ಚಾಮರಾಜನಗರ: ವಿಶ್ವ ಪರಿಸರ ದಿನ ಎಲ್ಲರೂ ಪರಿಸರದ ಬಗ್ಗೆ ಮಾತನಾಡುತ್ತಾರೆ. ಆದರೆ ಚಾಮರಾಜನಗರದ ನಿವಾಸಿ ವೆಂಕಟೇಶ್ ಹಸಿರ ಕ್ರಾಂತಿಗೆ ಮುಂದಾಗಿದ್ದಾರೆ ಇವರೇ ನಮ್ಮ ಇವತ್ತಿನ ಪಬ್ಲಿಕ್ ಹೀರೋ.
ಚಾಮರಾಜನಗರ ಜಿಲ್ಲೆ ಅಂದರೆ ದಟ್ಟನೆಯ ಕಾಡು ಕಣ್ಮುಂದೆ ಬರುತ್ತದೆ. ಆದರೆ ಪಟ್ಟಣದಲ್ಲಿ ಮಾತ್ರ ಇಂತಹ ಹಸಿರಿನ ಹೊದಿಕೆ ಕಾಣುವುದಿಲ್ಲ. ಐದು ವರ್ಷಗಳ ಭೀಕರ ಬರಗಾಲ ಹಾಗೂ ಅಗಲೀಕರಣ ಹೆಸರಲ್ಲಿ ರಸ್ತೆಯ ಇಕ್ಕೆಲದ ಮರಗಳ ಬುಡಕ್ಕೆ ಕೊಳ್ಳಿ ಬಿದ್ದಿದೆ. ಇದನ್ನ ಸೂಕ್ಷ್ಮವಾಗಿ ಗಮನಿಸಿದ ವೆಂಕಟೇಶ್ ಹಸಿರು ಕ್ರಾಂತಿಗೆ ಮುನ್ನುಡಿ ಬರೆದಿದ್ದಾರೆ.
ವೆಂಕಟೇಶ್ ಅವರು ಡಾ.ರಾಜ್‍ಕುಮಾರ್ ಅಭಿಮಾನಿಯಾಗಿದ್ದು, ಸಂಗೀತ ಶಿಕ್ಷಕ ಹಾಗೂ ಚಾರ್ಟೆಡ್ ಅಕೌಂಟೆಂಟ್ ಸಹ ಆಗಿ ಕೆಲಸ ಮಾಡುತ್ತಿದ್ದಾರೆ. ಕಳೆದ ವರ್ಷ ನಾನು ರಾಜ್ ಹುಟ್ಟುಹಬ್ಬದಂದು ನಾಲ್ಕು ಗಿಡ ನೆಟ್ಟು ಪೋಷಿಸಿದ್ದೆ. ನಂತರ ಪ್ರತಿಯೊಬ್ಬ ಚಲನಚಿತ್ರ ನಟ ಹಾಗೂ ಸಂಗೀತಗಾರರ ಹುಟ್ಟು ಹಬ್ಬದಂದು ನಾನು ನಾಲ್ಕು ಗಿಡ ನೆಡುತ್ತಿದ್ದೆ. ಈಗ ನಾಲ್ಕು ಗಿಡ ನೆಡುವ ಮೂಲಕ ಇಂದಿಗೆ ಸಾವಿರಕ್ಕೂ ಅಧಿಕ ಗಿಡಗಳನ್ನ ಬೆಳೆಸಿದ್ದೇನೆ ಎಂದು ವೆಂಕಟೇಶ್ ಹೇಳಿದ್ದಾರೆ.
ರಸ್ತೆ ಇಕ್ಕೆಲ, ಕ್ರೀಡಾಂಗಣಗಳ ಸುತ್ತ ಹೊಂಗೆ, ಬೇವು, ಬೀಟೆ, ಬುಗರಿ ಸೇರಿದಂತೆ ಹತ್ತು ಹಲವು ಗಿಡಗಳನ್ನ ನೆಟ್ಟಿರುವ ವೆಂಕಟೇಶ್ ಇದಕ್ಕಾಗಿ 6 ಲಕ್ಷ ಖರ್ಚು ಮಾಡಿದ್ದಾರೆ. ಗಿಡ ಬೆಳೆಸಲಿಕ್ಕಾಗಿಯೇ ನಗರದ ಕಾರ್ಪೋರೇಷನ್ ಬ್ಯಾಂಕ್ ನಲ್ಲಿ ಸಾಲ ಪಡೆದಿದ್ದಾರೆ. ಸಾಲು ಮರದ ತಿಮ್ಮಕ್ಕರನ್ನ ಗುರುಗಳಾಗಿ ಸ್ವೀಕರಿಸಿದ್ದಾರೆ ಎಂದು ವೆಂಕಟೇಶ್ ಸ್ನೇಹಿತ ಗಿರೀಶ್ ಹೇಳುತ್ತಾರೆ.
ವೆಂಕಟೇಶ್ ಗಿಡ ನೆಟ್ಟು ಸುಮ್ಮನಾಗುವುದಿಲ್ಲ. ಪ್ರತಿ ನಿತ್ಯವೂ ಗಿಡಗಳ ಬಳಿ ತೆರಳಿ, ಕಳೆ ಕಿತ್ತು, ಗೊಬ್ಬರ, ನೀರು ಹಾಕಿ ಪೋಷಣೆಯನ್ನೂ ಮಾಡುತ್ತಿದ್ದಾರೆ.
https://www.youtube.com/watch?v=smPb3cqjShA