ಬೆಂಗ್ಳೂರಲ್ಲಿ ನಕಲಿ ಪ್ಲೇಟ್ ದಂಧೆ – ದುಡ್ಡು ಕೊಟ್ರೆ ಸಿಗುತ್ತೆ ಸಿಎಂ, ಸಚಿವರ ಕಾರ್ ನಂಬರ್

Public TV
4 Min Read
NUMBER PLATE FAKE

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ನಕಲಿ ನಂಬರ್ ಪ್ಲೇಟ್ ಗಳ ಹಾವಳಿ ಹೆಚ್ಚಾಗಿದೆ. ಕೈಗೆ ಕಾಸು ಕೊಟ್ರೆ ಸಾಕು, ಸಿಎಂ, ಮಿನಿಸ್ಟರ್ಸ್, ಹೀಗೆ ಯಾರ ವಾಹನಗಳ ನಂಬರ್‌ಗಳನ್ನಾದ್ರೂ ನಕಲಿ ಮಾಡ್ತಾರೆ. ಇಂತಹ ವ್ಯವಸ್ಥಿತ ಜಾಲವನ್ನ ಪಬ್ಲಿಕ್ ಟಿವಿ ತಂಡ ಪತ್ತೆ ಹಚ್ಚಿದೆ.

FAKE NUMBER PLATE 2

ಇತ್ತಿಚೆಗೆ ರಾಜಧಾನಿ ಬೆಂಗಳೂರಿನಲ್ಲಿ ನಕಲಿ ನಂಬರ್ ಪ್ಲೇಟ್ ಬಳಸಿ ವಾಹನಗಳನ್ನ ಓಡಿಸುವವರ ಸಂಖ್ಯೆ ಹೆಚ್ಚಾಗಿದೆ. ನಿಯಮ ಉಲ್ಲಂಘಿಸಿ, ಕೆಲವು ಸ್ಟೋರ್ ಗಳಲ್ಲಿ ಅವ್ಯಾಹತವಾಗಿ ಡೂಪ್ಲಿಕೇಟ್ ನಂಬರ್ ಪ್ಲೇಟ್‍ಗಳನ್ನ ಯಾವುದೇ ದಾಖಲೆ ಪಡೆಯದೇ ಮಾಡಿಕೊಡಲಾಗ್ತಿದೆ. ಇಂತಹ ವ್ಯವಸ್ಥಿತ ಜಾಲವನ್ನ ನಿಮ್ಮ ಪಬ್ಲಿಕ್ ಟಿವಿ ತಂಡ ರಹಸ್ಯ ಕಾರ್ಯಾಚರಣೆಯ ಮೂಲಕ ಬೇಧಿಸಿದೆ.

NUMBER PLATE

ವಾಹನಗಳಿಗೆ ನಕಲಿ ನಂಬರ್ ಪ್ಲೇಟ್ ಜಾಲವನ್ನು ಸ್ಟಿಂಗ್ ಆಪರೇಷನ್ ಮೂಲಕ ನಿಮ್ಮ ಪಬ್ಲಿಕ್ ಟಿವಿ ಬಯಲು ಮಾಡಿದೆ. ಜೆಸಿನಗರ, ಯಶವಂತಪುರ, ಶಿವಾಜಿನಗರ ಸೇರಿದಂತೆ ನಗರದ ಹಲವು ಏರಿಯಾಗಳಲ್ಲಿ ಮೆಕಾನಿಕ್ ಶಾಪ್‍ಗಳಲ್ಲಿಯೇ ನಕಲಿ ನಂಬರ್ ಪ್ಲೇಟ್ ದಂಧೆ ರಾಜಾರೋಷವಾಗಿ ನಡೀತಿದೆ. ನೀವು ಯಾವುದೇ ವಾಹನ ಕೊಡೊಯ್ದು, ನಂಬರ್ ಪ್ಲೇಟ್ ಚೇಂಜ್ ಮಾಡಿಕೊಡಿ ಅಂದ್ರೆ, ಯಾವುದೇ ದಾಖಲೆ ಕೇಳದೇ ರೆಡಿ ಮಾಡಿಕೊಡ್ತಾರೆ. ಅವರು ಕೇಳಿದಷ್ಟು ದುಡ್ಡು ಕೊಡಬೇಕು. ಕೇವಲ 20 ನಿಮಿಷದಲ್ಲಿ ನಕಲಿ ನಂಬರ್ ಪ್ಲೇಟ್‌ ರೆಡಿ ಆಗುತ್ತೆ.

FAKE NUMBER PLATE

ನಮ್ಮ ತಂಡ ಮೊದಲಿಗೆ ಸಿಎಂ ಬಸವರಾಜ ಬೊಮ್ಮಾಯಿ ಅವರ ಸರ್ಕಾರಿ ಕಾರಿನ ಪರವಾನಗಿ ಸಂಖ್ಯೆ ಸಂಗ್ರಹಿಸಿ, ನಂಬರ್ ಪ್ಲೇಟ್ ಮಾಡಿಕೊಡಿ ಅಂದ್ವಿ ಅಷ್ಟೆ. ಹಿಂದೆ ಮುಂದೆ ನೋಡದೇ ಇಂತಿಷ್ಟೆ ದುಡ್ಡಾಗುತ್ತೆ, 20 ನಿಮಿಷ ಬಿಟ್ಟು ಬನ್ನಿ ಅಂತ ನಕಲಿ ಡೀಲರ್ ಹೇಳಿದ್ದಾನೆ.

ಸ್ಟಿಂಗ್ ಸ್ಥಳ: ಜೆಸಿ ನಗರ
ಪ್ರತಿನಿಧಿ: ಅದೇನಾದ್ರೂ ಡಾಕ್ಯೂಮೆಂಟ್ ಬೇಕಾ..?
ನಕಲಿ ಡೀಲರ್: ಏನು ಬೇಡ? ಬರಿ ಗಾಡಿ ನೇಮ್ ಹೇಳಿ ಅಷ್ಟೆ
ಪ್ರತಿನಿಧಿ: ಡಿಸೈನ್ ತೋರಿಸಿ ಸರ್? ಎಷ್ಟೊತ್ತಾಗುತ್ತೆ?
ನಕಲಿ ಡೀಲರ್: 20 ನಿಮಿಷ ಆಗುತ್ತೆ
ಪ್ರತಿನಿಧಿ: ಮಾಡಿ..
ನಕಲಿ ಡೀಲರ್: ಇದೇ ಕರೆಕ್ಟ್ ನಂಬರ್.. ಕೆಎ 05 ಜಿಎ9000.. ಕೊಡಿ.. 500 ರೂಪಾಯಿ. 20 ನಿಮಿಷ ಆದ್ಮೇಲೆ ಬನ್ನಿ

NUMBER PLATE FAKE 2

ಹೀಗೆ ಯಾವುದೇ ದಾಖಲೆಗಳನ್ನ ಸಂಗ್ರಹಿಸಿಕೊಳ್ಳದೇ, ಓಪನ್ ಆಗಿ ನಕಲಿ ನಂಬರ್ ಪ್ಲೇಟ್ ಗಳನ್ನ ಮಾಡಿಕೊಡ್ತಾನೆ. ವಾಹನಕ್ಕೆ ನಂಬರ್ ಪ್ಲೇಟ್ ಮಾಡಿಕೊಡಲು, ಆ ವಾಹನದ ಚಾಸಿ ನಂಬರ್, ಆರ್ ಸಿ ಕಾರ್ಡ್, ಡಿಎಲ್, ಫೋನ್ ನಂಬರ್ ಕೊಡಬೇಕು. ಅದು ಕೂಡ ಅಧಿಕೃತವಾಗಿ ಸರ್ಕಾರದಿಂದ ಗುತ್ತಿಗೆ ಪಡೆದಿರುವ ಡೀಲರ್ ಗಳೇ ನಂಬರ್ ಪ್ಲೇಟ್‍ಗಳನ್ನ ಹಾಕಿಕೊಡಬೇಕು. ಆದರೆ ಇದ್ಯಾವ ನಿಯಮಗಳು ಇಲ್ಲಿ ಪಾಲನೆಯಾಗ್ತಿಲ್ಲ. ಇದನ್ನೂ ಓದಿ: ದ.ಕನ್ನಡದಲ್ಲಿ ಪೊಲೀಸ್ ಬಂದೋಬಸ್ತ್ ಕಡಿಮೆ ಇದ್ದು, ಹೆಚ್ಚಿಸಬೇಕು: ಡಿಜಿಪಿ ಪ್ರವೀಣ್ ಸೂದ್

ಕೇವಲ ಸಿಎಂ ಅವರ ಸರ್ಕಾರಿ ಕಾರಿನ ನಂಬರ್ ಮಾತ್ರವಲ್ಲ, ಆರೋಗ್ಯ ಸಚಿವರ ಕಾರಿನ ನಂಬರ್ ಪ್ಲೇಟ್‍ನ್ನು ಥೇಟ್ ಹಾಗೇ ಮಾಡಿಕೊಟ್ಟಿದ್ದಾರೆ. ಇದು ಕೂಡ ಸರ್ಕಾರಿ ವಾಹನ. ವಾಹನಕ್ಕೆ ಸಂಬಂಧಪಟ್ಟ ಯಾವ ದಾಖಲೆಗಳನ್ನೂ ಪರಿಶೀಲಿಸಲಿಲ್ಲ. ನಂಬರ್ ಪ್ಲೇಟ್ ಮಾಡಿಕೊಡಿ ಅಂತಿದ್ದಂತೆ ಸೈ ಎಂದು ಹೇಳಿದ.

FAKE NUMBER PLATE 1

ಸ್ಟಿಂಗ್ ಸ್ಥಳ: ಜೆಸಿ ನಗರ
ಪ್ರತಿನಿಧಿ: ಎಷ್ಟಾಗುತ್ತೆ ಸರ್?
ನಕಲಿ ಡೀಲರ್: 500 ರೂ. ಆಗುತ್ತೆ ಸರ್
ಪ್ರತಿನಿಧಿ: ಎಷ್ಟೊತ್ತು ಆಗುತ್ತೆ ಸರ್?
ನಕಲಿ ಡೀಲರ್: 10 ನಿಮಿಷ ಆಗುತ್ತೆ
ಪ್ರತಿನಿಧಿ: ಕಡಿಮೆ ಇಲ್ವಾ ಸರ್?
ನಕಲಿ ಡೀಲರ್: ಕಡಿಮೆನೆ ಅದು. ಬೇರೆ ಸಾವಿರ ರೂಪಾಯಿ ಇದೆ. ನಮ್ದು ಹೋಲ್‍ಸೆಲ್.
ಪ್ರತಿನಿಧಿ: ಕೆಎ 50 ಜಿ3555
ನಕಲಿ ಡೀಲರ್: ಒಂದು ಸಿಂಗಲ್ ಆ..?
ನಕಲಿ ಡೀಲರ್: ಯೆಲ್ಲೋ ಬೋರ್ಡಾ…ವೈಟ್ ಬೋರ್ಡಾ..?
ಪ್ರತಿನಿಧಿ: ವೈಟ್ ಬೋರ್ಡ್..ಡಾಕ್ಯುಮೆಂಟ್ ಏನಾದ್ರು ಬೇಕಾ..?
ನಕಲಿ ಡೀಲರ್: ಏನೂ ಬೇಡ..
ಪ್ರತಿನಿಧಿ: ಕೊಡಿ ಸರ್ ಕಾಸು..?
ನಕಲಿ ಡೀಲರ್: ಫೋನ್ ಪೇ ಇದೆಯಾ

NUMBER PLATE 2

ಅಧಿಕೃತ ಡೀಲರ್ ಶಿಪ್ ಇಲ್ಲದಿದ್ರೂ, ಪಂಚಿಂಗ್ ನಂಬರ್ ಪ್ಲೇಟ್ ಕೊಟ್ಟು ನಕಲಿ ಡೀಲರ್ ಗಳು ಕಾಸು ಮಾಡಿಕೊಳ್ತಿದ್ದಾರೆ. ಸಹಜವಾಗಿ ವಾಹನಗಳ ನಂಬರ್ ಪ್ಲೇಟ್‍ಗಳಿಗೆ ಹೈ ಸೆಕ್ಯೂರಿಟಿ ರಿಜಿಸ್ಟ್ರೇಷನ್ ನಂಬರ್ ಅಳವಡಿಕೆಯಾಗಿರಬೇಕು. ಅಂತಹ ನಂಬರ್ ಪ್ಲೇಟ್‍ಗಳು ವ್ಯಾಲಿಡ್ ಆಗಿರುತ್ತೆ.

ಸಿಎಂ, ಹೆಲ್ತ್ ಮಿನಿಸ್ಟರ್ ಆಯ್ತು. ಈಗ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ ಕಾರಿನ ನಂಬರ್ ಪ್ಲೇಟನ್ನು ಡೂಪ್ಲಿಕೇಟ್ ಮಾಡಿಕೊಟ್ಟಿದ್ದಾರೆ. ಕನಿಷ್ಟ ಪಕ್ಷ ಕಾರು ಮಾಲೀಕರು ಯಾರು. ನಂಬರ್ ಪ್ಲೇಟ್ ಗೆ ಆರ್ಡರ್ ಕೊಡ್ತಿರೋರು ಯಾರು.? ಅವ್ರ ಫೋನ್ ನಂಬರ್ ಗಳನ್ನ ಕಲೆಕ್ಟ್ ಮಾಡ್ಕೊಬೇಕಿತ್ತು. ಆದ್ರೆ ಅದ್ಯಾವುದೂ ಆಗ್ತಿಲ್ಲ. ಹೋಗಿದ್ ಕಡೆಯಲ್ಲ, ಗಾಡಿ ಡಾಕ್ಯೂಮೆಂಟ್ಸ್ ಬೇಕಾ ಅಂತ ಬಾಯ್ಬಿಟ್ಟು ಕೇಳಿದ್ರೂ ನೋ ವರಿ ಅನ್ನೋ ಉತ್ತರನೇ ಸಿಗ್ತಿದೆ.

NUMBER PLATE 3

ಸಿಟಿ ರವಿ ಕಾರ್ ನಂಬರ್ ಪ್ಲೇಟ್ ನಕಲು..!
ಸ್ಟಿಂಗ್ ಸ್ಥಳ: ಜೆಸಿ ನಗರ
ಪ್ರತಿನಿಧಿ: ಗಾಡಿ ಡಾಕ್ಯುಮೆಂಟ್ ಬೇಕಾ.?
ನಕಲಿ ಡೀಲರ್: ಏನು ಬೇಕಾಗಿಲ್ಲ. ನೀವು ನಂಬರ್ ಕೊಟ್ರೆ, ನಂಬರ್ ಪ್ಲೇಟ್ ಕೊಡ್ತಿವಿ ಅಷ್ಟೆ.. ನಂಬರ್ ಪ್ಲೇಟ್‍ಗೆ ಬೀಡಿಂಗ್ ಬೇಕಾ?
ಪ್ರತಿನಿಧಿ: ಬೇಡ ಬಿಡಿ ಸದ್ಯಕ್ಕೆ
ನಕಲಿ ಡೀಲರ್: ಲುಕ್ ಚೆನ್ನಾಗಿ ಬರುತ್ತೆ. ನಂಬರ್ ಪ್ಲೇಟ್ ಬೆಂಡಾಗಲ್ಲ. ಎಲ್ಲರೂ ತಗೋತಾರೆ.
ಪ್ರತಿನಿಧಿ: ಬಿಲ್ ಒಂದು ಹಾಕಿಕೊಡಿ..!
ನಕಲಿ ಡೀಲರ್: ಬಿಲ್ ಬರಲ್ಲ ಬಯ್ಯ
ಪ್ರತಿನಿಧಿ: ಪೇಪರ್‍ನಲ್ಲಾದ್ರೂ ಬರ್ದು ಕೊಡಿ
ನಕಲಿ ಡೀಲರ್: ಪೇಪರ್ ನಲ್ಲೂ ಬರ್ದು ಕೊಡಲ್ಲ

ಸಾರಿಗೆ ಇಲಾಖೆಯಿಂದ ನಂಬರ್ ಪ್ಲೇಟ್‍ಗಳನ್ನ ಮಾಡಿಕೊಡಲು ಟೆಂಡರ್ ನೀಡಲಾಗುತ್ತೆ. ಡೀಲರ್ ಶಿಪ್ ತೊಗೊಂಡವರು ಮಾತ್ರ ನಂಬರ್ ಪ್ಲೇಟ್ ಗಳನ್ನ ಮಾಡಿಕೊಡಬೇಕು. ಕಾನೂನುಬಾಹಿರವಾಗಿ ನಂಬರ್ ಪ್ಲೇಟ್ ಗಳನ್ನ ಹಾಕಿಕೊಟ್ರು, ಸಾರಿಗೆ ಇಲಾಖೆಯ ಅಧಿಕಾರಿಗಳು ಈ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ. ಇಂತಹ ಸ್ಟೋರ್ ಗಳಿಗೂ ವಾರ್ನ್ ಮಾಡಿಲ್ಲ. ದುಷ್ಟರು ಯಾವ್ಯಾವುದೋ ವಾಹನಗಳಿಗೆ ನಕಲಿ ನಂಬರ್ ಪ್ಲೇಟ್ ಅಳವಡಿಸಿಕೊಳ್ತಾರೆ. ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡ್ತಾರೆ. ಕ್ರಿಮಿನಲ್ ಆಕ್ಟಿವಿಟಿವ್ಸ್‍ಗೂ ಬಳಸಿಕೊಳ್ತಿದ್ದಾರೆ. ಸಾರಿಗೆ ಇಲಾಖೆ ಬೇಜವಾಬ್ದಾರಿಯನ್ನ ಬದಿಗಿಟ್ಟು, ಇಂತಹ ವ್ಯವಸ್ಥಿತ ಜಾಲವನ್ನ ಮಟ್ಟಹಾಕಬೇಕಿದೆ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *