ಪುಣೆ: ಕಿಡ್ನ್ಯಾಪ್ ಮತ್ತು ಕುಟುಂಬದ ಚಾಲಕನನ್ನು ಅಕ್ರಮವಾಗಿ ಬಂಧಿಸಿದ ಪ್ರಕರಣದಲ್ಲಿ ಪುಣೆ ಪೋರ್ಷೆ ಕಾರು ಅಪಘಾತದ ಆರೋಪಿ ಅಪ್ರಾಪ್ತನ ತಂದೆ ಮತ್ತು ಅಜ್ಜನಿಗೆ ಮಂಗಳವಾರ ಪುಣೆ ನ್ಯಾಯಾಲಯವು ಜಾಮೀನು ಮಂಜೂರು ಮಾಡಿದೆ.
ಜಾಮೀನು ಆದೇಶವನ್ನು ಕೋರ್ಟ್ ನೀಡಿದ ನಂತರ ಬಾಲಾಪರಾಧಿಯ ಅಜ್ಜ ಎಸ್‍ಕೆ ಅಗರ್ವಾಲ್ ಬಿಡುಗಡೆಯಾಗಲಿದ್ದಾರೆ. ಆದಾಗ್ಯೂ ಬ್ಲಡ್ ಎಕ್ಸ್ ಚೇಂಜ್ ಪ್ರಕರಣದಲ್ಲಿ ಪೊಲೀಸರು ತಮ್ಮ ದಾಖಲೆಗಳನ್ನು ಸಲ್ಲಿಸಬೇಕಾಗಿರುವುದರಿಂದ ಅಪ್ರಾಪ್ತ ಆರೋಪಿಯ ತಂದೆ ವಿಶಾಲ್ ಅಗರ್ವಾಲ್ ನ್ಯಾಯಾಂಗ ಬಂಧನದಲ್ಲಿ ಇರಲಿದ್ದಾರೆ.
ಮೇ 19 ರ ಮಧ್ಯರಾತ್ರಿ ಅಪಘಾತದ ನಂತರ ಸುರೇಂದ್ರ ಕುಮಾರ್ ಅಗರ್ವಾಲ್, ಚಾಲಕನನ್ನು ಅಪಹರಿಸಿ ತನ್ನ ಬಂಗಲೆಗೆ ಕರೆದೊಯ್ದಿದ್ದಾನೆ. ಬಳಿಕ ಆ ದಿನ ರಾತ್ರಿ ಚಾಲಕ ಕಲ್ಯಾಣಿನಗರದಲ್ಲಿರುವ ಅಗರ್ವಾಲ್ ಮನೆಯಲ್ಲಿ ತಂಗಿದ್ದನು. ಆತನ ಹೆಂಡತಿ ಮತ್ತು ಮಕ್ಕಳನ್ನು ಸಹ ಇಲ್ಲಿಗೆ ಕರೆತರಲಾಗಿದೆ ಎಂದು ಪುಣೆ ಪೊಲೀಸರು ನ್ಯಾಯಾಲಯಕ್ಕೆ ತಿಳಿಸಿದ್ದಾರೆ. ಇದನ್ನೂ ಓದಿ: ಹತ್ರಾಸ್ ದುರಂತ- ಮೃತರ ಕುಟುಂಬಕ್ಕೆ ತಲಾ 2 ಲಕ್ಷ, ಗಾಯಾಳುಗಳಿಗೆ ತಲಾ 50 ಸಾವಿರ ನೆರವು
ಈ ನಿಟ್ಟಿನಲ್ಲಿ ಕ್ರೈಂ ಬ್ರ್ಯಾಂಚ್ ಪೊಲೀಸರು ಅಗರ್ವಾಲ್ ಅವರ ಬಂಗಲೆಯ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ್ದಾರೆ. ಅಲ್ಲದೇ ಶೋಧ ಕಾರ್ಯಾಚರಣೆಯನ್ನೂ ನಡೆಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆದರೆ ವಕೀಲ ಪ್ರಶಾಂತ್ ಪಾಟೀಲ್, ಚಾಲಕ ಸ್ವಯಂ ಪ್ರೇರಿತವಾಗಿ ಬಂಗಲೆಗೆ ಬಂದಿದ್ದಾನೆ. ಘಟನಾ ಸ್ಥಳದಲ್ಲಿದ್ದ ಜನಸಮೂಹ ಕಂಡು ಭಯದಿಂದ ಆ ರಾತ್ರಿ ಅಗರ್ವಾಲ್ ಅವರ ಬಂಗಲೆಯಲ್ಲಿ ಚಾಲಕ ತನ್ನ ಕುಟುಂಬದೊಂದಿಗೆ ಉಳಿದುಕೊಂಡಿದ್ದಾನೆ ಎಂದು ಕೋರ್ಟ್‍ಗೆ ಪಾಟೀಲ್ ತಿಳಿಸಿದರು.
ಅಪಹರಣ ಪ್ರಕರಣದಲ್ಲಿ ನ್ಯಾಯಾಂಗ ಬಂಧನಕ್ಕೆ ಒಳಗಾದ ನಂತರ ಸುರೇಂದ್ರ ಕುಮಾರ್ ಅಗರ್ವಾಲ್‍ಗೆ ಜಾಮೀನು ನೀಡಲಾಯಿತು. ಈ ನಡುವೆ ವಿಶಾಲ್ ಅಗರ್ವಾಲ್ ಅವರು ಈ ಪ್ರಕರಣದಲ್ಲಿ ಜಾಮೀನು ಪಡೆದಿದ್ದಾರೆ. ಆದರೆ ಅವರ ಕಸ್ಟಡಿಯು ಮುಂದುವರಿಯುತ್ತದೆ. ಹಿಂದಿನ ಪ್ರಕರಣದಲ್ಲಿ ಜಾಮೀನು ಪಡೆದಿದ್ದರೂ, ವಿಶಾಲ್ ಅಗರ್ವಾಲ್ ಇತರ ಮೂರು ಪ್ರಕರಣಗಳಿಂದಾಗಿ ಯರವಾಡ ಕೇಂದ್ರ ಕಾರಾಗೃಹದಲ್ಲಿಯೇ ಇದ್ದರು.
ಒಂದು ಪ್ರಕರಣವು ಕುಟುಂಬದ ಚಾಲಕನ ಅಪಹರಣ ಮತ್ತು ಅಕ್ರಮ ಬಂಧನವನ್ನು ಒಳಗೊಂಡಿತ್ತು. ಅಗರ್ವಾಲ್ ಕಾರನ್ನು ಚಾಲನೆ ಮಾಡುವ ಜವಾಬ್ದಾರಿಯನ್ನು ತೆಗೆದುಕೊಳ್ಳುವಂತೆ ಒತ್ತಡ ಹೇರಿದ್ದಾರೆ ಎಂದು ಆರೋಪಿಸಲಾಗಿದೆ. ಮತ್ತೊಂದು ಪ್ರಕರಣವು ಸಂಭಾವ್ಯ ಸಾಕ್ಷ್ಯವನ್ನು ತಿದ್ದಿರುವುದಕ್ಕೆ ಸಂಬಂಧಿಸಿದೆ. ಆಲ್ಕೋಹಾಲ್ ಸೇವನೆಯ ಕುರಿತು ಪತ್ತೆಹಚ್ಚುವುದನ್ನು ತಪ್ಪಿಸಲು ಅಪ್ರಾಪ್ತನ ರಕ್ತದ ಮಾದರಿಯನ್ನು ಬದಲಾಯಿಸಲಾಗಿದೆ. ಆರೋಪಿಯ ರಕ್ತದ ಮಾದರಿ ಬದಲಿಸಿ ಆತನ ತಾಯಿಯ ರಕ್ತದ ಮಾದರಿಯನ್ನು ಇರಿಸಲಾಗಿತ್ತು ಎಂಬ ಆರೋಪವಿದೆ.