ಕೊಪ್ಪಳ: ಬಸ್ ನಿಲ್ದಾಣದ ಬಗ್ಗೆ ಪಬ್ಲಿಕ್ ಟಿವಿಯಲ್ಲಿ ಸುದ್ದಿ ಬಿತ್ತರವಾಗುತ್ತಿದ್ದಂತೆಯೇ ಎಚ್ಚೆತ್ತ ಅಧಿಕಾರಿಗಳು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದಾರೆ. ಬಳಿಕ ಬಸ್ ನಿಲ್ದಾಣ ನೆಲಸಮ ಮಾಡಿದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.
ಕೊಪ್ಪಳದ ಗಂಗಾವತಿ ತಾಲೂಕಿನ ಹಣವಾಳ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಈರಣ್ಣ ಕುರಿ ತನ್ನ ಮನೆಗೆ ಬಸ್ ನಿಲ್ದಾಣ ಅಡ್ಡ ಬರುತ್ತೆ ಅನ್ನೋ ಕಾರಣಕ್ಕೆ ರಾತ್ರೋ ರಾತ್ರಿ ಜೆಸಿಬಿಯಿಂದ ಹಳೆಯ ಬಸ್ ನಿಲ್ದಾಣವನ್ನು ಕೆಡವಿ ನೆಲಸಮ ಮಾಡಿದ್ದರು. ಬೆಳಗಾಗುವುದರೊಳಗೆ ಅಲ್ಲಿ ಒಂದು ಬಸ್ ನಿಲ್ದಾಣ ಇತ್ತು ಅನ್ನುವ ಗುರುತೇ ಇಲ್ಲದಂತೆ ಮಾಡಿದ್ದರು. ಈ ಸುದ್ದಿ ಇಂದು ಪಬ್ಲಿಕ್ ಟಿವಿಯಲ್ಲಿ ಪ್ರಸಾರವಾಗಿತ್ತು.
ಕಳೆದ ಎರಡು ದಿನದ ಹಿಂದೆ ಗ್ರಾಮದಲ್ಲಿ ಹೊಸ ಬಸ್ ನಿಲ್ದಾಣವನ್ನು ಸಂಸದರ ಅನುದಾನದಲ್ಲಿ ನಿರ್ಮಾಣ ಮಾಡಿದ್ದರು. ಈರಣ್ಣ ಕುರಿ ಕನಕಗಿರಿ ಕ್ಷೇತ್ರದ ಶಾಸಕ ಬಸವರಾಜ ದಡೆಸುಗುರು ಆಪ್ತರಾಗಿದ್ದು, ನನಗೆ ಯಾರ ಭಯವೇನು ಇಲ್ಲ ಎಂದು ಸರ್ಕಾರಿ ಬಸ ನಿಲ್ದಾಣವನ್ನೇ ರಾತ್ರೋರಾತ್ರಿ ಕೆಡವಿ ತನ್ನ ಜಾಗ ಮಾಡಿಕೊಂಡಿದ್ದರು. ಈ ಬಗ್ಗೆ ಈರಣ್ಣ ಕುರಿ ಅವರನ್ನು ಕೇಳಿದರೆ, ಜಾಗ ನನ್ನದು ಅನ್ನೋದಕ್ಕೆ ಪುರಾವೆಗಳಿವೆ. ಇದು ರಾಜಕೀಯದವರು ನನ್ನ ಮೇಲೆ ಸೇಡಿನ ರಾಜಕಾರಣ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಈ ಬಗ್ಗೆ ಸುದ್ದಿ ಪ್ರಸಾರವಾಗುತ್ತಿದ್ದಂತೆ ಎಚ್ಚೆತ್ತ ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿದರು. ಬಸ್ ನಿಲ್ದಾಣ ಇರುವುದರ ಬಗ್ಗೆ ಗ್ರಾಮಸ್ಥರಲ್ಲಿ ಮಾಹಿತಿ ಕಲೆ ಹಾಕಿದ ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆಯ ಪಿ.ಎಸ್.ಐ ಪ್ರಕಾಶ್ ಮಾಳೆ, ಬಿಜೆಪಿ ಮುಖಂಡ ಈರಣ್ಣ ಕುರಿಯವರನ್ನು ಇದೀಗ ಬಂಧಿಸಿ ಪ್ರಕರಣ ದಾಖಲು ಮಾಡಿದ್ದಾರೆ.
ಹಣವಾಳ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಾದ ಸೂರ್ಯಕುಮಾರಿ, ಬಸ್ ನಿಲ್ದಾಣ ಸರ್ಕಾರದ ಸುಪರ್ದಿಯಲ್ಲಿದೆ ಈರಣ್ಣ ಕುರಿ ಅವರ ಹೆಸರಿನಲ್ಲಿ ಯಾವುದೇ ದಾಖಲೆಗಳು ಇಲ್ಲ. ಮೇಲಾಗಿ ಬಸ್ ನಿಲ್ದಾಣ ಅತಿಕ್ರಮ ಮಾಡಿ ನೆಲಸಮ ಮಾಡಿದ್ದು ಕಾನೂನು ಪ್ರಕಾರ ತಪ್ಪು ಅಂತ ಹೇಳಿದ್ದಾರೆ.
ಒಟ್ಟಿನಲ್ಲಿ ಪಬ್ಲಿಕ್ ಟಿವಿ ವರದಿಯಿಂದ ಎಚ್ಚೆತ್ತ ಅಧಿಕಾರಿಗಳು ಸರ್ಕಾರಿ ಜಾಗದಲ್ಲಿದ್ದ ಬಸ್ ನಿಲ್ದಾಣವನ್ನ ತನ್ನ ಜಾಗ ಎಂದು ದೌರ್ಜನ್ಯದಿಂದ ಕೆಡವಿ ಗ್ರಾಮದ ಬಸ್ ನಿಲ್ದಾಣವನ್ನೇ ನೆಲಸಮ ಮಾಡಿದ್ದ ಬಿಜೆಪಿ ಮುಖಂಡನಿಗೆ ಜೈಲು ಭಾಗ್ಯ ಕರುಣಿಸಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv