– ಸರ್ಕಾರಕ್ಕೆ ಸುದೀಪ್ ಧನ್ಯವಾದ
ಬೆಂಗಳೂರು: ಸಕಲ ಸರ್ಕಾರಿ ಗೌರವ, ಅಭಿಮಾನಿಗಳ ಅಶ್ರುತರ್ಪಣದೊಂದಿಗೆ ಕಂಠೀರವ ಸ್ಟುಡಿಯೋದಲ್ಲಿ ನಟ ಪುನೀತ್ ರಾಜ್‍ಕುಮಾರ್ ಅವರ ಅಂತ್ಯಸಂಸ್ಕಾರ ನಡೆಯಿತು. ಕುಟುಂಬಸ್ಥರು, ಚಿತ್ರರಂಗದ ನಟ-ನಟಿಯರು, ಗಣ್ಯರು, ಅಭಿಮಾನಿಗಳು ಅಪ್ಪುಗೆ ಕಣ್ಣೀರ ವಿದಾಯ ಹೇಳಿದರು. ಯಾವುದೇ ಲೋಪವಿಲ್ಲದೇ ಶಾಂತಿ, ಗೌರವಯುತವಾಗಿ ಅಂತ್ಯಸಂಸ್ಕಾರ ನಡೆಯಲು ಸಹಕಾರಿಯಾದ ಸರ್ಕಾರ ಹಾಗೂ ಅಧಿಕಾರಿಗಳಿಗೆ ನಟ ಸುದೀಪ್ ಕೃತಜ್ಞತೆ ಸಲ್ಲಿಸಿ ಟ್ವೀಟ್ ಮಾಡಿದ್ದಾರೆ.
‘ಮಾಡಿ ವಿಶ್ರಾಂತಿ ಪಡೆದರು’ ಎಂಬ ಶೀರ್ಷಿಕೆಯಡಿ ಟ್ವೀಟ್ ಮಾಡಿರುವ ಸುದೀಪ್, ಪುನೀತ್ ಅಂತ್ಯಕ್ರಿಯೆಲ್ಲಿ ಸರ್ಕಾರದ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಪುನೀತ್ ಅವರನ್ನು ಮತ್ತೊಮ್ಮೆ ನೆನಪಿಸಿಕೊಂಡು, ಸಿಎಂ ಮಾಮಗೆ ಧನ್ಯವಾದವನ್ನು ಕಿಚ್ಚ ಹೇಳಿದ್ದಾರೆ. ಇದನ್ನೂ ಓದಿ: ಅಪ್ಪು ಅಗಲಿಕೆ ಬಗ್ಗೆ ಶಿವಣ್ಣ ಸುದೀಪ್‍ಗೆ ಹೇಳಿದ್ದೇನು?
Farewell My friend ???? pic.twitter.com/5cXUxWNWQx
— Kichcha Sudeepa (@KicchaSudeep) October 31, 2021
ಸುದೀಪ್ ಟ್ವೀಟ್‍ನಲ್ಲೇನಿದೆ…?: ಪುನೀತ್‍ಗೆ ವಿದಾಯ ಹೇಳಲು ನಮ್ಮ ಪ್ರೀತಿಯ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಅವರು ಉತ್ತಮ ರೀತಿಯಲ್ಲಿ ಸಿದ್ಧತೆ ಮಾಡಿಸಿದ್ದರು. ಸಿದ್ಧತೆಯು ಘನತೆ ಹಾಗೂ ಶಿಸ್ತಿನಿಂದ ಕೂಡಿತ್ತು. ಗೌರವಾನ್ವಿತ ಮುಖ್ಯಮಂತ್ರಿಗಳೇ ಹಾಗೂ ಅಧಿಕಾರಿಗಳೇ.. ನಿಮ್ಮ ಕಾರ್ಯಕ್ಕೆ ನಾನು ಕೃತಜ್ಞ. ಪುನೀತ್‍ಗೆ ಅರ್ಹವಾದ ರೀತಿಯಲ್ಲೇ ಬೀಳ್ಕೊಡುಗೆ ಕೊಟ್ಟಿದ್ದಕ್ಕೆ ನಿಮಗೆ ಧನ್ಯವಾದ.
ಈಗ ಎಲ್ಲವೂ ಮುಗಿದಿದೆ. ನಾವು ಸಹಜ ಸ್ಥಿತಿಗೆ ಮರಳಲು ಬಹಳ ಸಮಯ ಹಿಡಿಯಲಿದೆ. ಚಿತ್ರರಂಗ ಹಾಗೂ ಅಭಿಮಾನಿಗಳಿಗೆ ಇದು ಕೇವಲ ನಷ್ಟವಲ್ಲ, ದಿಢೀರ್ ಆಘಾತ. ಸುಂದರ ಅಧ್ಯಾಯವೊಂದು ಮುಗಿದಿರುವುದಕ್ಕೆ ಈ ದಿನ ಸಾಕ್ಷಿಯಾಗಿದೆ. ಅಂತ್ಯಸಂಸ್ಕಾರದ ವೇಳೆ ನಾನು ಚಕಿತನಾದೆ. ಆತನ ಮಕ್ಕಳು ಏನಾಗಬೇಕು. ಆ ಹಿರಿಯರು ಏನಾಗಬೇಕು. ನನ್ನ ಮನಸ್ಸು ಈ ಮಾತುಗಳ ಸುತ್ತಲೇ ಗಿರಕಿ ಹೊಡೆಯಿತು. ಇದನ್ನೂ ಓದಿ: ನನ್ನ ಮಗುವನ್ನು ಕಳೆದುಕೊಂಡಿದ್ದೇನೆ – ಬಿಕ್ಕಿ ಬಿಕ್ಕಿ ಅತ್ತ ಶಿವಣ್ಣ
ಸದಾ ಹರಸಲ್ಪಟ್ಟ, ಪ್ರೀತಿ ಪಾತ್ರನಾದ ವ್ಯಕ್ತಿ. ಈ ದಿನ ಅಂತಿಮವಾಗಿ ಆತ ತನ್ನ ಪೋಷಕರೊಟ್ಟಿಗೆ ವಿಶ್ರಾಂತಿ ಪಡೆಯುತ್ತಿದ್ದಾನೆ. ಈ ವಿಚಾರಗಳೊಂದಿಗೆ ನಾನು ಆ ಸ್ಥಳದಿಂದ ಹೊರಟೆ, ಪುನೀತ್ ಸಿರಿವಂತನಾಗಿ ಹುಟ್ಟಿದ, ಸಿರಿವಂತನಾಗಿ ಬೆಳೆದ, ಸಿರಿವಂತನಾಗಿ ಉಳಿದ, ಸಿರಿವಂತನಾಗಿಯೇ ಹೋದ. ನಮ್ಮ ನಕ್ಷತ್ರ ಈಗ ಆಕಾಶ ಸೇರಿದೆ. ರಾತ್ರಿ ಆ ನಕ್ಷತ್ರವನ್ನು ನೋಡುತ್ತೇನೆ. ಸದಾ ಪ್ರಕಾಶಮಾನವಾಗಿ ಹೊಳೆಯುತ್ತೀಯಾ ಎಂಬ ಖಾತ್ರಿ ಇದೆ ನನಗೆ. ಶುಭ ವಿದಾಯ ನನ್ನ ಗೆಳೆಯನೇ.. ಎಂದು ಸುದೀಪ್ ಬರೆದುಕೊಂಡಿದ್ದಾರೆ.
ಶುಕ್ರವಾರ ವಿಕ್ರಂ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದ ಪವರ್ ಸ್ಟಾರ್ ಅವರಿಗೆ ಸ್ಯಾಂಡಲ್‍ವುಡ್, ತೆಲುಗು ಹಾಗೂ ಅಸಂಖ್ಯಾತ ಅಭಿಮಾನಿಗಳು ಅಂತಿಮ ನಮನ ಸಲ್ಲಿಸಿದರು. ಎರಡು ದಿನಗಳ ದರ್ಶನದ ಬಳಿಕ ಇಂದು ಬೆಳಗ್ಗೆ 7.40ರ ಸುಮಾರಿಗೆ ಕಂಠೀರವ ಸ್ಟುಡಿಯೋದಲ್ಲಿ ಅಪ್ಪು ಮಣ್ಣಲ್ಲಿ ಮಣ್ಣಾದರು.