ಚಂಡೀಗಢ: ಕೇಂದ್ರದ ಅಗ್ನಿಪಥ್ ರಕ್ಷಣಾ ನೇಮಕಾತಿ ಯೋಜನೆಯ ವಿರುದ್ಧ ಪಂಜಾಬ್ ವಿಧಾನಸಭೆ ಗುರುವಾರ ನಿರ್ಣಯ ಅಂಗೀಕರಿಸಿದೆ.
ಅಗ್ನಿಪಥ್ ವಿರೋಧಿ ನಿರ್ಣಯವನ್ನು ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಸದನದಲ್ಲಿ ಮಂಡಿಸಿದ್ದು, ಶೀಘ್ರದಲ್ಲೇ ಇದನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಅವರೊಂದಿಗೆ ಪ್ರಸ್ತಾಪಿಸಲಾಗುವುದು ಎಂದು ತಿಳಿಸಿದ್ದಾರೆ. ಈ ನಿರ್ಣಯವನ್ನು ಬಿಜೆಪಿಯ ಶಾಸಕರಾದ ಅಶ್ವಿನಿ ಶರ್ಮಾ ಹಾಗೂ ಜಂಗಿ ಲಾಲ್ ಮಹಾಜನ್ ವಿರೋಧಿಸಿದ್ದಾರೆ.
ಕೇಂದ್ರದ ಅಗ್ನಿಪಥ್ ಯೋಜನೆಯನ್ನು ಟೀಕಿಸಿದ ಮಾನ್, ಈ ಯೋಜನೆ ದೇಶದ ಯುವಜನತೆಗೆ ವಿರುದ್ಧವಾಗಿದೆ ಎಂದು ಹೇಳಿದ್ದಾರೆ. ಅಗ್ನಿಪಥ್ ಯೋಜನೆಯನ್ನು ಹಿಂಪಡೆಯಬೇಕು ಎಂದು ವಿರೋಧ ಪಕ್ಷದ ನಾಯಕ ಹಾಗೂ ಕಾಂಗ್ರೆಸ್ ಶಾಸಕ ಪ್ರತಾಪ್ ಸಿಂಗ್ ಬಾಜ್ವಾ ಆಗ್ರಹಿಸಿದ್ದಾರೆ. ಶಿರೋಮಣಿ ಅಕಾಲಿ ದಳದ ಶಾಸಕ ಮನ್‌ಪ್ರೀತ್ ಸಿಂಗ್ ಅಯಾಲಿಯೂ ಈ ನಿರ್ಣಯವನ್ನು ಬೆಂಬಲಿಸಿದ್ದು, ಯೋಜನೆಯನ್ನು ಹಿಂತೆಗೆದುಕೊಳ್ಳುವಂತೆ ಒತ್ತಾಯಿಸಿದ್ದಾರೆ. ಇದನ್ನೂ ಓದಿ: ರಾಷ್ಟ್ರಪತಿ ಚುನಾವಣೆ: 107 ನಾಮಪತ್ರ ತಿರಸ್ಕೃತ, ದ್ರೌಪದಿ ಮುರ್ಮು, ಸಿನ್ಹಾ ಇಬ್ಬರಲ್ಲಿ ಪೈಪೋಟಿ
ನಿರ್ಣಯದ ಪ್ರಕಾರ, ಅಗ್ನಿಪಥ್ ಯೋಜನೆಯನ್ನು ತಕ್ಷಣವೇ ಹಿಂತೆಗೆದುಕೊಳ್ಳುವ ಸಲುವಾಗಿ ಕೇಂದ್ರ ಸರ್ಕಾರದೊಂದಿಗೆ ಚರ್ಚಿಸುವಂತೆ ಸದನ ರಾಜ್ಯ ಸರ್ಕಾರಕ್ಕೆ ಶಿಫಾರಸು ಮಾಡಿದೆ. ಭಾರತ ಸರ್ಕಾರದ ಅಗ್ನಿಪಥ್ ಯೋಜನೆಯ ವಿರುದ್ಧವಾಗಿ ಪಂಜಾಬ್ ಸೇರಿದಂತೆ ಬಹುತೇಕ ಎಲ್ಲಾ ರಾಜ್ಯಗಳಲ್ಲಿ ವ್ಯಾಪಕ ಪ್ರತಿಕ್ರಿಯೆಗಳು ನಡೆದಿವೆ ಎಂದು ಮಾನ್ ತಿಳಿಸಿದ್ದಾರೆ.
ಯುವಕರಿಗೆ ಕೇವಲ 4 ವರ್ಷಗಳ ವರೆಗೆ ಮಾತ್ರವೇ ಸೇನೆಯಲ್ಲಿ ಉದ್ಯೋಗ ನೀಡಲಾಗುವುದು. ಬಳಿಕ ಅದರಲ್ಲಿ ಕೇವಲ ಶೇ.25 ರಷ್ಟು ಅಗ್ನಿವೀರರನ್ನು ಸೇನೆಯಲ್ಲಿ ಉಳಿಸಿಕೊಳ್ಳಲಾಗುವುದು. ಈ ಯೋಜನೆ ರಾಷ್ಟ್ರೀಯ ಭದ್ರತೆ ಅಥವಾ ದೇಶದ ಯುವಕರ ಹಿತದೃಷ್ಟಿಯಿಂದ ಮಾಡಲಾಗಿಲ್ಲ. ಈ ಯೋಜನೆ ಸೇನೆಯಲ್ಲಿ ದೀರ್ಘಕಾಲದ ವರೆಗೆ ಸೇವೆ ಸಲ್ಲಿಸಲು ಬಯಸುವ ಯುವಕರಿಗೆ ಅಸಮಾಧಾನ ಉಂಟು ಮಾಡುವ ಸಾಧ್ಯತೆ ಇದೆ ಎಂದು ಹೇಳಿದರು. ಇದನ್ನೂ ಓದಿ: ಏಕನಾಥ್ ಶಿಂಧೆ ಸಿಎಂ – ನಾನು ಸರ್ಕಾರದಲ್ಲಿ ಇರಲ್ಲ ಎಂದ ಫಡ್ನವೀಸ್