ಬೆಂಗಳೂರು: ಸೂರಜ್ ರೇವಣ್ಣ ಸಾಗರಿಕರ ಆರಕ್ಷತಾ ಸಮಾರಂಭದಲ್ಲಿ ಮಾಜಿ ಪಿಎಂ, ಮಾಜಿ ಸಿಎಂ ಹಾಗೂ ಹಾಲಿ ಸಿಎಂರ ಸಮಾಗಮಕ್ಕೆ ಸಾಕ್ಷಿಯಾಗಿತ್ತು. ಸಿಎಂ ಸಿದ್ದರಾಮಯ್ಯ ಮತ್ತು ಮಾಜಿ ಸಿಎಂ ಯಡಿಯೂರಪ್ಪ ಒಂದೇ ಸಮಯಕ್ಕೆ ಆರಕ್ಷತೆಗೆ ಆಗಮಿಸಿದ್ದು, ಯಡಿಯೂರಪ್ಪ ಸಿಎಂ ಸಿದ್ದರಾಮಯ್ಯರಿಗೆ ಹಸ್ತಲಾಘವ ಮಾಡಿದ್ದು ವಿಶೇಷವಾಗಿತ್ತು.
ಮಾಜಿ ಪ್ರಧಾನ ಮಂತ್ರಿ ಹೆಚ್.ಡಿ ದೇವೇಗೌಡರ ಮೊಮ್ಮಗ, ಮಾಜಿ ಸಚಿವ ಎಚ್.ಡಿ ರೇವಣ್ಣ ಹಾಗೂ ಭವಾನಿ ರೇವಣ್ಣ ದಂಪತಿಯ ದ್ವಿತೀಯ ಪುತ್ರ ಡಾ. ಸೂರಜ್ ರೇವಣ್ಣ ಮತ್ತು ಸಾಗರಿಕರ ವಿವಾಹ ಆರತಕ್ಷತೆ ಭಾನುವಾರ ಬೆಂಗಳೂರಿನ ಪ್ಯಾಲೇಸ್ ಗ್ರೌಂಡ್ ನಲ್ಲಿ ಅದ್ದೂರಿಯಾಗಿ ನಡೆಯಿತು.
ಈ ನವ ಜೋಡಿಗೆ ಶುಭ ಕೋರಲು ಗಣ್ಯರ ದಂಡೆ ಆಗಮಿಸಿತ್ತು. ಸ್ಯಾಂಡಲ್ ವುಡ್ ನಟರಾದ ಪುನೀತ್ ರಾಜ್ ಕುಮಾರ್, ಉಪೇಂದ್ರ, ಚಂದನ್ ಶೆಟ್ಟಿ ಮತ್ತಿತರ ತಾರೆಯರು ಸಹ ಆಗಮಿಸಿ ನವ ವಧು ವರನ್ನ ಹರಸಿ ಹಾರೈಸಿದ್ದರು.
ಸಿಎಂ ಸಿದ್ದರಾಮಯ್ಯ, ಮಾಜಿ ಸಿಎಂ ಯಡಿಯೂರಪ್ಪ, ಗೃಹ ಸಚಿವ ರಾಮಲಿಂಗಾ ರೆಡ್ಡಿ, ಕೆಪಿಸಿಸಿ ಅಧ್ಯಕ್ಷ ಜಿ. ಪರಮೇಶ್ವರ್, ಬಿಜೆಪಿ ನಾಯಕರಾದ ಅನಂತ ಕುಮಾರ್, ಸದಾನಂದ ಗೌಡ, ಶೋಭ ಕರಂದ್ಲಾಜೆ, ಜಗದೀಶ್ ಶೆಟ್ಟರ್, ಸೇರಿದಂತೆ ರಾಜಕೀಯ ನಾಯಕರು ಆಗಮಿಸಿದ್ದರು.
ಭಾನುವಾರ ಬೆಂಗಳೂರಿನ ಅರಮನೆ ಮೈದಾನದಲ್ಲಿ ಮಾಜಿ ಸಚಿವ ಹೆಚ್.ಡಿ. ರೇವಣ್ಣರ ಮಗ ಸೂರಜ್‍ಗೌಡ ಆರತಕ್ಷತೆ ನಡೆಯಿತ್ತು. ಹೀಗಾಗಿ ಟ್ರಾಫಿಕ್ ವಿಭಾಗದ ಹೆಚ್ಚುವರಿ ಆಯುಕ್ತ ಆರ್. ಹಿತೇಂದ್ರ ಟ್ವಿಟ್ಟರ್ ಮೂಲಕ ಸಾರ್ವಜನಿಕರು ಸಂಚಾರಕ್ಕೆ ಬೇರೆ ಮಾರ್ಗ ನೋಡಿಕೊಳ್ಳಿ ಎಂದು ಹೇಳಿದ್ದರು.
ಪ್ಯಾಲೇಸ್ ಗ್ರೌಂಡ್ ನಲ್ಲಿ ಹೈ ಪ್ರೋಫೈಲ್ ಆರತಕ್ಷತೆ ಕಾರ್ಯಕ್ರಮವಿದೆ. ಸಂಜೆ 6 ಗಂಟೆಯಿಂದ ರಾತ್ರಿ 10 ಗಂಟೆಯವರೆಗೆ ಟ್ರಾಫಿಕ್ ಸಮಸ್ಯೆಯುಂಟಾಗುತ್ತದೆ. ಹಾಗಾಗಿ ವಾಹನ ಸವಾರರು ಮಾರ್ಗ ಬದಲಾವಣೆ ಮಾಡಿಕೊಂಡರೆ ಸೂಕ್ತ ಎಂದು ಆರ್. ಹಿತೇಂದ್ರ ಟ್ವಿಟ್ಟರ್ ನಲ್ಲಿ ಬರೆದುಕೊಂಡಿದ್ದರು. ಇದನ್ನೂ ಓದಿ: ಮಾಜಿ ಸಚಿವರ ಮಗನ ಆರತಕ್ಷತೆಗಾಗಿ ಬೇರೆ ಮಾರ್ಗ ನೋಡ್ಕೊಳ್ಳಿ ಅಂದ್ರು ಟ್ರಾಫಿಕ್ ವಿಭಾಗದ ಹೆಚ್ಚುವರಿ ಆಯುಕ್ತ!