ಓದಿನ ಕಾರಣದಿಂದಾಗಿಯೇ ‘ಸಾಮಾಜಿಕ ಬಹಿಷ್ಕಾರ’ಕ್ಕೆ ಒಳಗಾಗಿದ್ದ ಯುವತಿ ಪ್ರವಾಹದ ವಿರುದ್ಧ ಈಜಿದ ಪರಿಣಾಮ ಈಗ ‘ಅತ್ಯಂತ ಹಿಂದುಳಿದ ‘ಯರವ’ ಬುಡಕಟ್ಟು ಸಮುದಾಯದ ಪಾಲಿಗೆ ಆಶಾ ಕಿರಣವಾಗಿ ಬೆಳೆದಿದ್ದಾರೆ. ಅವರೇ ಸಾಧಕಿ ಆಶಾ.
ಕಡು ಬಡತನದ ನಡುವೆಯೂ ಸಾಮಾಜಿಕ ಅನಿಷ್ಟಗಳ ಅಡೆತಡೆಗಳ ಮಧ್ಯೆ ಕಂಡ ಕನಸು ಈಡೇರಿಸಿಕೊಳ್ಳುವ ಛಲದೊಂದಿಗೆ ಓದಿ ಬೆಳೆದವರು ಆಶಾ. ಇವತ್ತು ಅತ್ಯಂತ ಹಿಂದುಳಿದ ಯರವ ಬುಡಕಟ್ಟು ಸಮುದಾಯದ ಮೊದಲ ಸ್ನಾತಕೋತ್ತರ ಪದವೀಧರೆ ಆಗಿದ್ದಾರೆ. ಮೈಸೂರು ಜಿಲ್ಲೆ ಹೆಚ್.ಡಿ.ಕೋಟೆ ತಾಲ್ಲೂಕಿನ ಅಂಶನಾಥಪುರದ, 33 ವರ್ಷದ ಆಶಾ ಈಗ ಇಡೀ ಯರವ ಸಮುದಾಯದ ಆಸ್ತಿ. ಸಾಮಾಜಿಕ ಕಾರ್ಯಕರ್ತೆಯಾಗಿ ಆದಿವಾಸಿಗಳಿಗೆ ನೆರವು ನೀಡುವ ಕೆಲಸವನ್ನು ಮಾಡ್ತಿದ್ದಾರೆ. ಇದನ್ನೂ ಓದಿ: ಪ್ರೆಸಿಡೆನ್ಸಿ ಗ್ರೂಪ್ ಆಫ್ ಸ್ಕೂಲ್ಸ್‌ನ ಶಕ್ತಿ ಡಾ. ನಫೀಸಾ ಅಹಮದ್‌ಗೆ ನಾರಿ ನಾರಾಯಣಿ ಪ್ರಶಸ್ತಿ

ಮೈಸೂರಿನ ಮಾನಸಗಂಗೋತ್ರಿಯಲ್ಲಿ 14 ವರ್ಷದ ಹಿಂದೆ ಎಂಎಸ್‌ಡಬ್ಲ್ಯೂ ಪದವಿಯನ್ನು 2ನೇ ರ‍್ಯಾಂಕ್‌ನೊಂದಿಗೆ ಪಡೆದಿದ್ದಾರೆ. ಸ್ವಗ್ರಾಮದಲ್ಲೇ ‘ಯುವಚೇತನ ಫೌಂಡೇಷನ್’ ಕಟ್ಟಿರುವ ಇವರು ಬುಡಕಟ್ಟು ಯುವಜನರಿಗೆ ಸ್ವಾವಲಂಬನೆ, ನಾಯಕತ್ವ, ಉನ್ನತ ಶಿಕ್ಷಣದ ಮಹತ್ವದ ಬಗ್ಗೆ ತಿಳಿಸಿ ಅವರ ಔನತ್ಯಕ್ಕೆ ದುಡಿಯುತ್ತಿದ್ದಾರೆ. ಮೊದಲ ಪೀಳಿಗೆಯ ಅಕ್ಷರಸ್ಥರಿಗೆ ಮಾರ್ಗದರ್ಶನ ನೀಡುತ್ತಿದ್ದಾರೆ. ಅರಣ್ಯ ಬುಡಕಟ್ಟು ವಿದ್ಯಾರ್ಥಿ ಯುವ ಸಂಘದ ಸಹ ಸಂಸ್ಥಾಪಕಿಯೂ ಆಗಿರುವ ಅವರು ತಮ್ಮ ಸಮುದಾಯದ ಆಶಾ ಕಿರಣವಾಗಿದ್ದಾರೆ. ಆಶಾ ಅವರಿಗೆ ನಾರಿ ನಾರಾಯಣಿ ಪ್ರಶಸ್ತಿ ನೀಡಿ ಗೌರವಿಸಲು ಪಬ್ಲಿಕ್ ಟಿವಿ ಹರ್ಷಿಸುತ್ತದೆ.
ಪಬ್ಲಿಕ್ ಟಿವಿ (Public TV) ಸಹಯೋಗದಲ್ಲಿ ಎಕ್ಸೆಲ್ ಅಕಾಡೆಮಿಕ್ಸ್ ಪ್ರಸ್ತುತ ಪಡಿಸುವ ‘ನಾರಿ ನಾರಾಯಣಿ-2026’ (Nari Narayani 2026 Award) ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಬೆಂಗಳೂರಲ್ಲಿ ನಡೆಯಿತು. ಸಾಧಕಿಯರಿಗೆ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ಪಬ್ಲಿಕ್ ಟಿವಿ ಮುಖ್ಯಸ್ಥರಾದ ಹೆಚ್.ಆರ್.ರಂಗನಾಥ್ (H.R.Ranganath) ಅವರು ಮಾತನಾಡಿ, ‘ನಾರಿ ನಾರಾಯಣಿ’ ರೂಪುಗೊಂಡ ಉದ್ದೇಶವೇ ನಮ್ಮ ಮಹಿಳೆಯರ ಯಶಸ್ಸನ್ನು ಗುರುತಿಸಬೇಕೆಂದು. ಐದು ವರ್ಷದಿಂದ ಬಹಳ ಅದ್ಭುತವಾಗಿ ನಡೆದುಕೊಂಡು ಬಂದಿದೆ ಎಂದು ಸಂತಸ ವ್ಯಕ್ತಪಡಿಸಿದರು. ಇದನ್ನೂ ಓದಿ: ಬೀಜ ಮಾತೆ ಪಾಪಮ್ಮಗೆ ನಾರಿ ನಾರಾಯಣಿ ಗೌರವ

