ಬೀದರ್: ಸಚಿವ ಈಶ್ವರ್ ಖಂಡ್ರೆ ಅವರ ತವರು ಜಿಲ್ಲೆ ಬೀದರ್ನಲ್ಲಿ (Bidar) ಅಕ್ರಮ ಕೆಂಪು ಕಲ್ಲು ಗಣಿಗಾರಿಕೆ ನಡೆಯುತ್ತಿರುವ ಬಗ್ಗೆ ಪಬ್ಲಿಕ್ ಟಿವಿ ಪ್ರಸಾರ ಮಾಡಿದ್ದ ಎಕ್ಸ್ಕ್ಲೂಸಿವ್ ವರದಿಯ ಬೆನ್ನಲ್ಲೇ ಗಣಿ ಮತ್ತು ಭೂವಿಜ್ಞಾನ (Illegal Mining) ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಬೀದರ್ ತಾಲೂಕಿನ ಅಣದೂರು ಗ್ರಾಮದಲ್ಲಿ ನಡೆದ ದಾಳಿಯ ವೇಳೆ ಕಲ್ಲು ಕಟಿಂಗ್ ಮಿಷನ್ಗಳು ಸೇರಿದಂತೆ ಗಣಿಗಾರಿಕೆಗೆ ಬಳಸುತ್ತಿದ್ದ ಉಪಕರಣಗಳನ್ನು ಅಧಿಕಾರಿಗಳು ಜಪ್ತಿ ಮಾಡಿಕೊಂಡಿದ್ದಾರೆ.
20 ಎಕರೆಗೂ ಅಧಿಕ ಜಾಗದಲ್ಲಿ ಗಣಿಗಾರಿಕೆ
ಅಣದೂರು ಗ್ರಾಮದಲ್ಲಿ ಹಲವು ವರ್ಷಗಳಿಂದ ಅಕ್ರಮವಾಗಿ ಕೆಂಪು ಕಲ್ಲು ಗಣಿಗಾರಿಕೆ ನಡೆಸಲಾಗುತ್ತಿದೆ ಎಂಬ ಆರೋಪ ಕೇಳಿಬಂದಿತ್ತು. ಈ ಬಗ್ಗೆ ಪಬ್ಲಿಕ್ ಟಿವಿ ಸ್ಥಳದಿಂದಲೇ ವರದಿ ಪ್ರಸಾರ ಮಾಡಿ ಅಧಿಕಾರಿಗಳ ಗಮನ ಸೆಳೆದಿತ್ತು. ಇದೀಗ ದಾಳಿ ನಡೆಸಿರುವ ಅಧಿಕಾರಿಗಳ ತಂಡಕ್ಕೆ ಹತ್ತಾರು ಗಣಿಗಾರಿಕೆ ಸ್ಥಳಗಳು ಪತ್ತೆಯಾಗಿವೆ.
ಸರ್ವೆ ನಂಬರ್ 204, 205 ಮತ್ತು 206ರ ಪಟ್ಟಾ ಜಮೀನು ಸೇರಿದಂತೆ ಸರ್ಕಾರಿ ಜಾಗದಲ್ಲೂ ಅಕ್ರಮವಾಗಿ ಗಣಿಗಾರಿಕೆ ನಡೆಸುತ್ತಿರುವುದು ಕಂಡುಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಒಟ್ಟು ನಾಲ್ಕು ಸರ್ವೆ ನಂಬರ್ಗಳ ವ್ಯಾಪ್ತಿಯಲ್ಲಿ 20 ಎಕರೆಗೂ ಅಧಿಕ ಜಾಗದಲ್ಲಿ ಗಣಿಗಾರಿಕೆ ನಡೆಯುತ್ತಿರುವ ಆರೋಪವಿದೆ.
ಅಕ್ರಮ ಗಣಿಗಾರಿಕೆಗೆ ಬಳಸಲಾಗುತ್ತಿದ್ದ ಕಲ್ಲು ಕಟಿಂಗ್ ಮಷಿನ್ಗಳು, ಟ್ಯಾಂಕರ್ಗಳು ಹಾಗೂ ಇತರ ಉಪಕರಣಗಳನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಜಪ್ತಿ ಮಾಡಿದ ಉಪಕರಣಗಳನ್ನು ಜನವಾಡ ಪೊಲೀಸ್ ಠಾಣೆಗೆ ಕೊಂಡೊಯ್ಯಲಾಗಿದೆ.
ಅಕ್ರಮವಾಗಿ ಗಣಿಗಾರಿಕೆ ನಡೆಸಿರುವ ಆರೋಪದ ಹಿನ್ನೆಲೆಯಲ್ಲಿ ಸಂಬಂಧಪಟ್ಟ ಮಾಲೀಕರಿಗೆ ಅಗತ್ಯ ದಾಖಲೆಗಳನ್ನು ಸಲ್ಲಿಸುವಂತೆ ಸೂಚಿಸಲಾಗಿದೆ. ಈ ಸಂಬಂಧ ಲಭ್ಯವಿರುವ ದಾಖಲೆಗಳೊಂದಿಗೆ ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಿಸಲು ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿಗಳು ಸಿದ್ಧತೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಕಾಕ್ರೋಚ್ ವಿರುದ್ಧ ʻಸ್ವಚ್ಛ ದೆಹಲಿʼ ಅಭಿಯಾನ – ರಾಮಲೀಲಾದಲ್ಲಿ ರಾವಣನ ಜೊತೆ 30 ಅಡಿ ʻಜಿರಳೆʼ ದಹನ!
ಈ ಕುರಿತು ಮಾತನಾಡಿದ ಅಧಿಕಾರಿಗಳು, ಪಬ್ಲಿಕ್ ಟಿವಿ ವರದಿಯ ಬಳಿಕ ಸ್ಥಳದಲ್ಲಿ ಪರಿಶೀಲನೆ ನಡೆಸಿ ದಾಳಿ ಮಾಡಲಾಗಿದೆ. ಅಕ್ರಮ ಗಣಿಗಾರಿಕೆ ನಡೆದಿರುವುದು ಕಂಡುಬಂದ ಹಿನ್ನೆಲೆಯಲ್ಲಿ ಸಂಬಂಧಪಟ್ಟವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಮುಂದಾಗಿದ್ದೇವೆ. ಜಿಲ್ಲೆಯಲ್ಲಿ ಯಾವುದೇ ರೀತಿಯ ಅಕ್ರಮ ಗಣಿಗಾರಿಕೆಗೆ ಅವಕಾಶ ನೀಡುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ. ಇದನ್ನೂ ಓದಿ: ಲೋಕಕಲ್ಯಾಣಕ್ಕಾಗಿ ಧರೆಗಿಳಿದ ಕಾವೇರಿ ಮಾತೆ! – ತಲಕಾವೇರಿಯ ತೀರ್ಥೋದ್ಭವದ ಹಿಂದಿದೆ ಪೌರಾಣಿಕ ಕಥೆ!

