ಚಿಕ್ಕಮಗಳೂರು: ಜೀವನದ ಮೇಲೆ ವಿಧಿ ಸವಾರಿ ಮಾಡ ಹೊರಟ್ರೆ ಬದುಕು ಮೂರಾಬಟ್ಟೆಯಾಗಿ ಬೀದಿಗೆ ಬಂದು ನಿಲ್ಲೋದು ಗ್ಯಾರಂಟಿ. ಅಂತಹ ವಿಧಿಯಾಟದ ಮುಂದೆ ಸತ್ತು ಬದುಕಿದವರು ಉಂಟು. ಬದುಕಿ ಪ್ರತಿದಿನ ಸಾಯ್ತಿರೋರು ಉಂಟು. ವಿಧಿಯ ಕೆಂಗಣ್ಣಿಗೆ ಗುರಿಯಾದವರ ಜೀವನ ಎಷ್ಟು ನಿಕೃಷ್ಟವಾಗಿರುತ್ತೆ ಅನ್ನೋದಕ್ಕೆ ನೂರಾರು ನಿದರ್ಶನಗಳಿವೆ. ಆದ್ರೆ, ಪ್ರಪಂಚದ ಅರಿವೇ ಇಲ್ಲದ ಈ ಮಕ್ಕಳು ಅದ್ಯಾವ ಜನ್ಮದಲ್ಲಿ ಏನ್ ತಪ್ ಮಾಡಿದ್ರೋ ಗೊತ್ತಿಲ್ಲ. ಎಳೆ ವಯಸ್ಸಿಗೆ ಸಂಸಾರದ ನೊಗ ಹೋರೋ ಸ್ಥಿತಿ ಬಂದಿದೆ. ಅಪ್ಪ ಇಲ್ಲ, ಅಮ್ಮ ಇದ್ರೂ ಆರೋಗ್ಯವಿಲ್ಲ, ಇರೋಕೆ ಮನೆ ಇಲ್ಲ, ತಿನ್ನೋಕೆ ಅನ್ನವಿಲ್ಲ. ಹೇಳ್ತಾ ಹೋದ್ರೆ ಇವ್ರ ನೋವು ನೂರಾರು. ಈ ಕುಟುಂಬದ ಸ್ಥಿತಿ ಕೇಳ್ದೋರ ಕಣ್ಣಲ್ಲಿ ನೀರು ಬರತ್ತೆ.
Advertisement
ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಸುಂಕಸಾಲೆಯ ಗ್ರಾಮದ ಕುಟುಂಬವೊಂದು ಇದೀಗ ನಮಗೆ ಬದುಕೋ ಭಾಗ್ಯವಿಲ್ಲವೇನೋ ಎಂಬಂತೆ ಕುಳಿತಿದೆ. 15 ವರ್ಷಗಳಿಂದ ಕಾಫಿತೋಟದಲ್ಲಿ ಕೂಲಿ ಮಾಡ್ತಾ ಬದುಕ್ತಿದ್ದ ಈ ಕುಟುಂಬದ ಯಜಮಾನ ಸಂಸಾರದಲ್ಲಿನ ನೋವುಗಳಿಂದ ಬೇಸತ್ತು ಎರಡೂವರೆ ತಿಂಗಳ ಹಿಂದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಗಂಡ ತೀರಿಕೊಂಡ ಮೇಲೆ ಐವರು ಮಕ್ಕಳನ್ನ ಸಾಕೋಕೆ ತಾಯಿ ಸುಮಿತ್ರ ಹೋರಾಡ್ತಿರೋ ಪರಿ ಅಷ್ಟಿಷ್ಟಲ್ಲ. ಆದ್ರೆ, ಪೌಷ್ಟಿಕ ಆಹಾರದ ಕೊರತೆಯಿಂದ ತಾಯಿಗೂ ನಾನಾ ಕಾಯಿಲೆ. ಕೆಲಸ ಮಾಡೋಕೆ ಆಗ್ತಿಲ್ಲ. ಒಂದು ಗಂಟೆ ಕೆಲಸ ಮಾಡಿದ್ರೆ ತೀವ್ರ ಸುಸ್ತು. ಆದ್ರೆ ಸಂಜೆ ಮಕ್ಕಳ ಹೊಟ್ಟೆ ತುಂಬಿಸೋಕೆ ಕೆಲಸ ತೀರಾ ಅನಿವಾರ್ಯ. ವಾರದಲ್ಲಿ ಎರಡ್ಮೂರು ದಿನ ಮಾತ್ರ ಕೆಲಸ ಮಾಡೋಕಷ್ಟೆ ತಾಯಿ ಶಕ್ತಳು. ಮಕ್ಕಳು ಇನ್ನೂ ಚಿಕ್ಕವು. ಕೂಲಿಗೆ ಹೋದ್ರೆ ನೋಡಿಕೊಳ್ಳೋರು ಯಾರಿಲ್ಲ. ಹಾಗಂತ ಮನೆಯಲ್ಲಿ ಕೂರುವಂತಿಲ್ಲ. ಕಷ್ಟವೋ-ಸುಖವೋ ಪರಿಸ್ಥಿತಿ ಎಂತಹದ್ದಿದ್ರೂ ಕೆಲಸಕ್ಕೆ ಹೋಗಲೇಬೇಕು. ಇರೋಕೆ ಮನೆಯೂ ಇಲ್ಲ. ಸದ್ಯಕ್ಕೆ ಕಾಫಿತೋಟದ ಲೈನ್‍ಗಳಲ್ಲಿನ ಪಾಳು ಬಿದ್ದ ಮನೆಯಲ್ಲಿ ಬದುಕ್ತಿದ್ದಾರೆ. ನಾಲ್ಕು ಜನರಂತೆ ಬದುಕೋಕೆ ಆಶ್ರಯ ಯೋಜನೆ ಮನೆಗಾಗಿ ಎದುರು ನೋಡ್ತಿದ್ದಾರೆ.
Advertisement
Advertisement
ಇವರಿಗೆ ಆಶ್ರಯ ಯೋಜನೆಯಡಿ ಸೈಟ್ ಇದೆ. ಆದ್ರೆ ಅಧಿಕಾರಿಗಳು ಮನೆ ಕಟ್ಟಿಸಿಕೊಡ್ತೀವಿ ಅಂತಾನೇ ದಿನ ದೂಡ್ತಿದ್ದಾರೆ. ದುಡಿದ ದುಡ್ಡು ಜೀವನಕ್ಕೆ ಸಾಕಾಗಾದ ಕಾರಣ ಮನೆಯನ್ನೂ ಕಟ್ಟಿಕೊಳ್ಳಲಿಲ್ಲ. 2007ರಲ್ಲಿ ಇವರಿಗೆ ರೇಷನ್ ಕಾರ್ಡ್ ಇತ್ತು. ಆದ್ರೆ ಯಾವ ಕಾರಣಕ್ಕೆಂದು ಗೊತ್ತಿಲ್ಲ. ಅದನ್ನ ಲ್ಯಾಪ್ಸ್ ಮಾಡಿದ್ದಾರೆ. ಆದ್ದರಿಂದ ಮತ್ತೊಮ್ಮೆ ರೇಷನ್ ಕಾರ್ಡ್‍ಗಾಗಿ ಅರ್ಜಿ ಹಾಕಿದ್ದಾರೆ. ಬದುಕಿಗೆ ಬೆನ್ನೆಲುಬಾಗಿದ್ದ ತಂದೆ ತೀರಿಕೊಂಡ ಮೇಲೆ ತಾಯಿ ಐವರು ಮಕ್ಕಳನ್ನ ಸಾಕೋಕೆ ಪಡ್ತಿರೋ ಕಷ್ಟದಿಂದ 10ನೇ ತರಗತಿ ಹಾಗೂ ಎಂಟನೇ ತರಗತಿ ಓದುತ್ತಿದ್ದ ಇಬ್ಬರು ಮಕ್ಕಳು ಅರ್ಧಕ್ಕೆ ಶಾಲೆ ಬಿಟ್ಟು ಕೂಲಿ ಮಾಡ್ತಿದ್ದಾರೆ. ಹಾಗಾಗಿ ಈ ಕುಟುಂಬ ನಮಗೆ ಒಂದು ರೇಷನ್ ಕಾರ್ಡ್, ಇರೋಕೊಂದು ಮನೆ ಜೊತೆ ಕೊನೆಯ ಇಬ್ಬರು ಮಕ್ಕಳಿಗೆ ಹಾಸ್ಟೆಲ್‍ನಲ್ಲಿ ಓದೋಕೆ ಅನುವು ಮಾಡ್ಕೊಡಿ ಎಂದು ಬೇಡಿಕೊಳ್ತಿದ್ದಾರೆ.
Advertisement
ಒಟ್ಟಾರೆ, ಈ ಕುಟುಂಬವನ್ನ ನೋಡಿದ್ರೆ ಜೀವನ ಎಷ್ಟು ದುಸ್ತರದಲ್ಲಿದೆ ಅನ್ನಿಸುತ್ತೆ. ಆದ್ರೆ ಇಂತಹ ಕಷ್ಟದ ಸ್ಥಿತಿಯಲ್ಲೂ ಒಬ್ಬಂಟಿ ಹೆಂಗಸು ಮಗಳಿಗಾಗಿ ಪಡ್ತಿರೋ ಪಾಡು, ಕಷ್ಟಗಳನ್ನ ಮೆಟ್ಟಿ ನಿಲ್ತಿರೋ ಈಕೆಯ ಧೈರ್ಯಕ್ಕೆ ನಿಜಕ್ಕೂ ಹ್ಯಾಟ್ಸಾಫ್ ಹೇಳಲೇಬೇಕು. ಸುತ್ತಮುತ್ತಲಿನ ಜನ ಹೇಳ್ತಿರೋದು ಅದೇ. ಆದ್ರೆ ಕಷ್ಟ ಅಂದ್ರೆ ಯಾರೂ ಹತ್ತಿರ ಬಾರದಿರೋದು ಮಾತ್ರ ದುರಂತ.
https://www.youtube.com/watch?v=rCklB16P5eM