದಿನ ಶೂಟ್ ಮಾಡಿದ್ದೇವೆ. ನಿರ್ಮಾಪಕರು ಯಾವುದಕ್ಕೂ ಬೇಡ ಎನ್ನದೆ ಧಾರಾಳವಾಗಿ ಖರ್ಚು ಮಾಡಿದ್ದಾರೆ. ರಾಜಸ್ಥಾನ, ಅಂಡಮಾನ್ ದ್ವೀಪ ಅಲ್ಲದೆ ಮಂಗಳೂರು, ಚಿಕ್ಕಮಗಳೂರು, ಮೈಸೂರು ಹಾಗೂ ಬೆಂಗಳೂರು ಸುತ್ತಮುತ್ತ ಚಿತ್ರೀಕರಣ ಮಾಡಿದ್ದೇವೆ. ತಂದೆ-ಮಗಳ ನಡುವಿನ ಬಾಂಧವ್ಯ ಯಾವ ಮಟ್ಟಕ್ಕೆ ತಗೊಂಡು ಹೋಗಬಹುದು, ತಂದೆಗೋಸ್ಕರ ಮಗಳು ಯಾವ ರೀತಿ ಪ್ರಾಣವನ್ನೇ ಮುಡಿಪಾಗಿಡುತ್ತಾಳೆ ಅಂತ ಚಿತ್ರದಲ್ಲಿ ಹೇಳಿದ್ದೇವೆ. ಸಿನಿಮಾ ತುಂಬಾ ಚೆನ್ನಾಗಿ ಬಂದಿದೆ ಎಂದು ಹೇಳಿದರು. ನಾಯಕ ರಿತ್ವಿಕ ಮಾತನಾಡಿ, ಈ ಹಾಡನ್ನು ಯಾವಾಗ ಶೂಟ್ ಮಾಡ್ತಿವೋ ಎಂಬ ಕುತೂಹಲವಿತ್ತು. ಒಂದು ಸಿನಿಮಾಗೆ ಹಾಡೇ ಆಹ್ವಾನ ಇದ್ದಹಾಗೆ ಎಂದು ಹೇಳಿದರು.
ಸದ್ಯ ನಾಯಕಿ ರಾಶಿಕಾ ಶೆಟ್ಟಿ ಬಿಗ್ ಬಾಸ್ ಮನೆಯಲ್ಲಿದ್ದಾರೆ. ಸಂಗೀತ ಸಂಯೋಜಕ ಪಳನಿ ಡಿ.ಸೇನಾಪತಿ ಮಾತನಾಡಿ, ಒಂದೇ ಮಾತಲಿ ಲೈನ್ ಕೊಟ್ಟಿದ್ದೇ ನಿರ್ದೇಶಕರು. ಇದನ್ನು ನಾಗೇಂದ್ರ ಪ್ರಸಾದ್ ಕೈಲಿ ಬರೆಸಿದರೆ ಚೆನ್ನಾಗಿರುತ್ತೆ ಅಂತ ಬರೆಸಿದೆವು. ಮ್ಯೂಸಿಕ್ ಲವರ್ಸ್‌ಗೆ ಈ ಹಾಡು ತುಂಬಾ ಇಷ್ಟವಾಗಿದೆ. ಹಂಸಲೇಖ ಅವರು ಹಾಡನ್ನು ಕೇಳಿ ವ್ಹಾವ್ ಎಂದು ಪ್ರತಿಕ್ರಿಯಿಸಿದರು. ಉಳಿದ ಹಾಡುಗಳು ಇದಕ್ಕಿಂತ ಚೆನ್ನಾಗಿ ಬಂದಿವೆ ಎಂದು ಹೇಳಿದರು. ಈ ಚಿತ್ರದ ‘ಒಂದೇ ಮಾತಲ್ಲಿ ಹೇಳೋದಾದರೆ’ ಎಂಬ ಹಾಡಿಗೆ ಬಾಲಿವುಡ್ ಗಾಯಕಿ ಶ್ರೇಯಾ ಘೋಷಾಲ್ ದನಿಯಾಗಿದ್ದಾರೆ. ಸೋನು ನಿಗಮ್, ಕುನಾಲ್ ಗಾಂಜಾವಾಲ, ವಿಜಯಪ್ರಕಾಶ್, ರಾಜೇಶ್ ಕೃಷ್ಣನ್ ಹಾಗೂ ಪಲಕ್ ಮಚ್ಚಲ್ ಕೂಡ ಚಿತ್ರದಲ್ಲಿ ಹಾಡಿದ್ದಾರೆ. ಹಿರಿಯ ನಟ ಶ್ರೀನಿವಾಸ ಮೂರ್ತಿ, ವಿಜಯ ಸೂರ್ಯ, ಶಂಕರ್ ಅಶ್ವಥ್ ಉಳಿದ ಪಾತ್ರವರ್ಗದಲ್ಲಿದ್ದಾರೆ. ಇದನ್ನೂ ಓದಿ: ಹೊಸ ವರ್ಷಕ್ಕೆ ಹೊಸ ಸಂಗೀತ ಸ್ಪರ್ಶ: ನ್ಯೂ ಇಯರ್ ಆಲ್ಬಂ


