ಪುಣೆ: ಪೋರ್ಶೆ ಕಾರು ಅಪಘಾತ (Pune Porsche crash) ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಆರೋಪಿ ಅಪ್ರಾಪ್ತನ ಅಜ್ಜನನ್ನು ಪುಣೆ ಪೊಲೀಸರು (Pune Police) ಇಂದು ಬಂಧಿಸಿದ್ದಾರೆ.
ಸುರೇಂದ್ರ ಅಗರ್ವಾಲ್ ಬಂಧಿತ ಅಜ್ಜ. ಕಾರು ಅಪಘಾತ ಸಂದರ್ಭದಲ್ಲಿ ತಾನೇ ಪೋರ್ಶೆಯನ್ನು ಚಲಾಯಿಸಿದ್ದಾಗಿ ಪೊಲೀಸರ ಮುಂದೆ ಹೇಳಿಕೆ ನೀಡಬೇಕು ಎಂದು ಚಾಲಕನಿಗೆ ಬೆದರಿಕೆ ಹಾಕಿರುವ ಹಿನ್ನೆಲೆಯಲ್ಲಿ ಸುರೇಂದ್ರರನ್ನು ಬಂಧನ ಮಾಡಲಾಗಿದೆ.
ಪುಣೆ ಕ್ರೈಂ ಬ್ರಾಂಚ್ ದಾಖಲಿಸಿದ ಹೊಸ ಪ್ರಕರಣದಲ್ಲಿ ಸುರೇಂದ್ರ ಅಗರ್ವಾಲ್ ಅವರನ್ನು ಅವರ ನಿವಾಸದಿಂದ ಮುಂಜಾನೆ 3 ಗಂಟೆಗೆ ಬಂಧಿಸಲಾಯಿತು. ಈ ಮೂಲಕ ಪುಣೆ ಪೋರ್ಶೆ ಅಪಘಾತ ಪ್ರಕರಣದಲ್ಲಿ ಇದು ಮೂರನೇ ಎಫ್‌ಐಆರ್ ಆಗಿದೆ.
ಇದಕ್ಕೂ ಮೊದಲು ಸುರೇಂದ್ರ ಅಗರ್ವಾಲ್ ಅವರ ಮಗ ಮತ್ತು ಮೊಮ್ಮಗನ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ಮತ್ತು ಅಪಘಾತದ ದಿನದಂದು ನಡೆಸಿದ ಸಂಭಾಷಣೆಯನ್ನು ಬಯಲಿಗೆಳೆಯಲು ಪ್ರಶ್ನಿಸಿದ್ದರು. ಅಗರ್ವಾಲ್ ಮಾಲೀಕರಾಗಿದ್ದ ರಿಯಾಲ್ಟಿ ಸಂಸ್ಥೆಯ ಹೆಸರಿನಲ್ಲಿ ಪೋರ್ಶೆ ನೋಂದಣಿಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇನ್ನು ಗ್ಯಾಂಗ್‌ಸ್ಟರ್ ಛೋಟಾ ರಾಜನ್‌ಗೆ ಹಣ ಪಾವತಿಸಿದ ಆರೋಪದ ಮೇಲೆ ಶೂಟೌಟ್ ಪ್ರಕರಣದಲ್ಲಿ ಸುರೇಂದ್ರ ಅಗರ್ವಾಲ್ ವಿಚಾರಣೆ ಎದುರಿಸುತ್ತಿದ್ದಾರೆ ಎಂದು ಸಿಬಿಐ ಮೂಲಗಳು ತಿಳಿಸಿವೆ. ಇದನ್ನೂ ಓದಿ: ಪೋರ್ಶೆ ಕಾರು ಅಪಘಾತ- ಇಬ್ಬರು ಪೊಲೀಸ್ ಅಧಿಕಾರಿಗಳ ಅಮಾನತು
ಏನಿದು ಪ್ರಕರಣ: ಮೇ 19 ರಂದು ಪುಣೆಯಲ್ಲಿ 17 ವರ್ಷದ ಅಪ್ರಾಪ್ತ ಚಾಲನೆ ಮಾಡುತ್ತಿದ್ದ ಪೋರ್ಷೆ ಕಾರು ಬೈಕ್‍ಗೆ ಡಿಕ್ಕಿಯಾಗಿ ಮಧ್ಯಪ್ರದೇಶ ಮೂಲದ ವರ್ಷದ ಐಟಿ ವೃತ್ತಿಪರರಾದ ಅನೀಶ್ ಅವಧಿಯಾ (24) ಮತ್ತು ಅಶ್ವಿನಿ ಕೋಷ್ಟಾ ಅವರು ಸಾವನ್ನಪ್ಪಿದ್ದರು. ಬಳಿಕ ಪೊಲೀಸರು ಅಪ್ರಾಪ್ತನ ಬಳಿ ಪ್ರಬಂಧ ಬರೆಯುವಂತೆ ಸೂಚಿಸಿ ಜಾಮೀನು ನೀಡಿ ಬಿಡುಗಡೆ ಮಾಡಿದ್ದರು. ಪೋಲೀಸರ ಕ್ರಮದ ವಿರುದ್ಧ ಆಕ್ರೋಶ ವ್ಯಕ್ತವಾದ ಬಳಿಕ ಪೊಲೀಸರು ಅಪ್ರಾಪ್ತ ಆರೋಪಿಯನ್ನು ಬಂಧಿಸಿದ್ದರು.
ಸದ್ಯ ಪುಣೆ ಪೊಲೀಸ್ ಕಮಿಷನರ್ ಅಮಿತೇಶ್ ಕುಮಾರ್ ಅವರು, ಬಾಲಾಪರಾಧಿಯನ್ನು ವಯಸ್ಕನಂತೆ ವಿಚಾರಣೆಗೆ ಒಳಪಡಿಸಲು ಮತ್ತು ರಿಮಾಂಡ್ ಹೋಮ್ಗೆ ಕಳುಹಿಸಲು ಬಾಲನ್ಯಾಯ ಮಂಡಳಿಯ ಮುಂದೆ ಪರಿಶೀಲನಾ ಅರ್ಜಿಯನ್ನು ಸಲ್ಲಿಸಿದ್ದಾರೆ ಎಂದು ಹೇಳಿದರು.