ಹೈದರಾಬಾದ್: ಪುಷ್ಪ-2 (Pushpa 2) ಸಿನಿಮಾ ಪ್ರೀಮಿಯರ್ ಶೋ ವೇಳೆ ಕಾಲ್ತುಳಿತಕ್ಕೆ ಮಹಿಳೆ ಸಾವನ್ನಪ್ಪಲು ನಟ ಅಲ್ಲು ಅರ್ಜುನ್ (Allu Arjun) ಕಾರಣ ಎಂದು ತೆಲಂಗಾಣ ಸಿಎಂ ರೇವಂತ್ ರೆಡ್ಡಿ (Revanth Reddy) ಆರೋಪ ಮಾಡಿದ್ದಾರೆ.
ಪೊಲೀಸರು ಅನುಮತಿ ನಿರಾಕರಿಸಿದ್ದರೂ ತೆಲುಗು ನಟ ಅಲ್ಲು ಅರ್ಜುನ್ ಡಿ.4 ರಂದು ತಮ್ಮ ಚಿತ್ರ ಪುಷ್ಪ-2 ಪ್ರದರ್ಶನಕ್ಕೆ ಹಾಜರಾಗಿದ್ದರು. ಕಾರ್ಯಕ್ರಮದ ವೇಳೆ ಕಾಲ್ತುಳಿತದಲ್ಲಿ ಮಹಿಳೆಯೊಬ್ಬರು ಸಾವನ್ನಪ್ಪಿದ ನಂತರವೂ ಅಲ್ಲು ಅರ್ಜುನ್ ಅವರನ್ನು ಪೊಲೀಸರು ಬಲವಂತವಾಗಿ ಹೊರಗೆ ಕಳುಹಿಸುವವರೆಗೂ ಚಿತ್ರಮಂದಿರದಿಂದ ಹೊರಬರಲಿಲ್ಲ ಎಂದು ರೆಡ್ಡಿ ಆರೋಪಿಸಿದ್ದಾರೆ. ಇದನ್ನೂ ಓದಿ: ‘ಪುಷ್ಪ 2’ ಕಾಲ್ತುಳಿತ ಪ್ರಕರಣ: 9 ವರ್ಷದ ಬಾಲಕನ ಬ್ರೈನ್ ಡೆಡ್
ಎಐಎಂಐಎಂ ಶಾಸಕ ಅಕ್ಬರುದ್ದೀನ್ ಓವೈಸಿ ಅವರು ವಿಧಾನಸಭೆಯಲ್ಲಿ ವಿಷಯವನ್ನು ಪ್ರಸ್ತಾಪಿಸಿದ ನಂತರ ರೆಡ್ಡಿ ಅವರು ಈ ಹೇಳಿಕೆ ನೀಡಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವೀಡಿಯೋಗಳನ್ನು ಉಲ್ಲೇಖಿಸಿದ ರೆಡ್ಡಿ, ಅಲ್ಲು ಅರ್ಜುನ್ ದೊಡ್ಡ ಜನಸ್ತೋಮವಿದ್ದರೂ ರೋಡ್‌ಶೋ ನಡೆಸಿ ಜನರತ್ತ ಕೈ ಬೀಸಿದ್ದು ಗೊಂದಲಕ್ಕೆ ಕಾರಣವಾಯಿತು ಎಂದು ಟೀಕಿಸಿದ್ದಾರೆ.
ನಟ ಮತ್ತು ಇತರರ ಭೇಟಿಗೆ ಭದ್ರತೆ ಕೋರಿ ಥಿಯೇಟರ್ ಆಡಳಿತವು ಡಿ.2 ರಂದು ಪೊಲೀಸರಿಗೆ ಮನವಿ ಸಲ್ಲಿಸಿತ್ತು. ಆದರೆ, ಜನಸಂದಣಿಯನ್ನು ನಿರ್ವಹಿಸುವ ಆತಂಕದಿಂದಾಗಿ ಪೊಲೀಸರು ವಿನಂತಿಯನ್ನು ತಿರಸ್ಕರಿಸಿದ್ದರು ಎಂದು ಸಿಎಂ ತಿಳಿಸಿದ್ದಾರೆ. ಇದನ್ನೂ ಓದಿ: ‘ಪುಷ್ಪ 2’ ನಟ ಅಲ್ಲು ಅರ್ಜುನ್ ಜೈಲಿಂದ ರಿಲೀಸ್ – ಜೈಲಲ್ಲಿ ಒಂದು ರಾತ್ರಿ ಕಳೆದ ಸ್ಟಾರ್
ಅಲ್ಲು ಅರ್ಜುನ್ ಬಂಧನದ ನಂತರ ಅವರ ನಿವಾಸಕ್ಕೆ ಭೇಟಿ ನೀಡಿದ ಚಿತ್ರರಂಗದ ಗಣ್ಯರ ವಿರುದ್ಧವೂ ಸಿಎಂ ಕಿಡಿಕಾರಿದ್ದಾರೆ. ಆದರೆ, ಘಟನೆಯಲ್ಲಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಬಾಲಕನ ವಿಚಾರದಲ್ಲಿ ಯಾರೂ ಸಹ ನಟನಿಗೆ ತೋರಿದ ಅನುಕಂಪ ತೋರಲಿಲ್ಲ ಎಂದು ಕಿಡಿಕಾರಿದ್ದಾರೆ.