ಧಾರವಾಡ: ಮುಂಗಾರು ಮಳೆ ಈಗಾಗಲೇ ಆರಂಭವಾಗಿದೆ. ರಾಜ್ಯದ ಅಲ್ಲಲ್ಲಿ ವರ್ಷಧಾರೆಯಾಗ್ತಿದೆ. ಆದ್ರೆ ಧಾರವಾಡದ ಕುಂದಗೋಳ ತಾಲೂಕಿನಲ್ಲಿ ಕಳೆದ 6 ವರ್ಷಗಳಿಂದ ಬರ ಆವರಿಸಿದೆ. ಹಿರೇಗುಂಜಾಳ ಗ್ರಾಮದ ಇವತ್ತಿನ ಪಬ್ಲಿಕ್ ಹೀರೋ ಬಿಸೇರೊಟ್ಟಿ ಸಹೋದರರು ಇಂತಹ ಸ್ಥಿತಿಯಲ್ಲೂ ಗ್ರಾಮಕ್ಕೆ ಉಚಿತವಾಗಿ ಕುಡಿಯುವ ನೀರು ಕೊಡ್ತಿದ್ದಾರೆ.
ಕಳೆದ ಆರು ವರ್ಷಗಳಿಂದ ಕುಂದುಗೋಳ ತಾಲೂಕಿನ ಹಿರೇಗುಂಜಾಳ ಗ್ರಾಮದಲ್ಲಿ ಬರ ಆವರಿಸಿದೆ. ಇದ್ರಿಂದ ನೀರಿನ ಮೂಲಗಳೆಲ್ಲಾ ಬರಿದಾಗಿವೆ. ಅಲ್ಲಲ್ಲಿ ಕೊಳವೆ ಬಾವಿಗಳಲ್ಲಿ ಸಿಗೋ ನೀರನ್ನ ಕೃಷಿಗೆ ಬಳಸ್ತಿದ್ದಾರೆ. ಆದ್ರೆ ಹಿರೇಗುಂಜಾಳ ಗ್ರಾಮದ ಪರಶುರಾಮ್ ಬಿಸೇರೊಟ್ಟಿ ತಮಗೆ ಸಿಕ್ಕಿರುವ ಕೊಳವೆ ಬಾವಿಯ ನೀರನ್ನ ಮೂರು ಗ್ರಾಮದ ಜನರಿಗೆ ಕೊಡ್ತಿದ್ದಾರೆ.
Advertisement
Advertisement
ಪರಶುರಾಮ್ ಅವ್ರನ್ನ ನೋಡಿದ ಅಣ್ಣ ಯಲ್ಲಪ್ಪಾ ಸಹ ಬೋರವೆಲ್ ನೀರನ್ನು ಸಾರ್ವಜನಿಕರಿಗೆ ಕೊಟ್ಟಿದ್ದಾರೆ. ಇಬ್ಬರೂ ದಿನದ 24 ಗಂಟೆ ಕಾಲ ಜನರಿಗೆ ಕುಡಿಯುವ ನೀರು ಪೂರೈಸ್ತಿದ್ದಾರೆ. ಇಬ್ಬರಿಗೂ ತಲಾ 7 ಎಕರೆ ಜಮೀನು ಇದ್ದರೂ ಕೃಷಿ ಮಾಡದೆ ಕುಡಿಯುವ ನೀರು ಕೊಡ್ತಿದ್ದಾರೆ. ಇವರ ಬೋರ್‍ವೆಲ್ ಪಕ್ಕದಲ್ಲಿ ಸರ್ಕಾರ ಟ್ಯಾಂಕ್ ಕಟ್ಟಿಸಿದ್ದು, ಆ ಟ್ಯಾಂಕ್‍ಗೆ ಇವರು ನೀರು ತುಂಬುತ್ತಿದ್ದಾರೆ.
Advertisement
ಬರಕ್ಕೆ ಬೆಚ್ಚಿದ ಗ್ರಾಮದ ಬಹುತೇಕ ಜನ ಗುಳೆ ಹೊರಟಿದ್ದಾರೆ. ಆದ್ರೆ ಇಂಥ ಬರದಲ್ಲೂ ನೀರು ಕೊಡ್ತಿರೋ ಬಿಸೇರೊಟ್ಟಿ ಸಹೋದರರನ್ನ ಗ್ರಾಮಸ್ಥರು ಭಗೀರಥರು ಅಂತ ಕರೀತಿದ್ದಾರೆ.
Advertisement