ಬೆಂಗಳೂರು: ಪ್ರೆಸ್ ಕ್ಲಬ್ ಆಫ್ ಬೆಂಗಳೂರು (Press Club Of Bangalore) ನೀಡುವ 2023ನೇ ಸಾಲಿನ ಪ್ರತಿಷ್ಠಿತ ವಾರ್ಷಿಕ ಪ್ರಶಸ್ತಿ ಕಾರ್ಯಕ್ರಮದಲ್ಲಿ ಪಬ್ಲಿಕ್ ಟಿವಿಯ (PUBLiC TV) ಕಾರು ಚಾಲಕ ವಿಜಯ್ ಕುಮಾರ್ (Vijay Kumar) ಅವರನ್ನು ಸನ್ಮಾನಿಸಲಾಗಿದೆ.
ಬೆಂಗಳೂರು ಮಳೆ ಪ್ರವಾಹದ ವೇಳೆ ಅಂಡರ್‌ಪಾಸ್‌ನಲ್ಲಿ ಸಿಲುಕಿದ್ದ ಕಾರಲ್ಲಿದ್ದವರನ್ನು ಜೀವದ ಹಂಗು ತೆರೆದು ರಕ್ಷಿಸಿದ್ದಕ್ಕೆ ಸಿಎಂ ಸಿದ್ದರಾಮಯ್ಯ (CM Siddaramaiah) ಮತ್ತು ಡಿಕೆ ಶಿವಕುಮಾರ್ (DK Shivakumar) ಅವರು ವಿಜಯ್ ಕುಮಾರ್ ಅವರನ್ನು ಗೌರವಿಸಿದ್ದಾರೆ.
ಯಾಕೆ ಸನ್ಮಾನ?
ಮೇ 21 ರಂದು ಬೆಂಗಳೂರಿನಲ್ಲಿ(Bengaluru) ಭಾರೀ ಮಳೆಯಾಗಿತ್ತು. ಆ ದಿನ ಸಂಜೆ ಮಳೆಯಿಂದ ಜಲಾವೃತವಾಗಿದ್ದ ಕೆಆರ್ ವೃತ್ತದ ಅಂಡರ್ ಪಾಸ್‍ನಲ್ಲಿ ಜೀವನ್ಮರಣದ ನಡುವೆ ಹೋರಾಟ ಮಾಡುತ್ತಿದ್ದವರನ್ನು ವಿಜಯ್ ಕುಮಾರ್ ಪ್ರಾಣದ ಹಂಗು ತೊರೆದು ರಕ್ಷಣೆ ಮಾಡಿದ್ದರು. ಇದನ್ನೂ ಓದಿ: ಪ್ರಾಣ ಉಳಿಸಲು ಉಟ್ಟ ಸೀರೆ ಬಿಚ್ಚಿಕೊಟ್ಟ ಮಹಾತಾಯಿ ಮತ್ತು `ಪಬ್ಲಿಕ್ ಟಿವಿ’ಯ ಈ ಇಬ್ಬರು ಹೀರೋಗಳು..!
ವಿಜಯ್ ಕುಮಾರ್ ನೀರಿಗೆ ಇಳಿದು ಐವರನ್ನು ರಕ್ಷಣೆ ಮಾಡಿದ್ದರು. ಇದೇ ವೇಳೆ ಅದೇ ರಸ್ತೆಯಲ್ಲಿ ತೆರಳುತ್ತಿದ್ದ ಕ್ವಿಕ್ ರೆಸ್ಕ್ಯೂ ಟೀಂ ವಾಹನವನ್ನು ತಡೆದ ನಮ್ಮ ಪ್ರತಿನಿಧಿ ನಾಗೇಶ್ ಸಹಾಯಕ್ಕೆ ನೆರವಾಗುವಂತೆ ಮನವಿ ಮಾಡಿದ್ದರು. ಆದರೆ ಅದನ್ನು ನಂಬದ ಸಿಬ್ಬಂದಿಗೆ ಲೋಗೋ ತೋರಿಸಿ, ಕೂಡಲೇ ಬನ್ನಿ ಎಂದು ಮತ್ತೊಮ್ಮೆ ಮನವಿ ಮಾಡಿದ್ದಾರೆ. ಆಗ ನೆರವಿಗೆ ಬಂದ ಕ್ವಿಕ್ ರೆಸ್ಕ್ಯೂ ಟೀಂ ರಕ್ಷಣಾ ಕಾರ್ಯ ನಡೆಸಿತು. ಕೆಳಗಿದ್ದವರನ್ನು ರಕ್ಷಿಸಲು ಮಹಿಳೆಯೊಬ್ಬರು ತಾವು ಧರಿಸಿದ್ದ ತಮ್ಮ ಸೀರೆಯನ್ನು ಬಿಚ್ಚಿ ಹಗ್ಗದಂತೆ ಬಳಸಲು ನೀಡಿದ್ದರು.
ಇದಕ್ಕೆ ಸಂಬಂಧಿಸಿದ ದೃಶ್ಯಗಳು ವೈರಲ್ ಆಗುತ್ತಲೇ ಮೆಚ್ಚುಗೆಯ ಮಹಾಪೂರವೇ ಹರಿದುಬಂದಿತ್ತು. ಪಬ್ಲಿಕ್ ಟಿವಿ ವತಿಯಿಂದ ಸನ್ಮಾನ ಮಾಡಲಾಗಿತ್ತು. ವಿಜಯ್ ಕುಮಾರ್ ಅವರನ್ನು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್, ಸಂಚಾರಿ ಇಲಾಖೆ ಜಂಟಿ ಆಯುಕ್ತ ಅನುಚೇತ್ ಸನ್ಮಾನಿಸಿ, 10 ಸಾವಿರ ರೂ. ನಗದು ಪುರಸ್ಕಾರ ನೀಡಿ ಪ್ರಶಂಸೆ ವ್ಯಕ್ತಪಡಿಸಿದ್ದರು.