ಬೆಂಗಳೂರು: ಕೆಪಿಎಸ್‌ಸಿ ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ ಮತ್ತೊಂದು ಸಾಕ್ಷಿ ʻಪಬ್ಲಿಕ್ ಟಿವಿʼಗೆ (Public TV) ಲಭ್ಯವಾಗಿದೆ. ಸ್ಫೋಟಕ ವಿಡಿಯೋದಲ್ಲಿ ತಾನು ಕೆಪಿಎಸ್‌ಸಿ ಮಧ್ಯವರ್ತಿ (ಬ್ರೋಕರ್) ಎಂದು ಹೇಳಿಕೊಳ್ಳುವ ವ್ಯಕ್ತಿಯೊಬ್ಬ ಅಭ್ಯರ್ಥಿಯೊಂದಿಗೆ (KPSC Candidate) ಸಂಭಾಷಣೆ ನಡೆಸಿರುವುದು ಬೆಳಕಿಗೆ ಬಂದಿದೆ.

ವಿಡಿಯೋದಲ್ಲಿರುವ ವ್ಯಕ್ತಿ, ʻಹಣ ನೀಡಿದರೆ ಸರ್ಕಾರಿ ಲಾಕರ್‌ನಲ್ಲಿ ಸುರಕ್ಷಿತವಾಗಿರುವ ಒಎಂಆರ್ (OMR) ಶೀಟ್‌ಗಳಲ್ಲಿಯೂ ತಿದ್ದುಪಡಿ ಮಾಡಿಸಬಹುದುʼ ಎಂದು ಹೇಳಿದ್ದಾನೆ. ಅಲ್ಲದೇ, ʻಅಂಕಗಳನ್ನ ತಿದ್ದುಪಡಿ ಮಾಡಿ ಅಂತಿಮ ಆಯ್ಕೆ ಪಟ್ಟಿಯಲ್ಲಿ ಹೆಸರು ಸೇರಿಸಬಹುದುʼ ಎಂಬ ಮಾತುಗಳು ಕೂಡ ಕೇಳಿಬಂದಿವೆ.

ಆರೋಪಿತನ ಸಂಭಾಷಣೆಯಲ್ಲಿ, ʻಒಎಂಆರ್ ಶೀಟ್ ಅನ್ನು ಟೇಬಲ್‌ನಿಂದ ಟೇಬಲ್‌ಗೆ ಸಾಗಿಸಲು ಹಣ ಕೊಡಬೇಕು, ಹಣ ನೀಡಿದ 2 ದಿನಗಳಲ್ಲೇ ಅಂತಿಮ ಪಟ್ಟಿಯಲ್ಲಿ ಹೆಸರು ಬರುತ್ತದೆ. ಅಮೌಂಟ್ ಕೊಟ್ಟ ಮಾರನೇ ದಿನ ಆರ್ಡರ್ ಕೊಡ್ತಾರೆ. ಫೋರ್ಜರಿ ಮಾಡಿದ್ರೆ ದೂರು ಕೊಡಬಹುದು, ಆದ್ರೆ ಇದರಲ್ಲಿ ದೂರು ಕೊಡೋದಕ್ಕೆ ಅವಕಾಶವೇ ಇರೋದಿಲ್ಲʼ ಎಂದೂ ಕೂಡ ಬ್ರೋಕರ್ ವಿಡಿಯೋದಲ್ಲಿ ಹೇಳಿದ್ದಾನೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತಷ್ಟು ಗಂಭೀರ ಆರೋಪಗಳು ಕೇಳಿಬಂದಿವೆ. ಆದರೆ, ಈ ವಿಡಿಯೋದಲ್ಲಿರುವ ಆರೋಪಗಳ ಬಗ್ಗೆ ಸಂಬಂಧಿತ ಅಧಿಕಾರಿಗಳ ಅಧಿಕೃತ ಪ್ರತಿಕ್ರಿಯೆ ಇನ್ನಷ್ಟೇ ಲಭ್ಯವಾಗಬೇಕಿದೆ. ಆರೋಪಗಳ ಸತ್ಯಾಸತ್ಯತೆ ಕುರಿತು ತನಿಖೆಯ ಬಳಿಕವೇ ಸ್ಪಷ್ಟ ಚಿತ್ರಣ ಹೊರಬರಲಿದೆ.

ಅಭ್ಯರ್ಥಿ ಜೊತೆಗೆ ಬ್ರೋಕರ್ ಸಂಭಾಷಣೆಯಲ್ಲಿ ಏನಿತ್ತು?
ಬ್ರೋಕರ್: ನಾನು ನಿನಗೆ ಏನ್ ಶ್ಯೂರಿಟಿ ಕೊಡಲಿ ಹೇಳು..? ಒಎಂಆರ್ ರಿಸಲ್ಟ್ ಆಗಿ ಒಂದು ತಿಂಗಳಾಯ್ತು, ಅಂದ್ರೆ ಅದು ಸರ್ಕಾರಿ ಲಾಕರ್‌ನಲ್ಲಿರುತ್ತೆ. ನಿಮ್ಗೆ ಎಷ್ಟು ಆಡ್ ಮಾಡಬೇಕೋ ಅಷ್ಟು ಮಾಡಿ. ನಿಮಗೊಂದು ಫೋಟೋ ಬರುತ್ತೆ, ಅದು ಆದ ಕೂಡಲೇ ದುಡ್ಡು ಕೊಡಿ. ಅದಕ್ಕೆ ನಿಮ್ಮ ಹತ್ತಿರ ದುಡ್ಡು ತೆಗೆದುಕೊಳ್ಳಲ್ಲ, ಪ್ರಕ್ರಿಯೆ ಮಾಡೋಕೆ ದುಡ್ಡು ಕೇಳ್ತಿರೋದು. 99 ಪರ್ಸೆಂಟ್ ನಾನ್ ಹೇಳ್ತಿನಿ, ಅವರು 101 ಪರ್ಸೆಂಟ್ ಹೇಳ್ತಿದ್ದಾರೆ. ಮಾಡೋರೆ 101 ಪರ್ಸೆಂಟ್ ಹೇಳಿದ್ದಾರೆ. ನಾನು ಬಹಳ ಸಬ್ಜೆಕ್ಟ್ ಮಾಡ್ಸಿದ್ದೀನಿ ಅವರ ಕಡೆಯಿಂದ. ನಿಮಗೆ ಗೊತ್ತಿರಲ್ಲ ಹಾಗಾಗಿ, ನಿಮ್ಗೆ ಕಾನ್ಫಿಡೆಂಟ್ ಇರೋದಿಲ್ಲ. ಒಂದು ಕೆಲಸ ಮಾಡಿದ್ರೆ ನಿಮಗೆ ಗೊತ್ತಾಗುತ್ತೆ. ಒಎಂಆರ್ ತರೋದಿಕ್ಕೆ ನಾಲ್ಕು ದಿನ ಕಾದಿದ್ದೇನೆ. ಹೊರಗೆ ಬರಬೇಕಂದ್ರೆ ನಾಲ್ಕೈದು ದಿನ ಬೇಕಾಗುತ್ತದೆ. ಒಂದು ಟೇಬಲ್‌ನಿಂದ ಇನ್ನೊಂದು ಟೇಬಲ್‌ಗೆ ಬರಬೇಕು, ನಿನಗೆ ಅರ್ಥ ಆಯ್ತಾ…? 2 ದಿನ ಟೈಂ ಕೊಡು ಲಿಸ್ಟ್‌ನಲ್ಲಿ ಹೆಸರು ಹಾಕಿಸಿಕೊಡ್ತಿನಿ, ದುಡ್ಡು ಇವತ್ತು ಕೊಟ್ರೆ ನಾಳೆ.. ನಾಡಿದ್ದಷ್ಟರಲ್ಲಿ ಹೆಸರು ಹಾಕಿಸುತ್ತೀನಿ.

ಅರ್ಥನೇ ಮಾಡಿಕೊಳ್ತಿಲ್ವಲ್ಲಾ ಮಾರಾಯ, ಹೇಳೋದನ್ನ ಕೇಳೋ ವಿನೋದ.. ನನಗೆ ದುಡ್ಡು ಕೊಡಬೇಡ ಅವರಿಗೆ ಹಾಕಿಸು, ನಮ್ಮ ಗುರುಗಳು, ಅವರು ಏನ್ ಹೇಳ್ತಾರೆ ಅದೇ ಫೈನಲ್. ನನ್ನ ಎರಡು ಮಕ್ಕಳ ಭವಿಷ್ಯ ಮಾಡಿದ್ದಾರೆ ಅವರು, ನಾನು ನಿನ್ನ ತರನೇ, ನಿಮ್ಮ ತಂದೆ ಹೇಗೆ ವಿಚಾರಿಸುತ್ತಾರಲ್ಲ, ನನ್ನ 2 ಮಕ್ಕಳ ಭವಿಷ್ಯ ಏನ್ ಮಾಡ್ತೀರ ಮಾಡಿ ಅಂದೆ. ದುಡ್ಡು ಕಟ್ಟಿದ್ರೆ ಮಾತ್ರ ಸಾಧ್ಯ ಅಂತೇಳಿದ್ರು, ದುಡ್ಡು ಕೊಟ್ಟ ಮರುದಿನ ಆರ್ಡರ್ ಕಾಪಿ ಕೊಟ್ರು, ಅವರ ಅಕೌಂಟ್‌ಗೆ ಹಾಕಿದ್ರು ಓಕೆ, ನನಗೆ ಹಾಕಿದ್ರು ಓಕೆ, ಶೀಟ್ ಇಟ್ಕೋ, ಫೋರ್ಜರಿ ಆದ್ರೆ ಕಂಪ್ಲೆಂಟ್ ಕೊಡಬಹುದಲ್ವಾ..?
ಬೆಂಗಳೂರಿಗೆ ಹೋಗಿ ಬರೋದು ಖರ್ಚು ನೋಡ್ಕೋ, ನೀನು ವರಿ ಮಾಡಿಕೊಳ್ಳಬೇಡ, ಕೆಲಸ ಮಾಡಿ ಕೊಡ್ತಿನಿ. ನೀನು ಚೆಕ್ ಕೊಡು ಅಥವಾ ತೋಗೋ ಬಿಡು… ಆಲ್‌ರೆಡಿ ಅವರು ಬೆಂಗಳೂರಿನಲ್ಲಿ ಮಾತನಾಡಿ ಫೈನಲ್ ಮಾಡಿದ್ದಾರೆ. ನಿನ್ನ ಕೆಲಸ ಸ್ಟಾರ್ಟ್ ಆಗಿದೆ. ನನ್ನ ಮೇಲೆ ವಿಶ್ವಾಸವಿಡು, ನನ್ನ ಅಕೌಂಟ್‌ಗೆ ಹಾಕು, ಅವರ ಅಕೌಂಟ್‌ಗೆ ಹಾಕಿದ್ರೆ ಫೋಟೋ ತಗೋ, ಬ್ಯಾಂಕಿನ ಪ್ರೂಫ್ ಇರುತ್ತಲ್ಲ… ನೀನು ಹೇಳಿದ್ರೆ ಮುನ್ನುಗ್ಗುತ್ತೀನಿ, ಟೋಟಲ್ ಮಾಡಿ ಹೇಳಲಾ..? 37 ಪ್ಲಸ್ ಆರ್ ಮೈನಸ್..
