ಬೆಂಗಳೂರು: ಪಬ್ಲಿಕ್ ಟಿವಿ ಪಬ್ಲಿಕ್ ಹೀರೋ ದಾವಣಗೆರೆಯ ಸಾಲುಮರದ ವೀರಾಚಾರಿ ಅವರಿಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಇಂದು ಚಿಕ್ಕಮಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ ಸಚಿವ ಸಿಟಿ ರವಿ, 25 ವಿಭಾಗಗಳಲ್ಲಿ ಸಾಧನೆಗೈದ 64 ಸಾಧಕರಿಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿಯನ್ನು ಘೋಷಿಸಿ, ಪಟ್ಟಿ ಪ್ರಕಟ ಮಾಡಿದರು. ಪರಿಸರ ವಿಭಾಗದಲ್ಲಿ ಸಾಲು ಮರಗಳನ್ನು ನೆಟ್ಟಿದ್ದ ವೀರಾಚಾರಿ ಅವರ ಹೆಸರು ಪ್ರಕಟಿಸಲಾಗಿದೆ. ಪಬ್ಲಿಕ್ ಹೀರೋ ಕಾರ್ಯಕ್ರಮದಲ್ಲಿ ವೀರಾಚಾರಿ ಅವರನ್ನು ಪಬ್ಲಿಕ್ ಟಿವಿ ಜನರಿಗೆ ಪರಿಚಯಿಸಿತ್ತು.
Advertisement
Advertisement
ನಿಸ್ವಾರ್ಥ ಸೇವೆ ಮಾಡುತ್ತ, ಮರ ಗಿಡಗಳನ್ನು ಮಕ್ಕಳಂತೆ ಪೋಷಣೆ ಮಾಡುತ್ತಿರುವ ವೀರಾಚಾರಿ ಅವರ ಪರಿಸರ ಪ್ರೇಮವನ್ನು ಸರ್ಕಾರ ಪ್ರಶಸ್ತಿ ನೀಡಿ ಗೌರವಿಸಿದೆ. ಜನರು ಇವರನ್ನು ಪ್ರೀತಿಯಿಂದ ಸಾಲುಮರದ ವೀರಾಚಾರಿ ಎಂದು ಸಹ ಕರೆಯುತ್ತಾರೆ. ದಾವಣಗೆರೆಯ ಜಿಲ್ಲೆಯ ಹರಿಹರ ತಾಲೂಕಿನ ಮಿಟ್ಲಕಟ್ಟೆ ಗ್ರಾಮದವರಾದ ವೀರಾಚಾರಿ ಪರಿಸರದ ಬಗ್ಗೆ ಹೆಚ್ಚು ಕಾಳಜಿ ಹೊಂದಿದ್ದಾರೆ. ಚಿತ್ರದುರ್ಗದ ನಂದಿಹಳ್ಳಿ ಗ್ರಾಮದಿಂದ ಕುಲುಮೆ ಕೆಲಸ ಮಾಡಲು 35 ವರ್ಷದ ಮಿಟ್ಲಕಟ್ಟೆ ಗ್ರಾಮಕ್ಕೆ ಬಂದು ನೆಲೆಸಿದ್ದಾರೆ.
Advertisement
Advertisement
ಪರಿಸರದ ಬಗ್ಗೆ ಕಾಳಜಿ ಇದ್ದ ವೀರಾಚಾರಿ ದೇವರಬೆಳಕೆರೆ ಗ್ರಾಮ ಪಂಚಾಯಿತಿಗೆ ತೆರಳಿ ಬಸ್ ನಿಲ್ದಾಣದ ಆವರಣದಲ್ಲಿ ನೆಡಲು ಎರಡು ಗಿಡಗಳನ್ನ ಕೇಳಿದ್ದಾರೆ. ಆದರೆ ಗಿಡಗಳನ್ನ ಕೊಡಲು ಗ್ರಾಮ ಪಂಚಾಯಿತಿ ಸಿಬ್ಬಂದಿ ನಿರಾಕರಿಸಿದ್ದಾರೆ. ಇದರಿಂದ ಬೇಸರಗೊಂಡ ವೀರಾಚಾರಿ ಗ್ರಾಮ ಪಂಚಾಯಿತಿಯವರಿಗೇ ಸವಾಲ್ ಹಾಕಿದ್ದಾರೆ. ಇನ್ನು ಮುಂದೆ ನಾನೇ ಇಡೀ ದಾವಣಗೆರೆ ಜಿಲ್ಲೆಯ ತುಂಬಾ ಗಿಡ ನೆಡುವುದಾಗಿ ಶಪಥ ಮಾಡಿದ್ದರು.
ಅಂದಿನಿಂದ ಪ್ರಾರಂಭವಾದ ಗಿಡ ನೆಡುವ ಕಾರ್ಯಕ್ರಮ ಸತತ 35 ವರ್ಷಗಳಲ್ಲಿ ಎರಡೂವರೆ ಸಾವಿರಕ್ಕಿಂತ ಹೆಚ್ಚು ಗಿಡ ನೆಟ್ಟಿದ್ದಾರೆ. ಕೇವಲ ಗಿಡ ನೆಡುವುದು ಮಾತ್ರವಲ್ಲದೆ ಪ್ರತಿನಿತ್ಯ ಗಿಡಗಳಿಗೆ ನೀರು ಹಾಕಿ ಬೆಳೆಸುವುದು ಇವರ ನಿತ್ಯ ಕಾಯಕವಾಗಿದೆ. ಈ ವೇಳೆ ಬಡತನದಲ್ಲಿದ್ದ ವೀರಚಾರಿ ತಮ್ಮ ಚಿನ್ನಾಭರಣಗಳನ್ನು ಮಾರಿ ಗಿಡಗಳನ್ನ ಕೊಂಡು ತಂದು ರಸ್ತೆಯ ಇಕ್ಕೆಲಗಳಲ್ಲಿ ಹಾಗೂ ಪ್ರತಿ ಗ್ರಾಮದ ಬಸ್ ನಿಲ್ದಾಣಗಳಲ್ಲಿ ಗಿಡ ಹಚ್ಚಿದ್ದಾರೆ.
ಆರಂಭದಲ್ಲಿ ವೀರಾಚಾರಿಯವರ ಕೆಲಸವನ್ನು ನೋಡಿ ಜನರು ನಗೆಪಾಟಲು ಮಾಡುತ್ತಿದ್ದರಂತೆ. ಆದರೆ ಜನರ ಮಾತುಗಳಿಗೆ ತಲೆಕೆಡಿಸಿಕೊಳ್ಳದ ವೀರಾಚಾರಿ ತಮ್ಮ ಕಾಯಕದಲ್ಲಿ ತೊಡಗಿಕೊಂಡಿದ್ದರು. ಇಂದು ವೀರಾಚಾರಿ ಅವರು ಬೆಳೆಸಿದ ಗಿಡಗಳು ಅದೆಷ್ಟೋ ಜನರಿಗೆ ನೆರಳು ನೀಡುತ್ತಿವೆ. ಹಾಗೆಯೇ ಪ್ರಾಣಿ ಪಕ್ಷಿಗಳಿಗೆ ಆಶ್ರಯ ತಾಣಗಳಾಗಿವೆ. ಸರ್ಕಾರ ಹಾಗೂ ಸಂಘ ಸಂಸ್ಥೆಗಳು ಪ್ರಶಸ್ತಿ ಪುರಸ್ಕಾರ ನೀಡಿ ಗೌರವಿಸಿವೆ. ಮನೆಯವರು ಸಹ ಹೆಗಲಿಗೆ ಹೆಗಲು ನೀಡಿ ಮರ ಗಿಡಗಳನ್ನು ಬೆಳೆಸಲು ಸಹಾಯ ಮಾಡುತ್ತಿದ್ದಾರೆ. ಬಡತನದಲ್ಲಿ ಕೂಡ ಮನೆ ಒಡವೆ ಒತ್ತೆ ಇಟ್ಟು ಗಿಡಗಳನ್ನು ತರುತ್ತಿದ್ದರು. ನಾವು ಯಾವುದಕ್ಕೂ ವಿರೋಧ ಮಾಡುತ್ತಿರಲಿಲ್ಲ ಎಂದು ವೀರಾಚಾರಿ ಅವರ ಪತ್ನಿ ಅನಸೂಯಮ್ಮ ಹೇಳುತ್ತಾರೆ.
https://www.facebook.com/publictv/videos/479892435937928/