ಡ್ರಮ್ ತೆಪ್ಪದಲ್ಲಿ ಕೆರೆ ದಾಟುವ ಗ್ರಾಮದ ಜನರಿಗೆ ಬೇಕಿದೆ ಶಾಶ್ವತ ಪರಿಹಾರ

Public TV
1 Min Read
CKB BELAKU 3

ಚಿಕ್ಕಬಳ್ಳಾಪುರ: ಕಳೆದ ವರ್ಷ ಸುರಿದ ಮಳೆಗೆ ಕೆರೆ ತುಂಬಿ ತುಳುಕುತ್ತಿದ್ದು, ಹಲವು ವರ್ಷಗಳಿಂದ ಇದ್ದ ರಸ್ತೆಯ ಸಂಪರ್ಕವನ್ನೇ ಕಡಿದು ಹಾಕಿದೆ. ಹೀಗಾಗಿ ಒಂದಲ್ಲ ಎರಡಲ್ಲ ನಾಲ್ಕು ಗ್ರಾಮಗಳ ಜನ ದಿನನಿತ್ಯ ತಮ್ಮ ಪ್ರಾಣವನ್ನ ಪಣಕ್ಕಿಟ್ಟು ಕೆರೆ ದಾಟಬೇಕಾದ ಅನಿವಾರ್ಯ ಪರಿಸ್ಥಿತಿಯಾಗಿದೆ.

ಹೌದು. ಇದು ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ತಲಕಾಯಲಬೆಟ್ಟ ಗ್ರಾಮಸ್ಥರ ಕಥೆಯಾಗಿದೆ. ಹಲವು ವರ್ಷಗಳಿಂದ ಇದ್ದ ರಸ್ತೆಯಲ್ಲಿ ನೀರು ತುಂಬಿ ಕೆರೆಯಂತಾಗಿದೆ. ದಡ ಸೇರೋಕೆ ಶಾಲಾ ಮಕ್ಕಳು, ಮಹಿಳೆಯರು, ಗ್ರಾಮಸ್ಥರು ಪ್ರತಿದಿನ ಡ್ರಮ್‍ಗಳ ಮೂಲಕ ನಿರ್ಮಿಸಿಕೊಂಡಿರುವ ತೆಪ್ಪದಲ್ಲಿ ಪ್ರಾಣ ಪಣಕ್ಕಿಟ್ಟು ಹರಸಾಹಸ ಪಡುತ್ತಿದ್ದಾರೆ.

CKB BELAKU 2

ದಡ ಸೇರಲು ಸಾಹಸ ಪಡ್ತಿರೋ ಈ ಮಾರ್ಗವು ಈ ಹಿಂದೆ ರಸ್ತೆಯಾಗಿತ್ತು. ವರ್ಷದ ಹಿಂದೆ ಸುರಿದ ಮಳೆಗೆ ಕೆರೆ ತುಂಬಿ ರಸ್ತೆಯು ಮುಚ್ಚಿಕೊಂಡಿದೆ. ರಸ್ತೆ ಸಂಪೂರ್ಣ ಜಲಾವೃತಗೊಂಡಿದೆ. ಆದಾಗಿ ತಲಕಾಯಲಬೆಟ್ಟ ಹಾಗೂ ದಾಸರಹಳ್ಳಿ, ಬುಡಗವಾರಹಳ್ಳಿ, ಮರಳಪ್ಪನಹಳ್ಳಿ, ಅಲಗುರ್ಕಿ ಗ್ರಾಮಕ್ಕೆ ಹೋಗುವ ಪ್ರಮುಖ ರಸ್ತೆಯ ಸಂಪರ್ಕವನ್ನೇ ಕಡಿತಗೊಳಿಸಿದೆ. ದಯಮಾಡಿ ನಮಗೆ ದಾರಿ ಮಾಡಿಕೊಡಿ ಎಂಬ ಗ್ರಾಮಸ್ಥರ ಮನವಿಗೆ ಇದುವರೆಗೂ ಸ್ಪಂದನೆ ಸಿಕ್ಕಿಲ್ಲ ಜೊತೆಗೆ ಕೆರೆಯಲ್ಲಿನ ನೀರು ಹೊರ ಬಿಡಬಾರದೆಂದು ಜಿಲ್ಲಾಧಿಕಾರಿಗಳು ಆದೇಶ ನೀಡಿದ್ದಾರೆ.

ಪರ್ಯಾಯ ಮಾರ್ಗದಲ್ಲಿ ಪ್ರಯಾಣಿಸಿದ್ರೆ ಪಕ್ಕದ ಗ್ರಾಮಕ್ಕೆ ಹೋಗಲು ಸುಮಾರು 8ಕೀ.ಮೀ. ಪ್ರಯಾಣಿಸಬೇಕು. ಇಲ್ಲದಿದ್ರೆ ಕೆರೆ ದಾಟಿ ಹೋಗಲೇಬೇಕಾದ ಅನಿವಾರ್ಯತೆ ಇಲ್ಲಿನ ಗ್ರಾಮಸ್ಥರದ್ದು. ಹಾಗಾಗಿ ತಲಕಾಯಲಬೆಟ್ಟದ ಕೆರೆ ಮತ್ತಷ್ಟು ಪ್ರಾಣ ತೆಗೆದುಕೊಳ್ಳುವ ಮುನ್ನ ಕೆರೆಗೆ ಸೇತುವೆ ನಿರ್ಮಿಸಿ ಶಾಶ್ವತ ಪರಿಹಾರ ಓದಗಿಸಿಕೊಡಿ ಅಂತ ಗ್ರಾಮಸ್ಥರು ಪಬ್ಲಿಕ್ ಟಿವಿಯ ಬೆಳಕು ಕಾರ್ಯಕ್ರಮದ ಮೂಲಕ ಕೇಳಿಕೊಳ್ಳುತ್ತಿದ್ದಾರೆ.

https://www.youtube.com/watch?v=sV_lrubYgJI

Share This Article