ತುಮಕೂರು: ಎಲ್ಲಾದರೂ ಅನಾಥ ಶವ ಕಂಡುಬಂದರೆ, ಸಾರ್ವಜನಿಕರು ನೇರವಾಗಿ ಪೊಲೀಸರಿಗೆ ಫೋನ್ ಮಾಡ್ತಾರೆ. ಆದರೆ ತುಮಕೂರು ನಗರದಲ್ಲಿ ಇಂತಹ ವಿಷಯ ತಿಳಿದ ಕೂಡಲೇ ಪೊಲೀಸರು ಫೋನ್ ಮಾಡೋದು ಸುಹೇಲ್ ಪಾಷಾ ಅನ್ನೋ ವ್ಯಕ್ತಿಗೆ. ಯಾಕಂದ್ರೆ ಸುಹೇಲ್ ಸಹಾಯದಿಂದ ಅನಾಥ ಶವಗಳ ಸಂಸ್ಕಾರ ನಡೆಯುತ್ತದೆ.
ಬರೀ ಶವ ಅಂದ್ರೆ ಸಾಕು ನಾವು ಹತ್ತಿರಕ್ಕೂ ಸುಳಿಯಲ್ಲ. ಆದರೆ ಕೊಳೆತು ನಾರುವ, ಕಣ್ಣಿಂದ ನೋಡಲೂ ಆಗದ ಶವಗಳ ಹತ್ತಿರಕ್ಕೆ ಹೋಗ್ತಾರೆ ನಮ್ಮ ಪಬ್ಲಿಕ್ ಹೀರೋ ಸುಹೇಲ್ ಪಾಷಾ. ಆತ್ಮಹತ್ಯೆ ಮಾಡಿಕೊಂಡ, ಬೆಂಕಿ ಹಚ್ಚಿಕೊಂಡ, ವಿಷ ಕುಡಿದ, ಕೊಲೆಯಾದ ಹೀಗೆ ಯಾವುದೇ ಶವಗಳಿದ್ದರೂ ಅವುಗಳನ್ನು ತಮ್ಮ ಆಂಬುಲೆನ್ಸ್‍ನಲ್ಲಿ ಜಿಲ್ಲಾಸ್ಪತ್ರೆಗೆ ತಂದು ಪೋಸ್ಟ್ ಮಾರ್ಟಮ್ ಮಾಡಲು ವೈದ್ಯರಿಗೆ ನೆರವಾಗುತ್ತಾರೆ. ಹಾಗಾಗಿ ಎಲ್ಲೇ ಅನಾಥ ಶವ ಸಿಕ್ಕರೂ ತುಮಕೂರಿನ ಜನ ಫೋನ್ ಮಾಡೋದು ಈ ಸುಹೇಲ್ ಪಾಷಾಗೆ. ಸದ್ಯ ತುಮಕೂರು ಜಿಲ್ಲೆಯ ಪೊಲೀಸರ ಪಾಲಿಗೆ ಸುಹೇಲ್ ಸ್ನೇಹಜೀವಿಯಾಗಿದ್ದಾರೆ.
Advertisement
ಸುಹೇಲ್ ಪಾಷಾ ಈ ಕೆಲಸ ಮಾಡಲೂ ಒಂದು ಕಾರಣವಿದೆ. ತುಮಕೂರು ಜಿಲ್ಲಾಸ್ಪತ್ರೆಯಲ್ಲಿಯೇ ಸುಹೇಲ್ ತಂದೆ ಆಂಬುಲೆನ್ಸ್ ಚಾಲಕರಾಗಿದ್ದರು. ಆಗ ಶವಗಳ ಸಾಗಾಣೆಗೆ ಖಾಸಗಿ ಆಂಬುಲೆನ್ಸ್‍ಗಳ ಚಾಲಕರು ಮನಬಂದಂತೆ ಹಣ ಕೇಳುತ್ತಿದ್ದರಂತೆ. ಇದನ್ನು ನೋಡಿದ್ದ ಸುಹೇಲ್ ತಂದೆ, ಸಾಧ್ಯವಾದರೆ ನೀನೊಂದು ಆಂಬುಲೆನ್ಸ್ ಖರೀದಿಸಿ ಮೃತದೇಹಗಳ ಸಾಗಾಣಿಗೆ ಸಹಾಯ ಮಾಡು ಅಂತಾ ಹೇಳಿದ್ದರು. ಈ ಹಿನ್ನೆಲೆಯಲ್ಲಿ ಸುಹೇಲ್ ಅನಾಥ ಶವಗಳಿಗೆ ಮುಕ್ತಿ ತೋರಿಸುತ್ತಿದ್ದಾರೆ.
Advertisement
ಎಲ್ಲಾ ಪೊಲಿಸ್ ಠಾಣೆಗಳಲ್ಲಿ ಸುಹೇಲ್ ಪಾಷಾ ಅನ್ನೋರಾ ಸೇವೆ ಮತ್ತು ವಾಹನವನ್ನು ಅನೇಕ ಬಾರಿ ಉಪಯೋಗಿಸಿಕೊಂಡಿದ್ದೀವಿ. ನಿಜವಾಗಿಯೂ ಇದೊಂದು ಮಾದರಿ ಸೇವೆ ಅಂತಾ ಸಹಾಯಕ ಪೊಲೀಸ್ ವರಿಷ್ಠಾಧಿಕಾರಿ ಮಂಜುನಾಥ್ ಹೇಳುತ್ತಾರೆ.
Advertisement
ಸುಹೇಲ್ ಕಳೆದ 19 ವರ್ಷಗಳಿಂದ ಇದೇ ಕೆಲಸ ಮಾಡ್ತಿದ್ದಾರೆ. ಪೊಲೀಸ್ ಇಲಾಖೆಗೆ ಆಪತ್ಬಾಂಧವನಾಗಿ ದಿನದ 24 ಗಂಟೆಯೂ ಕೆಲಸ ಮಾಡೋ ಸುಹೇಲ್‍ಗೆ ನಮ್ಮದೊಂದು ಸಲಾಂ.