ತಾವು ಬೆಳೆದ ಬಂದ ಕಷ್ಟದ ಹಾದಿಯನ್ನು ಮೆಟ್ಟಿಲಾಗಿಸಿಕೊಂಡು ಶ್ರಮದಿಂದ ಸಾಧನೆಯ ಶಿಖರ ಏರುವುದು ಅಷ್ಟು ಸುಲಭವಲ್ಲ. ಆದರೆ ರೈತ ಕುಟುಂಬದಿಂದ ಬಂದು ತಾವೊಂದು ಉದ್ಯಮವನ್ನು ಸ್ಥಾಪಿಸಿ ಆ ಮೂಲಕ ಅನ್ನದಾತರ ಬದುಕಿಗೆ ಹೊಸ ಚೈತನ್ಯ ಆಶಾಕಿರಣ ಮೂಡಿಸಿದವರು ಎಲ್‌ವಿಎನ್ ಕಂಪನಿಯ ಮಾಲೀಕರಾದ ಶ್ರೀಮತಿ ಲಕ್ಷ್ಮಿದೇವಿ.
ತಾವು ರೈತ ಕುಟುಂಬದಿಂದಲೇ ಬಂದವರಾಗಿದ್ದರಿಂದ ಸ್ವಾಭಿಮಾನಿ ರೈತರ ಕಷ್ಟಕೋಟಲೆಯನ್ನು ಅರಿತ ಅವರಿಗೆ ನೆರವಾಗುವ ಉದ್ದೇಶದಿಂದ ಎಲ್ ವಿಎನ್ ಸಂಸ್ಥೆಯನ್ನು ಲಕ್ಷ್ಮಿದೇವಿ ಹುಟ್ಟುಹಾಕಿದರು. ಈ ಸಂಸ್ಥೆಯ ಮೂಲಕ ರೈತರು ಬೆಳೆದ ಹಣ್ಣು ತಾಜಾ ತರಕಾರಿಗಳನ್ನು ನೇರವಾಗಿ ಉತ್ತಮ ಬೆಲೆಗೆ ಖರೀದಿ ಮಾಡುತ್ತಾರೆ.
ಖರೀದಿಸಿದ ಹಣ್ಣು, ತರಕಾರಿಗಳನ್ನು ಜಗತ್ತಿನ ಪ್ರತಿಷ್ಟಿತ ಕಂಪನಿಗಳಾದ ಕೆಎಫ್ ಸಿ, ಐಟಿಸಿ ಗೋದ್ರೇಜ್, ಟ್ಯಾಕೋಬೆ, ಪಿಜ್ಜಾ, ತಾಜ್, ಫ್ರೆಶ್‌ಮೆನು, ಎಂಟಿಆರ್ ಟೈಸನ್, ಬರ್ಗರ್ ಕಿಂಗ್ ಸೇರಿದಂತೆ ಸುಮಾರು 60 ಕ್ಕೂ ಹೆಚ್ಚು ಕಂಪನಿಗಳಿಗೆ ಯಶಸ್ವಿಯಾಗಿ ಮಾರಾಟ ಮಾಡುತ್ತಿದ್ದಾರೆ.
10 ವರ್ಷದಿಂದ ರೈತರ ಬದುಕಿಗೆ ನೆರವಾಗುತ್ತಿರುವ ಲಕ್ಷ್ಮೀದೇವಿ 200 ಕೋಟಿ ರೂ. ವಹಿವಾಟು ನಡೆಸುತ್ತಿರುವ ಸಂಸ್ಥೆಯ ರೂವಾರಿಯಾಗಿದ್ದಾರೆ. ಅಷ್ಟೇ ಅಲ್ಲದೇ ಮಹಿಳಾ ಸಬಲೀಕರಣಕ್ಕೆ ಆದ್ಯತೆ ನೀಡಿ ಕಂಪನಿಯ ಉದ್ಯೋಗಿಗಳ ಪೈಕಿ 70 ರಷ್ಟು ಉದ್ಯೋಗಿಗಳು ಮಹಿಳೆಯರೇ ಆಗಿರುವುದು ವಿಶೇಷ.
ತಮ್ಮ ಚಾಕಚಕತ್ಯೆ, ಅಪರಿಮಿತ ಶ್ರಮದಿಂದಲೇ ಸಂಸ್ಥೆಯನ್ನು ಹುಟ್ಟುಹಾಕಿ ಯಶಸ್ವಿಯಾಗಿ ನಡೆಸಿ ಇನ್ನಿತರ ಮಹಿಳೆಯರ ಆರ್ಥಿಕ ಅಭಿವೃದ್ಧಿಗಾಗಿ ಅನೇಕ ಸಾಮಾಜಿಕ ಚಟುವಟಿಕೆಯನ್ನು ನಡೆಸುತ್ತಿದ್ದಾರೆ. ಲಕ್ಷ್ಮಿದೇವಿ ಅವರ ಈ ಅನನ್ಯ ಸಾಧನಗೆ ಮನಪೂರ್ವಕವಾಗಿ ನಮಿಸಿ ಪಬ್ಲಿಕ್ ಟಿವಿ ನಾರಿ ನಾರಾಯಣಿ ಪ್ರಶಸ್ತಿ ನೀಡಲು ಹರ್ಷಿಸುತ್ತಿದೆ.