– 2ನೇ ದಿನವೂ ವಿದ್ಯಾರ್ಥಿಗಳು, ಪೋಷಕರಿಂದ ಭರ್ಜರಿ ರೆಸ್ಪಾನ್ಸ್
ಎರಡು ದಿನಗಳ ಕಾಲ ನಡೆದ ʻಪಬ್ಲಿಕ್ ಟಿವಿ ವಿದ್ಯಾಮಂದಿರʼ (Public TV Vidhyamandira) 5ನೇ ಆವೃತ್ತಿ ಕಾರ್ಯಕ್ರಮ ಸಂಪನ್ನಗೊಂಡಿದೆ. ನೂರಾರು ಕನಸುಗಳನ್ನ ಅರಳಿಸಿ, ಬದುಕು ಕಟ್ಟಿಕೊಳ್ಳಲು ನೆರವಾದ ಶೈಕ್ಷಣಿಕ ಹಾಗೂ ಉದ್ಯೋಗ ಮೇಳಕ್ಕೆ ವಿದ್ಯಾರ್ಥಿಗಳು, ಪೋಷಕರು ಧನ್ಯವಾದ ತಿಳಿಸಿದ್ದಾರೆ.
ಪಬ್ಲಿಕ್ ಟಿವಿ ಪ್ರಸ್ತುತ ಪಡಿಸುವ AD6 ಅಡ್ವರ್ಟೈಸಿಂಗ್ ಸಹಯೋಗದಲ್ಲಿ 5ನೇ ಆವೃತ್ತಿಯ ವಿದ್ಯಾಮಂದಿರ 2 ದಿನಗಳ ಮೆಗಾ ಶೈಕ್ಷಣಿಕ ಮತ್ತು ಉದ್ಯೋಗ ಮೇಳ ಯಶಸ್ವಿಯಾಗಿ ಮುಕ್ತಾಯಗೊಂಡಿದೆ. ಬೆಂಗಳೂರಿನ ಅರಮನೆ ಮೈದಾನ ಗಾಯತ್ರಿ ವಿಹಾರದಲ್ಲಿ ನಡೆದ ಪಿಜಿ ಶೈಕ್ಷಣಿಕ ಹಾಗೂ ಉದ್ಯೋಗ ಮೇಳಕ್ಕೆ ಕೊನೆಯ ದಿನವಾದ ಇಂದು ಕೂಡ ವಿದ್ಯಾರ್ಥಿಗಳ ದಂಡೇ ಹರಿದು ಬಂದಿತ್ತು. ಈ ಮೆಗಾ ಶೈಕ್ಷಣಿಕ ಮೇಳದಲ್ಲಿ 40ಕ್ಕೂ ಹೆಚ್ಚು ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳು ಹಾಗೂ 20ಕ್ಕೂ ಹೆಚ್ಚು ಕಂಪನಿಗಳು ಭಾಗಿಯಾಗಿದ್ದವು.


ಸಾವಿರಾರು ವಿದ್ಯಾರ್ಥಿಗಳು, ಸ್ನಾತಕೋತ್ತರ ಕೋರ್ಸ್ ಗಳ ಬಗ್ಗೆ ಸಂಪೂರ್ಣ ಮಾಹಿತಿ ಪಡೆದರೆ, ಕೆಲವರು ವಿವಿಧ ಕಂಪನಿಗಳಲ್ಲಿ ಕೆಲಸ ಗಿಟ್ಟಿಸಿಕೊಂಡು ಬದುಕಿನ ದಾರಿ ಕಂಡುಕೊಂಡರು.
ಮೊದಲ ದಿನ 700 ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಪೋಷಕರು ಭೇಟಿ ನೀಡಿದ್ರು. ಕೊನೇ ದಿನವಾದ ಇಂದು ಸ್ನಾತಕೋತ್ತರ ಪದವಿಯ ವಿವಿಧ ಕೋರ್ಸ್ ಗಳಿಗೆ 228 ವಿದ್ಯಾರ್ಥಿಗಳು ನೋಂದಣಿ ಮಾಡಿಕೊಂಡ್ರೆ, 562 ಜನ ಉದ್ಯೋಗಕ್ಕಾಗಿ ವಿವಿಧ ಕಂಪನಿಗಳು ನಡೆಸಿದ ಸಂದರ್ಶನದಲ್ಲಿ ಭಾಗಿಯಾದ್ರು. ಇಂದು ಒಟ್ಟು 790 ಜನ ಈ ಮೇಳದಲ್ಲಿ ಭಾಗಿಯಾಗಿದ್ರು.

ವಿವಿಧ ಶೈಕ್ಷಣಿಕ ಸಂಸ್ಥೆಗಳ ಸ್ಟಾಲ್ ಗಳಿಗೆ ಭೇಟಿ ನೀಡಿದ ವಿದ್ಯಾರ್ಥಿಗಳು, ಉನ್ನತ ವ್ಯಾಸಂಗ, ವಿದೇಶಿ ವ್ಯಾಸಂಗ, ವಿದ್ಯಾರ್ಥಿ ವೇತನ ಸೇರಿದಂತೆ ಹತ್ತಾರು ಪ್ರಶ್ನೆಗಳಿಗೆ, ಗೊಂದಲಗಳಿಗೆ ಪರಿಹಾರ ಕಂಡುಕೊಂಡ್ರು.
ಈ ಮೇಳಕ್ಕೆ ಬಂದ ಉದ್ಯೋಗಕಾಂಕ್ಷಿಗಳಿಗೆ ಅಕನಾಲೇಜರ್ ಫಸ್ಟ್ ಹಾಗೂ ಅನಮೇಟಾ ಐಓಟಿ ಕಂಪನಿಯಿಂದ ಉದ್ಯೋಗವನ್ನ ನೀಡಿತು. ಮೇಳದಲ್ಲಿ ಕೆಲವ್ರು ನೇರ ನೇಮಕಾತಿಯಲ್ಲಿ ಕೆಲಸ ಗಿಟ್ಟಿಸಿಕೊಂಡಿದ್ರೆ, ಇನ್ನೂ ಕೆಲವ್ರು ಮುಂದಿನ ಸುತ್ತಿನ ಸಂದರ್ಶನಗಳಿಗೆ ಅಭ್ಯರ್ಥಿಗಳನ್ನ ಆಯಾ ಕಚೇರಿಗಳಿಗೆ ಆಹ್ವಾನಿಸಿದ್ದಾರೆ.

ಇನ್ನೂ ಲಕ್ಕಿ ಡಿಪ್ ಮೂಲಕ ಐವರು ಸೈಕಲ್ ವಿಜೇತರಾದ್ರು. ಶೈಕ್ಷಣಿಕ ಮೇಳದಲ್ಲಿ ಭಾಗಿಯಾದ ಶಿಕ್ಷಣ ಸಂಸ್ಥೆಗಳಿಗೆ, ಕಂಪನಿಗಳಿಗೆ ಪಬ್ಲಿಕ್ ಟಿವಿ ಸಿಇಒ ಅರುಣ್ ಕುಮಾರ್, ಸಿಒಒ ಪಿ.ಕೆ ಹರೀಶ್ ಕುಮಾರ್ ನೆನಪಿನ ಕಾಣಿಕೆ ನೀಡಿ ಗೌರವಿಸಿದ್ರು. ನೂರಾರು ಹೊಸ ಕನಸುಗಳೊಂದಿಗೆ ಉದ್ಯೋಗಕ್ಕಾಗಿ ಅಲೆದಾಡ್ತಿದ್ದವ್ರಿಗೆ ವಿದ್ಯಾಮಂದಿರ ಅವಕಾಶ ಕಲ್ಪಿಸಿತು.

