ನನ್ನನ್ನು ತೆಗೆದು ಸಿಎಂ ಆಗಲು ಸಿಧು ಪ್ರಯತ್ನ: ಅಮರೀಂದರ್ ಸಿಂಗ್

Public TV
1 Min Read
amrinder sidhu

ಚಂಢೀಗಢ: ಪಂಜಾಬ್ ಸಿಎಂ ಮತ್ತು ಸಚಿವ ನವಜೋತ್ ಸಿಂಗ್ ಸಿಧು ನಡುವೆ ಎಲ್ಲವೂ ಸರಿ ಇಲ್ಲ ಎಂಬುವುದು ಪದೇ ಪದೇ ಸಾಬೀತಾಗುತ್ತಿದೆ. ನನ್ನನ್ನು ಪಕ್ಕಕ್ಕೆ ಸರಿಸಿ ನವಜೋತ್ ಸಿಂಗ್ ಸಿಧು ಮುಖ್ಯಮಂತ್ರಿಯಾಗಲು ಪ್ರಯತ್ನಿಸುತ್ತಿದ್ದಾರೆ ಎಂದು ಪಂಜಾಬ್ ಸಿಎಂ ಕ್ಯಾಪ್ಟನ್ ಅಮರೀಂದರ್ ಸಿಂಗ್ ಗಂಭೀರ ಆರೋಪ ಮಾಡಿದ್ದಾರೆ.

CAPT amrinder singh

ಪಂಜಾಬಿನ 13 ಲೋಕಸಭಾ ಕ್ಷೇತ್ರಗಳಲ್ಲಿ ಇಂದು ಮತದಾನ ನಡೆಯುತ್ತಿದೆ. ಪಟಿಯಾಲಾದ ಮತಗಟ್ಟೆ 89ರಲ್ಲಿ ಮತದಾನ ಮಾಡಿದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಸಿಎಂ, ನವಜೋತ್ ಸಿಂಗ್ ಸಿಧು ಜೊತೆ ಯಾವುದೇ ವೈರತ್ವವಿಲ್ಲ. ಅವರೊಬ್ಬ ಮಹತ್ವಾಕಾಂಕ್ಷೆಯ ನಾಯಕರಾದ್ರೆ ತಪ್ಪೇನು? ಜನರು ಮಹತ್ವಾಕಾಂಕ್ಷೆಯಿಂದ ಬದುಕಬೇಕು ಎಂಬುವುದು ನನ್ನ ವಾದ. ಬಾಲ್ಯದಿಂದಲೂ ಸಿಧು ಅವರನ್ನ ನಾನು ಬಲ್ಲೆ. ನಮ್ಮಿಬ್ಬರ ಮಧ್ಯೆ ವೈಯಕ್ತಿಕ ವಿಚಾರಗಳಿಗೆ ಸಂಬಂಧಿಸಿದಂತೆ ಭಿನ್ನಾಭಿಪ್ರಾಯಗಳಿಲ್ಲ. ಬಹುಶಃ ನನ್ನನ್ನು ಬದಿಗೆ ತಂದು ಮುಖ್ಯಮಂತ್ರಿಯಾಗುವ ಆಸೆಯನ್ನು ಹೊಂದಿದ್ದಾರೆ ಎಂದು ತಿಳಿಸಿದರು.

Navjot Singh Sidhu

ಈ ಬಾರಿಯ ಲೋಕಸಭಾ ಚುನಾವಣೆ ಸಿಧು ತಮ್ಮ ಪತ್ನಿಗೆ ಟಿಕೆಟ್ ನೀಡಬೇಕೆಂದು ಪಕ್ಷದ ಮುಖಂಡರ ಮುಂದೆ ಮನವಿ ಮಾಡಿಕೊಂಡಿದ್ದರು. ಆದ್ರೆ ಪಕ್ಷ ನವಜೋತ್ ಕೌರ್ ಅವರಿಗೆ ಟಿಕೆಟ್ ನೀಡಿರಲಿಲ್ಲ. ಟಿಕೆಟ್ ಸಿಗದ ಹಿನ್ನೆಲೆಯಲ್ಲಿ ನವಜೋತ್ ಕೌರ ಬಹಿರಂಗವಾಗಿಯೇ ಸಿಎಂ ವಿರುದ್ಧ ಅಸಮಾಧಾನ ಹೊರಹಾಕಿದ್ದರು. ಇತ್ತ ಸಿಧು ಸಹ ಪತ್ನಿಯ ಹೇಳಿಕೆಯನ್ನು ಸಮರ್ಥಿಸಿಕೊಂಡು ಸಿಎಂಗೆ ಪರೋಕ್ಷವಾಗಿ ಟಾಂಗ್ ನೀಡಿದ್ದರು. ಅಂದಿನಿಂದ ಇಬ್ಬರ ನಡುವೆ ಶೀತಲ ಸಮರ ನಡೆಯುತ್ತಿದೆ.

sidhu wife

13 ಲೋಕಸಭಾ ಕ್ಷೇತ್ರಗಳಲ್ಲಿ ಶಾಂತಿಯುತವಾಗಿ ಮತದಾನ ನಡೆಯುತ್ತಿದೆ. ಗಲಾಟೆಯಲ್ಲಿ ಓರ್ವ ವ್ಯಕ್ತಿ ಸಾವನ್ನಪ್ಪಿದ್ದರ ಮಾಹಿತಿ ಲಭ್ಯವಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ. ಚುನಾವಣೆಯಲ್ಲಿ ಬಿಜೆಪಿ ಮತ್ತು ಅಕಾಲಿದಳ ನಾಯಕರು ಶಾಂತಿ ಕಾಪಾಡುವಂತೆ ಕಾರ್ಯಕರ್ತರಲ್ಲಿ ಮನವಿ ಮಾಡಿಕೊಂಡಿದ್ದಾರೆ.

Share This Article