ಇತ್ತೀಚಿನ ದಿನಗಳಲ್ಲಿ ರಸ್ತೆ ಅಪಘಾತಗಳು ಮತ್ತು ಅವುಗಳಿಂದ ಉಂಟಾಗುವ ಸಾವಿನ ಸಂಖ್ಯೆಗಳು ಹೆಚ್ಚುತ್ತಿವೆ. ಕರ್ನೂಲ್‌ನಲ್ಲಿ ಸಂಭವಿಸಿದ ಬಸ್ ಬೆಂಕಿ ದುರಂತಕ್ಕೆ 20 ಮಂದಿ ಬಲಿಯಾದರು. ಕೆಲ ದಿನಗಳ ಹಿಂದಷ್ಟೇ ಹೈದರಾಬಾದ್ ಬಳಿಯ ಚೆವೆಲ್ಲಾದಲ್ಲಿ ಆದ ಹೆದ್ದಾರಿ ಅಪಘಾತಕ್ಕೆ 19 ಪ್ರಯಾಣಿಕರು ಅಸುನೀಗಿದರು. ಭಾರತದ ಮಾರಕ ರಸ್ತೆ ಅಪಘಾತಗಳಲ್ಲಿ ಇದು ದಾಖಲೆಯನ್ನು ಬರೆದಿದೆ. ಜಲ್ಲಿಕಲ್ಲು ತುಂಬಿದ ಟ್ರಕ್‌ನ ಚಾಲಕ ಗುಂಡಿಯನ್ನು ತಪ್ಪಿಸಲು ಹೋಗಿ ಬಸ್‌ಗೆ ಡಿಕ್ಕಿ ಹೊಡೆದ. ಜಲ್ಲಿಕಲ್ಲು ಬಸ್ ಮೇಲೆ ಹರಡಿ ಪ್ರಯಾಣಿಕರು ಮೃತಪಟ್ಟರು. ಮತ್ತೊಂದೆಡೆ, ಜೈಪುರದಲ್ಲಿ ಅತಿವೇಗದಲ್ಲಿ ಚಲಿಸಿದ ಡಂಪರ್ ಟ್ರಕ್ 12ಕ್ಕೂ ಹೆಚ್ಚು ವಾಹನಗಳಿಗೆ ಡಿಕ್ಕಿ ಹೊಡೆದು 14 ಜನರು ಸಾವನ್ನಪ್ಪಿದರು. ಫಲೋಡಿಯಲ್ಲಿ ಟ್ರಕ್‌ಗೆ ಟೆಂಪೋ ಟ್ರಾವೆಲರ್ ಡಿಕ್ಕಿ ಹೊಡೆದು 15 ಪ್ರಯಾಣಿಕರು ಸ್ಥಳದಲ್ಲೇ ಸಾವನ್ನಪ್ಪಿದರು. ಭಾರತ ಬೆಳೆದಂತೆ, ವಾಹನಗಳ ಬಳಕೆಯೂ ಹೆಚ್ಚುತ್ತಿದೆ. ಪ್ರತಿ ವರ್ಷ ಹೆಚ್ಚು ಹೆಚ್ಚು ಕಾರುಗಳು, ಬೈಕ್‌ಗಳು ಮತ್ತು ಟ್ರಕ್‌ಗಳು ರಸ್ತೆಗಿಳಿಯುತ್ತಿವೆ. ಇಂತಹ ಭೀಕರ ಅಪಘಾತಗಳಿಗೆ ಅತಿ ವೇಗವೇ ಕಾರಣ ಎಂದು ವರದಿಗಳು ಹೇಳುತ್ತಿವೆ. ದೇಶದಲ್ಲಾಗುತ್ತಿರುವ ಪ್ರತಿ ಎರಡು ಅಪಘಾತಗಳಲ್ಲಿ ಒಂದು ಸಾವು ಸಂಭವಿಸುತ್ತಿದೆ. ಕಳೆದ ವರ್ಷ ಒಟ್ಟಾರೆ ರಸ್ತೆ ಅಪಘಾತಗಳಿಂದ ಸಾವಿಗೀಡಾದವರ ಸಂಖ್ಯೆಯಲ್ಲಿ ಉತ್ತರ ಪ್ರದೇಶದ ದೇಶದಲ್ಲೇ ನಂಬರ್ 1 ಸ್ಥಾನದಲ್ಲಿದೆ. ಕರ್ನಾಟಕ ಟಾಪ್ 5ರ ಸ್ಥಾನದಲ್ಲಿರುವುದು ಆತಂಕಕಾರಿ ವಿಚಾರ.
2024ರ ಅಂಕಿ-ಅಂಶ ಹೇಳೋದೇನು?
2024 ರಲ್ಲಿ 35 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ (UTs) 4.73 ಲಕ್ಷ ರಸ್ತೆ ಅಪಘಾತಗಳು ಮತ್ತು 1.70 ಲಕ್ಷ ಸಾವುಗಳು (ಪಶ್ಚಿಮ ಬಂಗಾಳ ಹೊರತುಪಡಿಸಿ) ಸಂಭವಿಸಿವೆ ಎಂದು ಸಚಿವಾಲಯದ ಸಾರಿಗೆ ಸಂಶೋಧನಾ ವಿಭಾಗ (TRW) ವರದಿ ತಿಳಿಸಿದೆ. ಇದು ತಾತ್ಕಾಲಿಕ ವರದಿಯಾಗಿದೆ. ಇದನ್ನೂ ಓದಿ: ತೆಲಂಗಾಣದಲ್ಲಿ ಭೀಕರ ಅಪಘಾತ – ಬಸ್ಸಿನೊಳಕ್ಕೆ ಬಿದ್ದ ಜಲ್ಲಿ ರಾಶಿಯಲ್ಲಿ ಸಿಲುಕಿ 10ಕ್ಕೂ ಅಧಿಕ ಮಂದಿ ಸಾವು!
ವರ್ಷದಿಂದ ವರ್ಷ ಹೆಚ್ಚಾಗ್ತಿದೆಯಾ?
2023 ರಲ್ಲಿ ಭಾರತದಲ್ಲಿ 4.80 ಲಕ್ಷ ರಸ್ತೆ ಅಪಘಾತಗಳನ್ನು ವರದಿಯಾಗಿವೆ. ಈ ಅಪಘಾತಗಳು 1.73 ಲಕ್ಷ ಜೀವಗಳನ್ನು ಬಲಿ ತೆಗೆದುಕೊಂಡಿವೆ. ಆ ವರ್ಷ ಪಶ್ಚಿಮ ಬಂಗಾಳದಲ್ಲಿ ಮಾತ್ರ 13,795 ಅಪಘಾತಗಳು ಮತ್ತು 6,027 ಸಾವುಗಳು ಸಂಭವಿಸಿವೆ. ಇದರರ್ಥ ಪಶ್ಚಿಮ ಬಂಗಾಳದ 2024 ರ ಅಂಕಿಅಂಶಗಳನ್ನು ಸೇರಿಸಿದಾಗ, ರಾಷ್ಟ್ರೀಯ ಒಟ್ಟು ಸಂಖ್ಯೆಗಳು 2023 ಕ್ಕಿಂತ ಹೆಚ್ಚಾಗಲಿದೆ. ರಸ್ತೆ ಅಪಘಾತಗಳು ಮತ್ತು ಸಾವುಗಳ ಸಂಖ್ಯೆಯು ವರ್ಷದಿಂದ ವರ್ಷಕ್ಕೆ ಏರುಗತಿಯಲ್ಲಿ ಸಾಗಿದೆ. 2020 ಮತ್ತು 2021 ರ ಸಾಂಕ್ರಾಮಿಕ ವರ್ಷಗಳಲ್ಲಿ ತಾತ್ಕಾಲಿಕ ಕುಸಿತ ಕಂಡುಬಂದಿದೆ.
ರಸ್ತೆ ಅಪಘಾತದಲ್ಲಿ ಟಾಪ್ 5 ರಾಜ್ಯಗಳ್ಯಾವುವು?
2023 2024
ತಮಿಳುನಾಡು – 67,213 67,526
ಮಧ್ಯಪ್ರದೇಶ – 55,327 56,669
ಕೇರಳ – 48,091 48,789
ಉತ್ತರ ಪ್ರದೇಶ- 44,534 46,052
ಕರ್ನಾಟಕ – 43,440 43,062
ಭಾರತ (ಒಟ್ಟು)- 4,80,583 4,73,959
ರಸ್ತೆ ಅಪಘಾತಕ್ಕೆ ಸಾವು; ಟಾಪ್ 5 ರಾಜ್ಯಗಳು ಯಾವುವು?
2023 2024
ಉತ್ತರ ಪ್ರದೇಶ- 23,652 24,118
ತಮಿಳುನಾಡು- 18,347 18,449
ಮಹಾರಾಷ್ಟ್ರ- 15,366 15,715
ಮಧ್ಯಪ್ರದೇಶ- 13,798 14,791
ಕರ್ನಾಟಕ- 12,321 12,390
ಭಾರತ (ಒಟ್ಟು) 1,72,890 1,70,464
ಕರ್ನಾಟಕ ಟಾಪ್ ನಂ.5
2024ರ ಅಂಕಿಅಂಶ ಗಮನಿಸಿದಾಗ ರಸ್ತೆ ಅಪಘಾತದಲ್ಲಿ ತಮಿಳುನಾಡು ಮತ್ತು ಸಾವು ಸಂಖ್ಯೆಗಳಲ್ಲಿ ಉತ್ತರ ಪ್ರದೇಶ ಮೊದಲ ಸ್ಥಾನದಲ್ಲಿವೆ. ಇವೆರಡರಲ್ಲೂ ಕರ್ನಾಟಕ 5ನೇ ಸ್ಥಾನದಲ್ಲಿದೆ. ರಾಜ್ಯದಲ್ಲಿ ಪ್ರತಿ ವರ್ಷ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವುದು ಕಳವಳಕಾರಿ ವಿಚಾರ.
ಯಾವ ರಾಜ್ಯಗಳಲ್ಲಿ ಇಳಿಕೆ?
ದೇಶದ ಕೆಲ ದೊಡ್ಡ ರಾಜ್ಯಗಳಲ್ಲೇ ಅಪಘಾತ ಮತ್ತು ಸಾವುಗಳ ಸಂಖ್ಯೆಯಲ್ಲಿ ಇಳಿಕೆ ಕಂಡಿವೆ. ಗುಜರಾತ್‌ನಲ್ಲಿ ಅಪಘಾತಗಳ ಸಂಖ್ಯೆ 2023 ರಲ್ಲಿ 16,349 ರಿಂದ 2024 ರಲ್ಲಿ 15,588 ಕ್ಕೆ ಇಳಿದಿದೆ. ಸಾವುನೋವುಗಳು 7,854 ರಿಂದ 7,717 ಕ್ಕೆ ಇಳಿದಿವೆ. ಅದೇ ರೀತಿ, ಹರಿಯಾಣದಲ್ಲಿ ಅಪಘಾತ (10,463 ರಿಂದ 9,806) ಮತ್ತು ಸಾವುನೋವುಗಳಲ್ಲಿ ಇಳಿಕೆ (4,968 ರಿಂದ 4,689) ದಾಖಲಾಗಿದೆ. ಪಂಜಾಬ್‌ನಲ್ಲಿಯೂ 2023 ರಲ್ಲಿ 6,269 ಅಪಘಾತಗಳು ಮತ್ತು 4,829 ಸಾವುಗಳು ಸಂಭವಿಸಿವೆ. 2024 ರಲ್ಲಿ 6,063 ಅಪಘಾತಗಳು ಮತ್ತು 4,759 ಸಾವುಗಳಾಗಿವೆ.
ಆಕ್ಸಿಡೆಂಟ್ ಇಳಿಕೆ, ಸಾವು ಹೆಚ್ಚಳ ಎಲ್ಲೆಲ್ಲಿ?
* ಆಂಧ್ರಪ್ರದೇಶದಲ್ಲಿ 2023 ಮತ್ತು 2024 ರ ನಡುವೆ ಅಪಘಾತಗಳಲ್ಲಿ (19,949 ರಿಂದ 19,557) ಇಳಿಕೆ ಕಂಡುಬಂದಿದೆ. ಆದರೆ, ಸಾವಿನ ಸಂಖ್ಯೆಯಲ್ಲಿ (8,137 ರಿಂದ 8,346) ಹೆಚ್ಚಳವಾಗಿದೆ.
* ಕರ್ನಾಟಕದಲ್ಲಿ ಅಪಘಾತಗಳಲ್ಲಿ ಇಳಿಕೆ ಕಂಡುಬಂದಿದೆ (43,440 ರಿಂದ 43,062). ಆದರೆ, ಸಾವುಗಳಲ್ಲಿ ಹೆಚ್ಚಳ ಕಂಡುಬಂದಿದೆ (12,321 ರಿಂದ 12,390).
* ದೆಹಲಿಯಲ್ಲಿ ಅಪಘಾತಗಳಲ್ಲಿ ಇಳಿಕೆ ಕಂಡುಬಂದಿದೆ (5,834 ರಿಂದ 5,657). ಆದರೆ, ಸಾವುಗಳಲ್ಲಿ ಹೆಚ್ಚಳ (1,457 ರಿಂದ 1,551) ವಾಗಿದೆ.
* ಲಡಾಖ್ ಕೇಂದ್ರಾಡಳಿತ ಪ್ರದೇಶದಲ್ಲಿ ಅಪಘಾತಗಳ ಸಂಖ್ಯೆ ಕಡಿಮೆಯಾಗಿದೆ (289 ರಿಂದ 264). ಸಾವುನೋವುಗಳು ಹೆಚ್ಚು (59 ರಿಂದ 61).
ಜಗತ್ತಿನಲ್ಲಿ ಭಾರತವೇ ನಂ.1
ಅಂತರರಾಷ್ಟ್ರೀಯ ರಸ್ತೆ ಒಕ್ಕೂಟದ ವಿಶ್ವ ರಸ್ತೆ ಅಂಕಿಅಂಶಗಳ ಪ್ರಕಾರ, ರಸ್ತೆ ಅಪಘಾತಗಳಿಂದ ಸಾವನ್ನಪ್ಪಿದ ಒಟ್ಟು ಜನರ ಸಂಖ್ಯೆಯಲ್ಲಿ ವಿಶ್ವದಲ್ಲೇ ಭಾರತ ಅಗ್ರ ರಾಷ್ಟ್ರವಾಗಿದೆ. ಚೀನಾ ಮತ್ತು ಯುನೈಟೆಡ್ ಸ್ಟೇಟ್ಸ್ ನಂತರದ ಸ್ಥಾನದಲ್ಲಿವೆ. ಪ್ರತಿ ಲಕ್ಷ ಜನಸಂಖ್ಯೆಗೆ ಇರಾನ್‌ನಲ್ಲಿ ಅತಿ ಹೆಚ್ಚು ಸಾವುಗಳಾಗಿವೆ. ಪಾಕಿಸ್ತಾನ, ನೈಜೀರಿಯಾ, ಇಥಿಯೋಪಿಯಾ ಮತ್ತು ಚೀನಾದಂತಹ ದೇಶಗಳಲ್ಲಿ ಭಾರತಕ್ಕಿಂತ ಒಂದು ಲಕ್ಷ ಜನಸಂಖ್ಯೆಗೆ ಕಡಿಮೆ ಸಾವಿನ ಪ್ರಮಾಣವಿದೆ. ಇದನ್ನೂ ಓದಿ: ಸರ್ಕಾರಿ ಬಸ್ ಮೇಲೆ ಜಲ್ಲಿ ತುಂಬಿದ ಟಿಪ್ಪರ್ ಪಲ್ಟಿ – 20 ಮಂದಿ ಪ್ರಯಾಣಿಕರು ಸಾವು
2023ರ ವರದಿ ಏನು ಹೇಳುತ್ತೆ?
ಅತಿಯಾದ ವೇಗದ ಕಾರಣಕ್ಕೆ ಪ್ರತಿ ದಿನ 280 ಭಾರತೀಯರು ಅಪಘಾತಕ್ಕೆ ಬಲಿಯಾಗುತ್ತಿದ್ದಾರೆ. ಅತಿ ವೇಗದ ಚಾಲನೆಗೆ 1,01,841 ಮಂದಿ ಸಾವನ್ನಪ್ಪಿದ್ದಾರೆ. ಅಪಾಯಕಾರಿ & ಅಜಾಗರೂಕ ಚಾಲನೆಗೆ 41,035 ಮಂದಿ ಮೃತಪಟ್ಟಿದ್ದಾರೆ. ಅಪಘಾತಕ್ಕೆ ಸಂಬಂಧಿಸಿದ ಇತರೆ ಪ್ರಕರಣಗಳಲ್ಲಿ 30,950 ಜನರು ಪ್ರಾಣ ಕಳೆದುಕೊಂಡಿದ್ದಾರೆ.
ಏರುಗತಿಯಲ್ಲಿ ಸಾವಿನ ಸಂಖ್ಯೆ
2020: 1.4 ಲಕ್ಷ
2021: 1.5 ಲಕ್ಷ
2022: 1.7 ಲಕ್ಷ
2024: 1.7 ಲಕ್ಷ
ಯುವಜನರೇ ಅತಿ ಹೆಚ್ಚು ಸಾವು
18 ವರ್ಷ ಒಳಗಿನ ಬಾಲಕರು 5%, ಬಾಲಕಿಯರು 8% ಸಾವನ್ನಪ್ಪುತ್ತಿದ್ದಾರೆ. 18-45 ವರ್ಷದೊಳಗಿನ ಪುರುಷರು 68% ಮತ್ತು ಮಹಿಳೆಯರು 58% ರಸ್ತೆ ಅಪಘಾತಕ್ಕೆ ಬಲಿಯಾಗುತ್ತಿದ್ದಾರೆ. 45-60 ವಯಸ್ಸಿನ ಪುರುಷರು 17%, ಮಹಿಳೆಯರು 19% ಮಂದಿ ಸಾವಿಗೀಡಾಗುತ್ತಿದ್ದಾರೆ. 60 ವರ್ಷ ಮೇಲ್ಪಟ್ಟವರು ಪುರುಷರು 8% ಮತ್ತು ಮಹಿಳೆಯರು 12% ಬಲಿಯಾಗುತ್ತಿದ್ದಾರೆ.
ತಪ್ಪು ಯಾರದ್ದು?
ಬಹುತೇಕ ರಸ್ತೆ ಅಪಘಾತಗಳಿಗೆ ಅತಿಯಾದ ವೇಗ, ಅಜಾಗರೂಕ ಚಾಲನೆಯೇ ಪ್ರಮುಖ ಕಾರಣವಾಗಿರುತ್ತದೆ. ಆದರೆ, ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರು ಸಿವಿಲ್ ಎಂಜಿನಿಯರ್‌ಗಳ ಮೇಲೆ ಗಂಭೀರ ಆರೋಪ ಮಾಡಿದ್ದಾರೆ. ಕಳಪೆ ಗುಣಮಟ್ಟದ ಡಿಪಿಆರ್‌ಗಳಿಂದ ಹೆಚ್ಚು ರಸ್ತೆ ಅಪಘಾತಗಳಾಗುತ್ತಿವೆ. ಸಣ್ಣ ಸಿವಿಲ್ ಎಂಜಿನಿಯರಿಂಗ್ ತಪ್ಪುಗಳಿಂದ ನೂರಾರು ಸಾವುಗಳು ಸಂಭವಿಸುತ್ತಿವೆ. ನನ್ನ 10 ವರ್ಷಗಳ ಅನುಭವದಲ್ಲಿ ಈ ಮಾತನ್ನು ಹೇಳುತ್ತಿದ್ದೇನೆಂದು ನಿತಿನ್ ಗಡ್ಕರಿ ಅವರು ಈಚೆಗೆ ಹೇಳಿಕೆ ನೀಡಿದ್ದರು.




