ಕೊಪ್ಪಳ: ವ್ಯನ್ಯಜೀವ ಸಂಕುಲದ ಬಗ್ಗೆ ಸಾಕ್ಷ್ಯಚಿತ್ರ ಮಾಡಬೇಕೆಂಬ ಹೆಬ್ಬಯಕೆ ಹೊಂದಿದ್ದ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್, ಕಳೆದ 2 ತಿಂಗಳ ಹಿಂದಷ್ಟೇ ತುಂಗಭದ್ರಾ ನದಿ ತೀರದ ಸುತ್ತ ಸಾಕಷ್ಟು ಸುತ್ತಾಡಿದ್ದಾರೆ. ಈ ವೇಳೆ ಅಲ್ಲಿನ ಕೆಲ ಹೋಟೆಲ್‍ಗಳಿಗೆ ಅನಿರೀಕ್ಷಿತ ಭೇಟಿ ನೀಡಿದ್ದ ಪುನೀತ್, ಅಲ್ಲಿ ತಮ್ಮ ನೆನಪಿನ ಬುತ್ತಿ ಬಿಟ್ಟಿದ್ದಾರೆ. ಅಪ್ಪು ಅಗಲಿಕೆ ಹಿನ್ನೆಲೆಯಲ್ಲಿ ಅಲ್ಲಿನ ಜನ ಈಗ ಅವರ ನೆನಪುಗಳನ್ನು ಮೆಲಕು ಹಾಕುತ್ತಿದ್ದಾರೆ.
Advertisement
ಅಕಾಲಿಕವಾಗಿ ನಿಧನರಾಗಿ ಕನ್ನಡಿಗರ ಕಣ್ಣು ಹೊದ್ದೆ ಮಾಡಿರೋ ಪುನೀತ್ ಕೇವಲ ನಟನಲ್ಲ. ವನ್ಯಜೀವಿ ಸಂಕುಲ ಮತ್ತು ನೈಸರ್ಗಿಕ ಫೋಟೋಗ್ರಾಫಿ ಬಗ್ಗೆ ಸಾಕಷ್ಟು ಆಸಕ್ತಿ ಹೊಂದಿದ್ದ ವನ್ಯಜೀವಿ ಪ್ರೇಮಿ. ಈ ಕಾರಣಕ್ಕೆ ಕಳೆದ ಸೆಪ್ಟೆಂಬರ್ 5 ರಂದು ಕೊಪ್ಪಳ ಜಿಲ್ಲೆ ಗಂಗಾವತಿ ತಾಲೂಕಿನ ವ್ಯಾಪ್ತಿಯ ತುಂಗಭದ್ರಾ ನದಿ ತೀರದಲ್ಲಿ ಕಾಲ ಕಳೆದು, ವನ್ಯಜೀವಿ ಸಾಕ್ಷ್ಯಚಿತ್ರ ತೆರೆಯಲು ಮುಂದಾಗಿದ್ದರು. ಇದನ್ನೂ ಓದಿ: ಬೆಟ್ಟದ ಹೂವು ಚಿತ್ರದಲ್ಲಿ ನಟನೆ ಮಾಡಲ್ಲವೆಂದು ಅಪ್ಪು ಹಠಮಾಡಿದ್ದರು: ಹೊನ್ನಾವಳ್ಳಿ ಕೃಷ್ಣ
Advertisement
Advertisement
ಈ ವೇಳೆ ಅಪ್ಪು ತುಂಗಭದ್ರಾ ನದಿ ತಟದಲ್ಲಿರುವ ಹಲವಾರು ಹೋಟೆಲ್, ರೆಸಾರ್ಟ್ ಗೆ ಭೇಟಿ ನೀಡಿದ್ದು, ಅಲ್ಲಿ ಅವರು ನಡೆದು ಕೊಂಡ ಪರಿಯನ್ನು ಜನರು ನೆನಪು ಮಾಡಿಕೊಂಡಿದ್ದಾರೆ. ಅಪ್ಪುಗೆ ತಾವೊಬ್ಬ ಸ್ಟಾರ್ ನಟ ಎಂಬ ಕಿಂಚಿತ್ತೂ ಅಹಂ ಇರಲಿಲ್ಲ. ಹೋಟೆಲ್ ನಲ್ಲಿ ಟೀ ಕುಡಿದಿದ್ದು, ಬೇಡವೆಂದರೂ ಗಲ್ಲಾಪೆಟ್ಟಿಗೆಗೆ ಹಣ ಹಾಕಿಹೋಗಿದ್ರು. ನಾನು ಸಾಕಷ್ಟು ನಾಯಕ ನಟರನ್ನು ನೋಡಿದ್ದೇನೆ. ಅಪ್ಪು ಅಂಥವರನ್ನು ಎಲ್ಲೂ ಕಾಣಲು ಸಾಧ್ಯವಿಲ್ಲ ಎಂದು ಮಂಕಿ ರೆಸಾರ್ಟ್ ಮಾಲೀಕ ಸುರೇಶ್ ನೆನಪಿಸಿಕೊಳ್ಳುತ್ತಾರೆ.
Advertisement
ವನ್ಯಜೀವಿ ಸಾಕ್ಷ್ಯಚಿತ್ರ ಶೂಟ್ ಗಾಗಿ ಗಂಗಾವತಿಗೆ ಬಂದಿದ್ದ ಪುನೀತ್ ನಾರಯಣ ಪೇಟೆ ಬಳಿಯ ‘ಲೀ ವುಡನ್ ರೆಸಾರ್ಟ್’ ನಲ್ಲಿ ಕಾಲ ಕಳೆದಿದ್ದರು. ಅಲ್ಲಿ ಉತ್ತರ ಕರ್ನಾಟಕ ಶೈಲಿಯ ನಾಟಿ ಕೋಳಿ, ಜೋಳದ ರೊಟ್ಟಿ, ಹಿಂಡಿ ಮತ್ತು ಕೋಸಂಬರಿ ಊಟ ಸೇವಿಸಿದ್ರು. ಅದು ಅಲ್ಲದೇ ಈ ರೆಸಾರ್ಟ್ ನಲ್ಲಿ ಸ್ಥಳೀಯ ಕಲಾವಿದರ ತಮಟೆ, ಡೋಲು ವಾದ್ಯದೊಂದಿಗೆ ಪಾಶ್ಚಿಮಾತ್ಯ ಸಂಗೀತ ಶೈಲಿಯ ರಸದೌತಣ ಸವಿದಿದ್ದ ಪುನೀತ್, ಸ್ವತಃ ತಾವೇ ಮೊಬೈಲ್ ನಲ್ಲಿ ವೀಡಿಯೋವನ್ನು ಸೆರೆ ಹಿಡಿದು ಆಸ್ವಾದಿಸಿದ್ದರು. ಈ ವೇಳೆ ಪುನೀತ್ ಅವರಿಂದ ಕೊಡೆಯನ್ನು ಕೇಳಿ ಪಡೆದುಕೊಂಡಿದ್ದು, ಅದನ್ನು ಜೊತೆಯಲ್ಲೇ ಇಟ್ಟುಕೊಂಡು ಓಡಾಡುತ್ತಿದ್ದೇನೆ ಎಂದು ಪುನೀತ್ ಬಿಟ್ಟು ಹೋದ ನೆನಪನ್ನು ರೆಸಾರ್ಟ್ ಮಾಲೀಕ ಅನೂಪ ಕುಮಾರ್ ಮೆಲುಕು ಹಾಕಿದ್ದಾರೆ. ಇದನ್ನೂ ಓದಿ: ದಮ್ಮಾಮ್‍ನಲ್ಲಿ ಕನ್ನಡದ ಕಂಪನ್ನು ಪಸರಿಸಿದ ಕರುನಾಡ ಸಂಭ್ರಮ
ಅಪ್ಪು ತುಂಗಾಭದ್ರ ತಟದಲ್ಲಿ ಕೇವಲ ಹೋಟೆಲ್ ನಲ್ಲಿ ಮಾತ್ರ ತಂಗಿ ಊಟ ಮಾಡಿಲ್ಲ. ಬದಲಾಗಿ ಪ್ರಕೃತಿಯ ಸೊಬಗು ಸವಿದಿದ್ದಾರೆ. ಕುರಿಗಾಯಿಗಳ ಜೊತೆ ಊಟ ಮಾಡಿ ದೊಡ್ಮನೆ ದೇವರು ಅನ್ನಿಸಿಕೊಂಡಿದ್ದಾರೆ. ಯಾವುದೇ ಹಮ್ಮು-ಬಿಮ್ಮು ಇಲ್ಲದೇ ಅಪ್ಪು ಜನರೊಂದಿಗೆ ಬೆರೆತಿದ್ದಾರೆ. ಆ ನೆನಪು ಇಲ್ಲಿನ ಜನರು ಮತ್ತು ರೆಸಾರ್ಟ್ ಸಿಬ್ಬಂದಿಯನ್ನು ಸಾಕಷ್ಟು ಕಾಡುತ್ತಿದೆ ಎಂಬುದು ಮಾತ್ರ ಸುಳ್ಳಲ್ಲ.