ಜಗತ್ತಿನ ಕೆಲವು ಅಪರೂಪದ ವಸ್ತುಗಳ ಪಟ್ಟಿಗೆ ಸೇರುವ ಒಂದು ಅಪರೂಪದ ವಜ್ರ ಅದು ಗೋಲ್ಕೊಂಡಾ ನೀಲಿ ವಜ್ರ.
ಭಾರತೀಯ ರಾಜ ಮನೆತನಕ್ಕೆ ಸೇರಿದ ವಿಶ್ವದಲ್ಲೇ ಅಪರೂಪದ ಈ ವಜ್ರ ಸಿಕ್ಕಿದ್ದು, ವಿಶ್ವದ ಅತ್ಯಂತ ಪ್ರಾಚೀನ ವಜ್ರದ ಗಣಿಗಳಲ್ಲಿ ಒಂದಾಗಿರುವ ತೆಲಂಗಾಣದ ಗೋಲ್ಕೊಂಡಾ ಗಣಿಗಳಲ್ಲಿ ಸುಮಾರು 13-14ನೇ ಶತಮಾನದ ಕಾಕತೀಯ ರಾಜವಂಶದ ಆಳ್ವಿಕೆಯಲ್ಲಿ.
ತೆಲಂಗಾಣದ ಹೃದಯ ಭಾಗದಲ್ಲಿರುವ ಗೋಲ್ಕೊಂಡಾ ಪ್ರದೇಶವು ತನ್ನ ಕೋಟೆಯಿಂದಾಗಿ ಪ್ರಸಿದ್ಧಿಯಾಗಿದೆ. ಆದರೆ ಗೋಲ್ಕೊಂಡಾ ಗಣಿಯಲ್ಲಿ ವಜ್ರ ಸಿಗಲು ಪ್ರಾರಂಭವಾದಾಗಿನಿಂದ ಇದು ಅಪರೂಪದ ವಜ್ರಗಳಿಗೆ ಹೆಸರುವಾಸಿಯಾಗಿದೆ. 16ನೇ ಶತಮಾನ ಹಾಗೂ ಅದಕ್ಕೂ ಮುನ್ನ ಸಿಕ್ಕಿರುವ ವಜ್ರಗಳ ಪೈಕಿ ಈ ವಜ್ರ ತನ್ನ ಸೌಂದರ್ಯ, ಶುದ್ಧತೆ ಹಾಗೂ ವಿಶಿಷ್ಟ ಬಣ್ಣದಿಂದಲೇ ಖ್ಯಾತಿಯನ್ನು ಪಡೆದಿದೆ.
ನೀಲಿ ವಜ್ರ ಹೆಸರು ಬಂದಿದ್ದು ಹೇಗೆ?
ಸಾಮಾನ್ಯವಾಗಿ ಗೋಲ್ಕೊಂಡಾ ಗಣಿಗಳಲ್ಲಿ ಸಿಗುವ ಹೆಚ್ಚಿನ ವಜ್ರಗಳು ನೀಲಿ ಛಾಯೆಯನ್ನು ಹೊಂದಿರುತ್ತವೆ. ಈ ರೀತಿ ನೀಲಿ ಛಾಯೆಯನ್ನು ಹೊಂದಿರುವ ವಜ್ರಗಳು ಸಾಮಾನ್ಯವಾಗಿ ಗಾಳಿಯಲ್ಲಿ ಅಥವಾ ವಿವಿಧ ದೀಪಗಳ ಬೆಳಕಿನಲ್ಲಿ ಮಾತ್ರ ಗೋಚರಿಸುತ್ತವೆ. ಆದರೆ ಈ ನೀಲಿ ವಜ್ರದ ಗುಣಲಕ್ಷಣ ಎಲ್ಲ ವಜ್ರಗಳಿಗಿಂತಲೂ ವಿಭಿನ್ನವಾಗಿತ್ತು. ಹೀಗಾಗಿ ಅಂದಿನಿಂದ ಈ ವಜ್ರ ಗೋಲ್ಕೊಂಡಾ ನೀಲಿ ವಜ್ರವಾಗಿ ಹೆಸರು ಪಡೆದುಕೊಂಡಿತು. ಇದರ ಜೊತೆಗೆ ಗೋಲ್ಕೊಂಡಾ ಗಣಿಯಿಂದ ಸಿಕ್ಕಿರುವ ಪ್ರಸಿದ್ಧ ವಜ್ರಗಳಾದ ಹೋಪ್ ಡೈಮಂಡ್, ಕೋಹಿನೂರ್, ರೆಜೆಂಡ್ ಡೈಮಂಡ್ ಇತ್ಯಾದಿ. ಇದೀಗ ಈ ವಜ್ರಗಳು ವಿಶ್ವದ ಪ್ರಮುಖ ಮ್ಯೂಸಿಯಂಗಳಲ್ಲಿವೆ.
ಭಾರತೀಯ ರಾಜ ಮನೆತನದ ಇಂದೋರ್ ಹಾಗೂ ಬರೋಡ ಮಹಾರಾಜರ ಪರಂಪರೆಯ ಸಂಕೇತವಾಗಿ ಗೋಲ್ಕೊಂಡಾ ನೀಲಿ ವಜ್ರ ಮೊದಲ ಬಾರಿಗೆ ಹರಾಜಾಗಲಿದೆ. ಮೇ.14 ರಂದು ಸ್ವಿಡ್ಜರ್ಲ್ಯಾಂಡ್ ನ ಜಿನೀವಾದಲ್ಲಿ ಕ್ರಿಸ್ಟೀಸ್ ಸಂಸ್ಥೆ ನಡೆಸಲಿರುವ ಮ್ಯಾಗ್ನಿಫಿಸೆಂಟ್ ಜುವೆಲ್ಸ್ ಕಾರ್ಯಕ್ರಮದಲ್ಲಿ ಈ ವಜ್ರ ಹರಾಜಿಗಿಡಲಾಗಿದೆ.
ವಜ್ರದ ಇತಿಹಾಸ:
1920ರ ದಶಕದಲ್ಲಿ ಇಂದೋರ್ ನ ಮಹಾರಾಜ ಯಶವಂತ್ ರಾವ್ ಹೋಳ್ಕರ್ ಅವರ ಬಳಿ ಈ ವಜ್ರವಿತ್ತು. ಅದಾದ ಬಳಿಕ 1947ರಲ್ಲಿ ಹ್ಯಾರಿ ವಿನ್ ಸ್ಟನ್ ಎಂಬ ಮಾರಾಟಗಾರ ಈ ವಜ್ರವನ್ನು ಖರೀದಿಸಿದ್ದರು. ಬಳಿಕ ಹ್ಯಾರಿ ವಿನ್ ಸ್ಟನ್ ಈ ವಜ್ರವನ್ನ ಅಮೇರಿಕದ ವಾಷಿಂಗ್ಟನ್ ನ ಡಿಸಿ ವಸ್ತು ಸಂಗ್ರಹಾಲಯಕ್ಕೆ ಹಸ್ತಾಂತರಿಸಿದ್ದರು. ಈಗಲೂ ಕೂಡ ಆ ವಜ್ರ ಅಲ್ಲಿಯೇ ಇದೆ.
ಖ್ಯಾತ ಆಭರಣ ವಿನ್ಯಾಸಗಾರ ಜಾರ್ ಸಿದ್ದಪಡಿಸಿರುವ ಉಂಗುರದಲ್ಲಿ 23.24 ಕ್ಯಾರೆಟ್ ನ ಗೋಲ್ಕೊಂಡಾ ನೀಲಿ ವಜ್ರವನ್ನು ಇರಿಸಲಾಗಿದೆ. ಸದ್ಯ ಕ್ರಿಸ್ಟೀಸ್ ನಡೆಸಲಿರುವ ಹರಾಜು ಪ್ರಕ್ರಿಯೆಯಲ್ಲಿ ಈ ವಜ್ರ ಸುಮಾರು 300 ಕೋಟಿ ರೂ.ಯಿಂದ 430 ಕೋಟಿ ರೂ.ಗೆ ಹರಾಜಾಗಬಹುದು ಎಂದು ಅಂದಾಜಿಸಲಾಗಿದೆ.
ಏನಿದು ಕ್ರಿಸ್ಟೀಸ್ ಸಂಸ್ಥೆ?
1766ರಲ್ಲಿ ಜೇಮ್ಸ್ ಕ್ರಿಸ್ಟಿ ಎಂಬುವವರು ಲಂಡನ್ ನಲ್ಲಿ ಈ ಸಂಸ್ಥೆಯನ್ನು ಸ್ಥಾಪಿಸಿದರು. ವಿಶ್ವದ ಅತ್ಯಂತ ಹಳೆಯ ಮತ್ತು ಅತ್ಯಂತ ಪ್ರಸಿದ್ಧ ಹರಾಜು ಕಂಪನಿಗಳಲ್ಲಿ ಈ ಸಂಸ್ಥೆ ಒಂದಾಗಿದೆ. ಅಪರೂಪದ ಆಭರಣಗಳು, ಪ್ರಾಚೀನ ವಸ್ತುಗಳು ಹಾಗೂ ಐಷಾರಾಮಿ ವಸ್ತುಗಳನ್ನ ಹರಾಜಿಗಿಡುವ ಶ್ರೀಮಂತ ಪರಂಪರೆಯನ್ನು ಈ ಸಂಸ್ಥೆ ಹೊಂದಿದೆ. ಜೊತೆಗೆ ಈ ಸಂಸ್ಥೆ ಲಂಡನ್ ಮಾತ್ರವಲ್ಲದೆ ನ್ಯೂಯಾರ್ಕ್, ಜಿನೀವಾ, ಹಾಂಗ್ ಕಾಂಗ್, ಪ್ಯಾರಿಸ್ ಸೇರಿದಂತೆ 40ಕ್ಕೂ ಹೆಚ್ಚು ದೇಶಗಳಲ್ಲಿ ತನ್ನ ಕಚೇರಿಗಳನ್ನು ಹೊಂದಿದೆ.
ಈ ಸಂಸ್ಥೆ ಇತಿಹಾಸದಲ್ಲಿ ಅತ್ಯಂತ ದುಬಾರಿಯಾದ ವಸ್ತುಗಳನ್ನ ಹರಾಜು ಮೂಲಕ ಮಾರಾಟ ಮಾಡಿ ಹೆಸರುವಾಸಿಯಾಗಿದೆ. ಈ ಪೈಕಿ ಲಿಯೋನಾರ್ಡೊ ಡವಿಂಚಿಯ ಸಾಲ್ವೆಟರ್ ಮುಂಡಿ (ಮೊನಾಲಿಸಾ) ಈ ಪೇಂಟಿಂಗ್ ಅನ್ನು ಹರಾಜು ಮಾಡಿಸಿದ್ದಾರೆ. ಈ ವಜ್ರಕ್ಕೆ ಜಾಗತಿಕ ಮಟ್ಟದಲ್ಲಿ ಇನ್ನಷ್ಟು ಪ್ರಸಿದ್ಧಿ ಪಡೆಯಬೇಕು ಎಂಬ ಉದ್ದೇಶದಿಂದ ಮೊದಲ ಬಾರಿಗೆ ಹರಾಜಿಗಿಡಲಾಗಿದೆ.