ಹಾವೇರಿ: ಮನೆಯಲ್ಲಿ ಕಿತ್ತು ತಿನ್ನುವ ಬಡತನ. ಜೊತೆಗೆ ಕೈಲಾಗದಿರುವ ವಯಸ್ಸಾದ ದಂಪತಿ. ತಂದೆ ತಾಯಿಯನ್ನು ಕಳೆದುಕೊಂಡ ಈ ಅನಾಥ ಮಕ್ಕಳಿಗೆ ಈಗ ಅಜ್ಜ-ಅಜ್ಜಿಯೇ ಆಸರೆ. ಹೌದು ಇದು ಹಾವೇರಿ ಜಿಲ್ಲೆಯ ರಾಣೇಬೆನ್ನೂರು ತಾಲೂಕಿನ ಕರೂರು ಗ್ರಾಮದ ಕರುಣಾಜನಕ ಕಥೆ.
ವಿದ್ಯಾ ಮತ್ತು ವಿಜಯ್ ಚಿಕ್ಕ ವಯಸ್ಸಿನಲ್ಲಿಯೇ ತಂದೆ-ತಾಯಿಯನ್ನು ಕಳೆದುಕೊಂಡ ನತದೃಷ್ಠರು. ಆದರೆ ಇವರನ್ನು ಅನಾಥರನ್ನಾಗಿಸದೇ ಈ ಅಜ್ಜಸ-ಅಜ್ಜಿ ಸಾಕಿ ಸಲುಹಿದ್ದಾರೆ. ವಿದ್ಯೆ ಬುದ್ಧಿಯನ್ನೂ ಕಲಿಸಿದ್ದಾರೆ. ವಿದ್ಯಾ ಮತ್ತು ವಿಜಯ್‍ಗೆ ಶಿಕ್ಷಣ ಕೊಡಿಸುವಲ್ಲಿ ಅಜ್ಜ ಕಾಂತಪ್ಪ, ಅಜ್ಜಿ ಗಿರಿಜಮ್ಮನ ಅವಿರತ ಪರಿಶ್ರಮ ಇದೆ. ಇದರ ಪರಿಣಾಮವಾಗಿ ವಿದ್ಯಾ ಎಸ್‍ಎಸ್‍ಎಲ್‍ಸಿಯಲ್ಲಿ 66%, ಪಿಯುಸಿಯಲ್ಲಿ 86% ಹಾಗೂ ಬಿಎ ಪದವಿಯಲ್ಲಿ 80% ಅಂಕ ಪಡೆದಿರುವ ಪ್ರತಿಭಾವಂತೆ.
ಸಣ್ಣ ವಯಸ್ಸಿನಲ್ಲಿಯೇ ತಂದೆ-ತಾಯಿ ಇಲ್ಲದ ತಬ್ಬಲಿ ಮಕ್ಕಳಿಗೆ ಅಜ್ಜ-ಅಜ್ಜಿ ಆಸರೆಯಾಗಿ ಜಮೀನಿನಲ್ಲಿ ಕೂಲಿ ಕೆಲಸ ಮಾಡಿಕೊಂಡು ವಿದ್ಯಾ ಹಾಗೂ ವಿಜಯ್ ಗೆ ಶಿಕ್ಷಣ ಕೊಡಿಸಿದ್ದಾರೆ. ಈಗ ಅಜ್ಜ-ಅಜ್ಜಿಗೆ ವಯಸ್ಸಾಗಿದೆ. ವಿಜಯ್ ಹೆಸ್ಕಾಂ ಕಚೇರಿಯಲ್ಲಿ ಕಡಿಮೆ ಸಂಬಳಕ್ಕೆ ಕೆಲಸ ಮಾಡುತ್ತಾ ಮನೆಯನ್ನು ನಡೆಸುತ್ತಿದ್ದಾನೆ. ಆದರೆ ವಿದ್ಯಾ ಎಂಎ, ಬಿಎಡ್ ಓದಿ ಶಿಕ್ಷಕಿಯಾಗಬೇಕೆಂಬ ಕನಸು ಕಂಡಿದ್ದಾಳೆ. ಆದ್ರೆ ಬಡ ಪ್ರತಿಭಾವಂತೆಗೆ ಮುಂದೆ ಓದುವ ಆಸೆಗೆ ಬಡತನ ಅಡ್ಡಿಯಾಗಿದೆ.
ಬಡತನದಲ್ಲಿಯೂ ವಿದ್ಯೆಯ ಮಹತ್ವನ್ನು ಅರಿತಿರುವ ವಿದ್ಯಾ ಪಬ್ಲಿಕ್ ಟಿವಿಯ ಬೆಳಕು ಕಾರ್ಯಕ್ರಮದ ಮೂಲಕ ತನ್ನ ವಿದ್ಯಾಭ್ಯಾಸ ಕನಸನ್ನು ನನಸು ಮಾಡಿಕೊಳ್ಳುವ ತವಕದಲ್ಲಿದ್ದಾರೆ. ಯಾರಾದ್ರೂ ದಾನಿಗಳು ಬಡ ಪ್ರತಿಭಾವಂತೆಗೆ ಸಹಾಯ ಮಾಡುತ್ತಾರೆಂಬ ವಿಶ್ವಾಸ ನಮ್ಮದು.
https://www.youtube.com/watch?v=hKfGWTvhXcE