ಚಿಕ್ಕಬಳ್ಳಾಪುರ: ರಸ್ತೆಯನ್ನೇ ನುಂಗಿದ್ದ ಕೆರೆಗೆ ಶಾಶ್ವತ ಪರಿಹಾರ ಕೊಡುವ ಭರವಸೆಯನ್ನು ಇಲ್ಲಿನ ಜಿಲ್ಲಾಪಂಚಾಯತ್ ನೀಡಿದೆ.
ರಸ್ತೆಯನ್ನೇ ನುಂಗಿದ್ದ ಸಾವಿನಕೆರೆ ಶಿರ್ಷಿಕೆಯಡಿ ಇತ್ತೀಚೆಗೆ ನಿಮ್ಮ ಪಬ್ಲಿಕ್ ಟಿವಿ ತಲಕಾಯಲಬೆಟ್ಟದ ಕೆರೆ ವರದಿಯನ್ನ ಬಿತ್ತರ ಮಾಡಿತ್ತು. ವರದಿಗೆ ಸ್ಪಂದಿಸಿರುವ ಚಿಕ್ಕಬಳ್ಳಾಪುರ ಜಿಲ್ಲಾ ಪಂಚಾಯತ್ ಅಧ್ಯಕ್ಷ ಮಂಜುನಾಥ್, ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಸದ್ಯ ತಾತ್ಕಾಲಿಕ ತೆಪ್ಪ ಹಾಗೂ ಸೇತುವೆ ನಿರ್ಮಾಣ ಮಾಡಿ ಶಾಶ್ವತ ಪರಿಹಾರ ಕೊಡುವುದಾಗಿ ಗ್ರಾಮಸ್ಥರಿಗೆ ಭರವಸೆ ನೀಡಿದ್ದಾರೆ.
ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ತಲಕಾಯಲಬೆಟ್ಟ ಗ್ರಾಮದಿಂದ 11 ಮೈಲಿ ಹೋಗುವ ಮಾರ್ಗದ ರಸ್ತೆಯನ್ನೇ ಈ ಕೆರೆ ನುಂಗಿ ಹಾಕಿದೆ. ಇದ್ರಿಂದ ಬುಡಗವಾರಹಳ್ಳಿ, ದಾಸರಹಳ್ಳಿ, ಮರಳಪ್ಪನಹಳ್ಳಿ ಹಾಗೂ ತಲಕಾಯಲಬೆಟ್ಟದ ಗ್ರಾಮಸ್ಥರು ಕೆರೆ ದಾಟಿ ದಡ ಸೇರೋಕೆ ಸರ್ಕಸ್ ಮಾಡುವಂತಾಗಿತ್ತು. ಪ್ರತಿನಿತ್ಯ ಪ್ರಾಣ ಪಣಕ್ಕಿಟ್ಟು, ಗ್ರಾಮಸ್ಥರು, ವಿದ್ಯಾರ್ಥಿಗಳು ಕೆರೆ ದಾಟುವಂತಾಗಿತ್ತು. ಇನ್ನೂ ಇತ್ತೀಚೆಗೆ ತಿರುಮಳಪ್ಪ ಎಂಬವರು ಕೂಡ ದಾಟುವಾಗ ಕೆರೆಯಲ್ಲಿ ಬಿದ್ದು ಮೃತಪಟ್ಟಿದ್ದರು. ಈ ಸಂಬಂಧ ಪಬ್ಲಿಕ್ ಟಿವಿ `ಸಾವಿನ ಕೆರೆ’ ಶಿರ್ಷಿಕೆಯಡಿ ಬುಧವಾರವಷ್ಟೇ ಸುದ್ದಿ ಪ್ರಸಾರ ಮಾಡಿತ್ತು.
ಸುದ್ದಿಗೆ ಸ್ಪಂದಿಸಿದ ಚಿಕ್ಕಬಳ್ಳಾಪುರ ಜಿಲ್ಲಾ ಪಂಚಾಯತಿ ಅಧ್ಯಕ್ಷ ಮಂಜುನಾಥ್ ಕೆರೆ ಬಳಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ರು. ಅಲ್ಲದೇ ಗ್ರಾಮಸ್ಥರು ಹಾಗೂ ಶಾಲಾ ಮಕ್ಕಳೊಂದಿಗೆ ಚರ್ಚೆ ನಡೆಸಿದ್ರು. ಸಮಸ್ಯೆ ಬಗ್ಗೆ ಮಾಹಿತಿ ಪಡೆದುಕೊಂಡು ಸ್ಥಳದಲ್ಲೇ ಸಣ್ಣ ನೀರಾವರಿ ಇಲಾಖಾಧಿಕಾರಿಗಳಿಗೆ ಕರೆ ಮಾಡಿ ತಾತ್ಕಾಲಿಕ ತೆಪ್ಪದ ವ್ಯವಸ್ಥೆ ಮಾಡಲು ಸೂಚನೆ ನೀಡಿದ್ರು.
ಕೆರೆಯಲ್ಲಿ ಸೇತುವೆ ನಿರ್ಮಾಣ ಮಾಡಿ ಸಮಸ್ಯೆಗೆ ಶಾಶ್ವತ ಪರಿಹಾರ ಕೊಡಿಸುವ ಭರವಸೆಯನ್ನ ಗ್ರಾಮಸ್ಥರಿಗೆ ನೀಡಿದ್ರು. ಹೀಗಾಗಿ ಈ ಬಗ್ಗೆ ಸುದ್ದಿ ಪ್ರಸಾರ ಮಾಡಿ ಜಿಲ್ಲಾ ಪಂಚಾಯತಿ ಗಮನ ಸೆಳೆದ ಪಬ್ಲಿಕ್ ಟಿವಿ ಗೆ ಗ್ರಾಮಸ್ಥರು ಧನ್ಯವಾದಗಳನ್ನ ಅರ್ಪಿಸಿದ್ರು. ಒಟ್ಟಿನಲ್ಲಿ ಪ್ರಾಣ ಪಣಕ್ಕಿಟ್ಟು ಕೆರೆ ದಾಟಿ ದಡ ಸೇರ್ತಿರೋ ಜನರಿಗೆ ಸದ್ಯ ತಾತ್ಕಲಿಕ ತೆಪ್ಪ ಸಿಗಲಿದ್ದು, ಸ್ವಲ್ಪ ರಿಲೀಫ್ ಸಿಗಲಿದೆ.