– ಜ್ಞಾನಾರ್ಜನೆ ಜೊತೆ ಬಂಪರ್ ಗಿಫ್ಟ್ ಬಾಚಿಕೊಂಡ ವಿದ್ಯಾರ್ಥಿಗಳು
ಬೆಂಗಳೂರು: ʼಪಬ್ಲಿಕ್ ಟಿವಿʼ (PUBLiC TV) ಹೆಮ್ಮೆಯ ಪ್ರಸ್ತುತಿ ವಿದ್ಯಾಪೀಠ (Vidyapeeta) 8ನೇ ಆವೃತ್ತಿಯ ಶೈಕ್ಷಣಿಕ ಮೇಳಕ್ಕೆ (Education Expo) ಅದ್ಧೂರಿ ತೆರೆ ಬಿದ್ದಿದೆ. ಎರಡು ದಿನಗಳ ಕಾಲ ನಡೆದ ಅತಿದೊಡ್ಡ ಶೈಕ್ಷಣಿಕ ಮೇಳದಲ್ಲಿ ಸಾವಿರಾರು ವಿದ್ಯಾರ್ಥಿಗಳು ಭಾಗವಹಿಸಿ ಜ್ಞಾನಾರ್ಜನೆ ಪಡೆದುಕೊಂಡರು. ಅಷ್ಟೇ ಅಲ್ಲ ಲ್ಯಾಪ್‌ಟಾಪ್, ಬೈಸಿಕಲ್‌ನಂತಹ ಬಂಪರ್ ಗಿಫ್ಟ್‌ಗಳನ್ನು ಪಡೆದು ಅದೃಷ್ಟವಂತರಾದರು.
2 ದಿನಗಳ ಕಾಲ ನಡೆದ ಎಕ್ಸ್‌ಪೋದಲ್ಲಿ 10,000ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿ ಶಿಕ್ಷಣ ಸಂಸ್ಥೆಗಳ ಬಗ್ಗೆ ಮಾಹಿತಿ ಪಡೆದರು. 120ಕ್ಕೂ ಹೆಚ್ಚು ವಿದ್ಯಾಸಂಸ್ಥೆಗಳು ಒಂದೇ ಸೂರಿನಡಿ ಬಂದು ವಿದ್ಯಾರ್ಥಿಗಳಿಗೆ ಮುಂದಿನ ಶೈಕ್ಷಣಿಕ ಜೀವನಕ್ಕೆ ಮಾರ್ಗದರ್ಶನ ನೀಡಿದವು.
ಮೊದಲ ದಿನ ಅಂದರೆ ಶನಿವಾರ ಪಬ್ಲಿಕ್ ಟಿವಿ ಮುಖ್ಯಸ್ಥರಾದ ಹೆಚ್‌ಆರ್ ರಂಗನಾಥ್ ಜೊತೆ ಗಣ್ಯರು ಕಾರ್ಯಕ್ರಮ ಉದ್ಘಾಟನೆ ಮಾಡಿದರು. ಮೊದಲ ದಿನ ಸಿಇಟಿ, ಕಾಮೆಡ್-ಕೆ, ಸೈಬರ್ ಸೆಕ್ಯೂರಿಟಿ ಬಗ್ಗೆ ಉಪನ್ಯಾಸ ನಡೆಯಿತು. ಮೊದಲ ದಿನವೇ ಲಕ್ಕಿಡಿಪ್ ಮೂಲಕ 6 ಬೈಸಿಕಲ್ ಮತ್ತು ಎರಡು ಲ್ಯಾಪ್‌ಟಾಪ್‌ಗಳನ್ನು ವಿದ್ಯಾರ್ಥಿಗಳು ತಮ್ಮದಾಗಿಸಿಕೊಂಡರು.
2ನೇ ದಿನವಾದ ಇಂದು ಸಾವಿರಾರು ವಿದ್ಯಾರ್ಥಿಗಳು ಎಕ್ಸ್‌ಪೋಗೆ ಭೇಟಿ ನೀಡಿದರು. ಬೆಂಗಳೂರು ಸೇರಿದಂತೆ ಬೇರೆ ಬೇರೆ ಜಿಲ್ಲೆಗಳಿಂದ ವಿದ್ಯಾರ್ಥಿಗಳು, ಪೋಷಕರು ಎಕ್ಸ್‌ಪೋಗೆ ಬಂದು ಮಾಹಿತಿ ಪಡೆದರು. 2ನೇ ದಿನವೂ ಹಲವು ಉಪನ್ಯಾಸ ಕಾರ್ಯಕ್ರಮಗಳು ನಡೆದವು. ಹ್ಯಾಂಡ್‌ರೈಟಿಂಗ್ ಎಕ್ಸ್‌ಪರ್ಟ್ ರಫೀಉಲ್ಲಾ ಬೇಗ್‌ರಿಂದ ಉಪನ್ಯಾಸ, ರೇವಾ ಕಾಲೇಜ್‌ನ ಡಾ. ಸಂಜಯ್ ಆರ್ ಚಿಟ್ನೀಸ್ ಎಐ ಕುರಿತು ಉಪನ್ಯಾಸ ನೀಡಿದರು.
ವಿದ್ಯಾಪೀಠ ಕಾರ್ಯಕ್ರಮದಲ್ಲಿ ಎರಡನೇ ದಿನವೂ ಬಂಪರ್ ಗಿಫ್ಟ್‌ಗಳ ಧಮಾಕ ನಡೆಯಿತು. ಲಕ್ಕಿಡಿಪ್ ಮೂಲಕ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್, ಬೈಸಿಕಲ್ ಗಿಫ್ಟ್ ಸಿಕ್ಕಿತು. 9 ಲಕ್ಕಿ ವಿದ್ಯಾರ್ಥಿಗಳಿಗೆ ಬೈಸಿಕಲ್, 1 ವಿದ್ಯಾರ್ಥಿನಿಗೆ ಲ್ಯಾಪ್‌ಟಾಪ್ ಗಿಫ್ಟ್ ದೊರೆಯಿತು. ಇದೇ ವೇಳೆ ವಿದ್ಯಾರ್ಥಿಗಳು, ಪೋಷಕರಿಗೆ ಫನ್ ಗೇಮ್ ಆಡಿಸಿ ಸರ್ಪ್ರೈಸ್ ಗಿಫ್ಟ್ ನೀಡಲಾಯಿತು.
ಕಾರ್ಯಕ್ರಮದಲ್ಲಿ ಎಕ್ಸ್‌ಪೋಗೆ ಆಗಮಿಸಿದ್ದ ಶಿಕ್ಷಣ ಸಂಸ್ಥೆಗಳಿಗೆ ಪಬ್ಲಿಕ್ ಟಿವಿ ವತಿಯಿಂದ ನೆನಪಿನ ಕಾಣಿಗೆ ನೀಡಿ ಗೌರವಿಸಲಾಯಿತು. `ಇಂದಿನ ಕಲಿಕೆ ನಾಳಿನ ದಾರಿ ದೀಪ’ ಎಂಬ ಧ್ಯೇಯ ವಾಕ್ಯದಡಿಯಲ್ಲಿ ನಡೆದ ಪಬ್ಲಿಕ್ ಟಿವಿಯ ವಿದ್ಯಾಪೀಠ 8ನೇ ಆವೃತ್ತಿ ಯಶಸ್ವಿಯಾಗಿ ಮುಕ್ತಾಯವಾಗಿದ್ದು, ವಿದ್ಯಾರ್ಥಿಗಳ ಶೈಕ್ಷಣಿಕ ಜೀವನಕ್ಕೆ ದಾರಿದೀಪವಾಯಿತು.