ಈ ಭೂಮಿ ಮತ್ತು ಜಗತ್ತು ಎಂಬುದು ವಿಸ್ಮಯಗಳ ಕೂಟ. ಸೌರಮಂಡಲದಲ್ಲಿ ಈವರೆಗೂ ಅನ್ವೇಷಿಸಲಾಗದ ಅದೆಷ್ಟೋ ನಿಗೂಢಗಳು ಅಡಗಿವೆ. ಹಾಗೆಯೇ, ಭೂಮಿ ಕುರಿತಾದಂತೆ ಹಲವು ರಹಸ್ಯಗಳಿವೆ. ಆ ರಹಸ್ಯಗಳನ್ನು ಭೇದಿಸಲು ವಿಜ್ಞಾನಿಗಳು ಹಗಲಿರುಳು ಶ್ರಮಿಸುತ್ತಿದ್ದಾರೆ. ಈಚೆಗೆ ಪ್ರಕಟವಾದ ಅಧ್ಯಯನದ ವರದಿಯೊಂದು ಭೂಮಿ ಕುರಿತ ಅಚ್ಚರಿದಾಯಕ ರಹಸ್ಯವೊಂದನ್ನು ಬಹಿರಂಗಪಡಿಸಿದೆ.
ಪೀಕಿಂಗ್‌ನ ಇಬ್ಬರು ವಿಜ್ಞಾನಿಗಳು ಭೂಮಿಯ ಒಳಗರ್ಭದಲ್ಲಿನ ಪರಿಭ್ರಮಣೆ ಕುರಿತು ಸಂಶೋಧನೆ ವರದಿಯೊಂದನ್ನು ಪ್ರಕಟಿಸಿದ್ದಾರೆ. ಇದರಲ್ಲಿ ಹಲವು ಅಚ್ಚರಿದಾಯಕ ಅಂಶಗಳನ್ನು ವಿಜ್ಞಾನ ಲೋಕದ ಮುಂದಿಟ್ಟಿದ್ದಾರೆ. ಈ ಸಂಶೋಧನೆ ಕುರಿತು ತಿಳಿಯುವ ಮೊದಲು ಭೂಮಿಯ ಒಳರಚನೆ ಬಗ್ಗೆ ತಿಳಿದುಕೊಳ್ಳೋಣ.
Advertisement
Advertisement
ಏನಿದು ಭೂಮಿ ಒಳಭಾಗ?
ನಮ್ಮ ಭೂಮಿಯು ಹೊರಪದರ, ನಡುಗೋಳ ಹಾಗೂ ಹೊರ ಮತ್ತು ಒಳಗರ್ಭದಿಂದ ರೂಪುಗೊಂಡಿದೆ. ಘನ ಸ್ಥಿತಿಯ ಒಳಗರ್ಭವು ಭೂಮಿಯ ಹೊರಪದರದಿಂದ ಸುಮಾರು 3,200 ಮೈಲುಗಳಷ್ಟು ಆಳದಲ್ಲಿರುತ್ತದೆ. ಇದು ದ್ರವ ಸ್ಥಿತಿಯ ಸಂಯೋಜನೆಯ ಹೊರಗರ್ಭದಿಂದ ಬೇರ್ಪಟ್ಟಿದೆ. ಭೂಮಿಯ ಒಳಚರನೆಯ ಒಂದು ವಿಸ್ಮಯ ಏನೆಂದರೆ, ಇದು ಭೂ ಕವಚದೊಡನೆ ದೃಢವಾಗಿ ಬಂಧಗೊಂಡಿಲ್ಲ. ಹೀಗಾಗಿ ಭೂಮಿಯ ಮೇಲ್ಭಾಗದಂತೆ ಒಳಭಾಗವೂ ತಿರುಗುತ್ತದೆ. ಕಬ್ಬಿಣ ಮತ್ತಿತರ ಕಾಂತೀಯ ವಸ್ತುಗಳೇ ತುಂಬಿರುವ ಭೂ ಕೇಂದ್ರವು ಇಡೀ ಭೂಮಿಗಿಂತ ಸ್ವಲ್ಪವೇ ಸ್ವಲ್ಪ ಅಧಿಕ ವೇಗದಲ್ಲಿ ಸ್ವಭ್ರಮಣ (ತಿರುಗುವಿಕೆ) ಮಾಡುತ್ತದೆ. ಇದನ್ನೂ ಓದಿ: PublicTV Explainer: ಆಹಾರಕ್ಕಾಗಿ ಹೊಡೆದಾಟ.. ಟ್ರಕ್ ಹಿಂದೆ ಓಟ – ಪಾಕ್‌ನಲ್ಲಿ ತುತ್ತು ಕೂಳಿಗೂ ತತ್ವಾರ
Advertisement
ಮಂಗಳನಿಗಿಂತ ದೊಡ್ಡದು ಭೂಗರ್ಭ!
ಸುಮಾರು 2,200 ಮೈಲುಗಳಷ್ಟು ತ್ರಿಜ್ಯದ ಘನ ಸ್ಥಿತಿಯ ಗೋಳವಾಗಿರುವ ಭೂಗರ್ಭವು ಗಾತ್ರದಲ್ಲಿ ಮಂಗಳ ಗ್ರಹಕ್ಕಿಂತ ದೊಡ್ಡದು. ಕಬ್ಬಿಣ ಮತ್ತು ನಿಕ್ಕಲ್ ಲೋಹಗಳ ಮಿಶ್ರಣದ ಗಟ್ಟಿ ಗೋಳವಾಗಿರುವ ಒಳಗರ್ಭದ ತಾಪಮಾನ 5500 ಡಿಗ್ರಿ ಸೆಲ್ಷಿಯಸ್‌ನಷ್ಟಿದೆ. ಅಂದರೆ, ಸರಿಸುಮಾರು ನಮ್ಮ ಸೂರ್ಯನ ಮೇಲ್ಮೈ ತಾಪಮಾನದಷ್ಟು. ಇಡೀ ಭೂಮಿಯ 3ನೇ ಒಂದು ಭಾಗದಷ್ಟು ದ್ರವ್ಯರಾಶಿ ಭೂಗರ್ಭದಲ್ಲೇ ಅಡಕವಾಗಿದೆ.
Advertisement
ಇದಿಷ್ಟು ಭೂಮಿಯ ಒಳಭಾಗದ ಬಗ್ಗೆ ನಾವು ಮೊದಲು ತಿಳಿದುಕೊಳ್ಳಬೇಕಾದ ಅಂಶವಾಗಿದೆ. ಇನ್ನು ಭೂಗರ್ಭದಲ್ಲಿ ಏನಾಗುತ್ತಿದೆ ಎಂಬ ಬಗ್ಗೆ ವಿಜ್ಞಾನಿಗಳು ಬಹಿರಂಗಪಡಿಸಿರುವ ಸಂಶೋಧನಾ ವರದಿ ಬಗ್ಗೆ ತಿಳಿದುಕೊಳ್ಳೋಣ.
ಭೂಮಿಯ ಒಳಗಡೆ ಏನಾಗ್ತಿದೆ?
ಭೂಮಿಯ ಒಳಭಾಗದ (Earth’s Inner Core) ತಿರುಗುವಿಕೆಯ ದಿಕ್ಕಿನಲ್ಲಿ ಬದಲಾವಣೆಯಾಗಲಿದೆ ಎಂಬುದನ್ನು ವಿಜ್ಞಾನಿಗಳು ಪತ್ತೆಹಚ್ಚಿದ್ದಾರೆ. ಈ ಬದಲಾವಣೆ ಸಂಭವಿಸುವ ಮೊದಲು ಭೂಮಿಯ ಕೇಂದ್ರವು ಸ್ವಲ್ಪ ಸಮಯದವರೆಗೆ ತಿರುಗುವುದನ್ನು ನಿಲ್ಲಿಸಲಿದೆ. ನಂತರ ಅದು ಸ್ವಾಭಾವಿಕವಾಗಿ ತಿರುಗುತ್ತಿದ್ದ ದಿಕ್ಕಿಗೆ ವಿರುದ್ಧವಾಗಿ ತಿರುಗಲು ಪ್ರಾರಂಭಿಸುತ್ತದೆ ಎನ್ನುವುದನ್ನು ವಿಜ್ಞಾನಿಗಳು ಕಂಡುಕೊಂಡಿದ್ದಾರೆ.
ಈಚೆಗೆ ನೇಚರ್ ಜಿಯೋಸೈನ್ಸ್ ಜರ್ನಲ್‌ನಲ್ಲಿ (Nature Geoscience) ಪ್ರಕಟವಾದ ಸಂಶೋಧನಾ ವರದಿಯಲ್ಲಿ ಈ ಅಂಶವನ್ನು ಬಹಿರಂಗಪಡಿಸಲಾಗಿದೆ. ಪೀಕಿಂಗ್ ವಿಶ್ವವಿದ್ಯಾಲಯದ ಸಹಾಯಕ ಸಂಶೋಧನಾ ವಿಜ್ಞಾನಿ ಯಿ ಯಾಂಗ್ (Yi Yang) ಮತ್ತು ವಿವಿ ಪೀಠದ ಪ್ರಾಧ್ಯಾಪಕ ಕ್ಸಿಯಾಡಾಂಗ್ ಸಾಂಗ್ (Xiaodong Song) ಇವರಿಬ್ಬರೂ ಸೇರಿ ಸಂಶೋಧನೆ ನಡೆಸಿ ವರದಿ ಪ್ರಕಟಿಸಿದ್ದಾರೆ. ಇವರು 1960 ರ ದಶಕದಿಂದಲೂ, ಭೂಕಂಪದಿಂದ ಭೂಮಿಯ ಒಳಭಾಗದ ಮೂಲಕ ಹಾದುಹೋಗುವ ಭೂಕಂಪನ ಅಲೆಗಳನ್ನು ಅಧ್ಯಯನ ಮಾಡುತ್ತಿದ್ದಾರೆ. ಭೂಗರ್ಭದ ಪ್ರರಿಭ್ರಮಣೆ ಎಷ್ಟು ವೇಗವಾಗಿದೆ ಎಂಬುದನ್ನು ಊಹಿಸಲು ಈ ಅಧ್ಯಯನ ನಡೆಸುತ್ತಿದ್ದಾರೆ. ಇದನ್ನೂ ಓದಿ: EXPLAINED: 60 ವರ್ಷಗಳಲ್ಲೇ ಮೊದಲ ಬಾರಿಗೆ ಕುಸಿದ ಚೀನಾ ಜನಸಂಖ್ಯೆ – ಇದು ಹೇಗಾಯ್ತು ಗೊತ್ತಾ?
ವಿಜ್ಞಾನಿಗಳು ಏನು ಹೇಳ್ತಾರೆ?
“2009 ರಿಂದ ಭೂಕಂಪನ ದಾಖಲೆಗಳು ಕಾಲಾನಂತರದಲ್ಲಿ ಬದಲಾಯಿತು. ಈ ಸಂಬಂಧ ಸ್ವಲ್ಪ ವ್ಯತ್ಯಾಸವನ್ನು ತೋರಿಸಿವೆ. ಇದನ್ನು ಆಧರಿಸಿ, ಭೂಮಿಯ ಒಳಗರ್ಭವು ತಿರುಗುವಿಕೆಯನ್ನು ನಿಲ್ಲಿಸಿದೆ. ಅಷ್ಟೇ ಅಲ್ಲ, ಅದು ವಿರುದ್ಧ ದಿಕ್ಕಿನಲ್ಲಿ ತಿರುಗುತ್ತಿದೆ. 1980 ಮತ್ತು 1990 ರ ನಡುವಿನ ದಶಕವನ್ನು ಗಮನಿಸಿದಾಗ, ಈ ಪರಿಭ್ರಮಣೆಯಲ್ಲಿ ಒಂದಷ್ಟು ಬದಲಾವಣೆ ಕಂಡುಬರುತ್ತದೆ. ಆದರೆ 2010 ರಿಂದ 2020 ರವರೆಗೆ ಗಮನಿಸಿದಾಗ ಹೆಚ್ಚಿನ ಬದಲಾವಣೆ ಕಾಣುವುದಿಲ್ಲ ಎಂದು ಅವರು ತಮ್ಮ ಸಂಶೋಧನೆಯಲ್ಲಿ ಉಲ್ಲೇಖಿಸಿದ್ದಾರೆ.
ಭೂ ಕೇಂದ್ರ ಯಾಕೆ ತಿರುಗುತ್ತೆ?
ಹೊರಗರ್ಭದಲ್ಲಿ ಉತ್ಪತ್ತಿಯಾಗುವ ಕಾಂತೀಯ ಕ್ಷೇತ್ರದಿಂದ ಭೂ ಕೇಂದ್ರವು ತಿರುಗತ್ತದೆ. ಅಲ್ಲದೇ ನಡುಗೋಳದ (ಮ್ಯಾಂಟಲ್) ಗುರುತ್ವಾಕರ್ಷಣೆಯ ಪರಿಣಾಮಗಳಿಂದ ಸಮತೋಲನಗೊಳ್ಳುತ್ತದೆ. ಒಳಗರ್ಭ ಹೇಗೆ ತಿರುಗುತ್ತದೆ ಎಂಬುದನ್ನು ತಿಳಿದುಕೊಳ್ಳುವುದರಿಂದ, ಪದರಗಳು ಹೇಗೆ ಸಂವಹನ ನಡೆಸುತ್ತವೆ ಎಂಬುದನ್ನು ಅರಿಯಬಹುದು. ಇದು ಭೂಮಿಯ ಆಳವಾದ ಇತರ ಪ್ರಕ್ರಿಯೆಗಳ ಮೇಲೂ ಬೆಳಕು ಚೆಲ್ಲುತ್ತದೆ.
ವಿದ್ಯುತ್ಕಾಂತೀಯ ಮತ್ತು ಗುರುತ್ವಾಕರ್ಷಣೆಯ ಬಲಗಳಲ್ಲಿನ ಅಸಮತೋಲನವು ಭೂಮಿಯ ಒಳಭಾಗದ ತಿರುಗುವಿಕೆಯನ್ನು ನಿಧಾನಗೊಳಿಸುತ್ತದೆ. ನಂತರ ಕ್ಷಣ ಕಾಲ ನಿಂತು ವಿರುದ್ಧ ದಿಕ್ಕಿನಲ್ಲಿ ತಿರುಗುತ್ತದೆ. 70 ವರ್ಷಗಳಿಗೆ ಒಮ್ಮೆ, ಪರಿಭ್ರಮಣೆಯ ಚಕ್ರ ಬದಲಾಗುತ್ತಿರುತ್ತೆ ಎಂದು ಸಾಂಗ್ ಮತ್ತು ಯಾಂಗ್ ಲೆಕ್ಕಾಚಾರ ಹಾಕಿದ್ದಾರೆ. 1970ರ ದಶಕದ ಆರಂಭದಲ್ಲಾದ ಭೂ ಕೇಂದ್ರದ ಒಂದು ಪರಿಭ್ರಮಣೆಯನ್ನು ವಿಜ್ಞಾನಿಗಳು ಪತ್ತೆಹಚ್ಚಿದ್ದಾರೆ. 2009-2010 ರಲ್ಲಿ ತಮ್ಮ ಡೇಟಾದಲ್ಲಿ ಅವರು ಇದನ್ನು ಗುರುತಿಸಿದ್ದಾರೆ.
ಈ ಸಂಶೋಧನೆ ಬಗ್ಗೆ ಭೂಭೌತಶಾಸ್ತ್ರಜ್ಞ Hrvoje Tkalcic (ಸಂಶೋಧನೆಯಲ್ಲಿ ಇಲ್ಲದ ವಿಜ್ಞಾನಿ) ಪ್ರತಿಕ್ರಿಯಿಸಿದ್ದಾರೆ. “ಭೂಗರ್ಭದಲ್ಲಿನ ಪರಿಭ್ರಮಣೆಯ ವೇಗ ಬದಲಾಗುತ್ತಿರುತ್ತದೆ. ಈ ಬಗ್ಗೆ ಚರ್ಚೆಯೂ ಆಗಿದೆ. ಭೂ ಕೇಂದ್ರ ತಿರುಗುವುದನ್ನು ನಿಲ್ಲಿಸುವುದಿಲ್ಲ ಎಂದು ತಿಳಿಸಿದ್ದಾರೆ. ಮುಂದುವರಿದು, “ಹೊಸ ಅಧ್ಯಯನದ ದತ್ತಾಂಶ ವಿಶ್ಲೇಷಣೆ ಉತ್ತಮವಾಗಿದೆ. ಇದರ ಬಗೆಗಿನ ಸಂಶೋಧನೆಯನ್ನು ಎಚ್ಚರಿಕೆಯಿಂದ ತೆಗೆದುಕೊಳ್ಳಬೇಕು. ಈ ಆಸಕ್ತಿದಾಯಕ ವಿಷಯದ ಮೇಲೆ ಬೆಳಕು ಚೆಲ್ಲಲು ಹೆಚ್ಚಿನ ಡೇಟಾ ಮತ್ತು ಹೊಸ ವಿಧಾನಗಳ ಸಂಶೋಧನೆ ಅಗತ್ಯವಿದೆ” ಎಂದು ಅಭಿಪ್ರಾಯಪಟ್ಟಿದ್ದಾರೆ.
Hrvoje Tkalcic ಅವರು ಈ ಹಿಂದೆ ತಾವೂ ಕೂಡ ಸಂಶೋಧನಾ ವರದಿಯೊಂದನ್ನು ಪ್ರಕಟಿಸಿದ್ದರು. ಅದರಲ್ಲಿ, “ಭೂಮಿಯ ಒಳಭಾಗದ ತಿರುಗುವಿಕೆಯಲ್ಲಿ 20-30 ವರ್ಷಗಳಿಗೊಮ್ಮೆ ಬದಲಾವಣೆ ಆಗುತ್ತಿರುತ್ತದೆ” ಎಂದು ಉಲ್ಲೇಖಿಸಿದ್ದಾರೆ. ಆದರೆ ಸಾಂಗ್ ಮತ್ತು ಯಾಂಗ್ ಅವರ ಇತ್ತೀಚಿನ ಸಂಶೋಧನೆಯಲ್ಲಿ, ಭೂ ಕೇಂದ್ರದ ಪರಿಭ್ರಮಣೆಯಲ್ಲಿ 70 ವರ್ಷಗಳಿಗೊಮ್ಮೆ ಬದಲಾವಣೆ ಆಗುತ್ತೆ ಎಂದು ವಿಶ್ಲೇಷಿಸಿದ್ದಾರೆ.
ಭೂಗರ್ಭದ ತಿರುಗುವಿಕೆಯಿಂದ ಏನಾಗುತ್ತೆ?
ಬಿಸಿ ಹಾಗೂ ಘನ ಕಬ್ಬಿಣದಿಂದ ಕೂಡಿರುವ ಭೂ ಕೇಂದ್ರವು ತಿರುಗುವುದರಿಂದ, ಭೂಮಿಯ ಮೇಲೆ ಕಾಂತೀಯ ಕ್ಷೇತ್ರ ಮತ್ತು ಗುರುತ್ವಾಕರ್ಷಣೆ ಇದೆ. ಭೂಮಿಯ ಕೇಂದ್ರವು ಒಂದೇ ದಿಕ್ಕಿನಲ್ಲಿ ತಿರುಗುವುದರಿಂದ ಭೂಮಿಯ ಮೇಲೆ ಗುರುತ್ವಾಕರ್ಷಣೆ ಇರುತ್ತದೆ.
ಭೂಮಿಯ ಗುರುತ್ವಾಕರ್ಷಣೆಗೆ ಕಾದಿದ್ಯಾ ಅಪಾಯ?
ಭೂಮಿಯ (Earth) ಮಧ್ಯಭಾಗದ ತಿರುಗುವಿಕೆಯ ದಿಕ್ಕಿನ ಬದಲಾವಣೆಯಿಂದ ಏನಾದರು ಅಪಾಯ ಸಂಭವಿಸಬಹುದೇ ಎಂಬ ಆತಂಕ ಮೂಡಿದೆ. ಆದರೆ ಈ ರೀತಿಯ ಬದಲಾವಣೆಯಿಂದ ಯಾವುದೇ ಗಂಡಾಂತರ ಆಗುವುದಿಲ್ಲ ಎಂದು ಡಚ್ ವಿಜ್ಞಾನಿಯೊಬ್ಬರು ಹೇಳಿದ್ದಾರೆ. “ಭೂ ಕೇಂದ್ರದ ಪರಿಭ್ರಮಣೆ ದಿಕ್ಕಿನ ಬದಲಾವಣೆಯಿಂದ ಭೂಮಿಯು ಸ್ಫೋಟಗೊಳ್ಳುವುದಿಲ್ಲ. ಇದರಿಂದ ಯಾವುದೇ ಪ್ರಳಯ ಆಗುವುದಿಲ್ಲ. ಈ ಘಟನೆಯಿಂದ ಭೂಮಿಗಾಗಲಿ ಅಥವಾ ಜೀವಿಗಳಿಗಾಗಲಿ ಯಾವುದೇ ತೊಂದರೆಯಾಗುವುದಿಲ್ಲ ಎಂದು ಡಚ್ ಭೂಕಂಪಶಾಸ್ತ್ರಜ್ಞ ಇಂಗೆ ಲೆಹ್ಮನ್ ತಿಳಿಸಿದ್ದಾರೆ. ಆದರೆ ಕೆಲವು ವಿಜ್ಞಾನಿಗಳು ಬೇರೆ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಈ ರೀತಿಯ ಬದಲಾವಣೆಯಿಂದ ಭೂಮಿಯ ಮೇಲಿನ ಗುರುತ್ವಾಕರ್ಷಣೆ ಮೇಲೆ ಪರಿಣಾಮ ಬೀರಬಹುದು ಎಂದು ಕೆಲ ವಿಜ್ಞಾನಿಗಳು ಅಂದಾಜಿಸಿದ್ದಾರೆ.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k