ಹಾಸನ: ಈಗಿನ ಕಾಲದಲ್ಲಿ ನಾನಾಯ್ತು ನನ್ನ ಮನೆ, ಕುಟುಂಬವಾಯ್ತು ಎನ್ನುವವರೆ ಜಾಸ್ತಿ. ಲೋಕದ ಕುರಿತು ಅಲೋಚಿಸುವವರು ಕಡಿಮೆ. ಆದರೆ ಹಾಸನದ ಆರ್.ಜಿ ಗಿರೀಶ್ ಅವರು ಕಳೆದ 17 ವರ್ಷಗಳಿಂದ ಪರಿಸರ ಸಂರಕ್ಷಣೆ, ಸಮಾಜ ಸೇವೆಗೆ ಶ್ರಮಿಸುವ ಮೂಲಕ ಪಬ್ಲಿಕ್ ಹೀರೋ ಆಗಿದ್ದಾರೆ.
ಹಾಸನ ತಾಲೂಕಿನ ರಾಮದೇವರಪುರದ ಆರ್.ಜಿ ಗಿರೀಶ್(33) ಅವರು ಪರಿಸರ ಪ್ರೇಮಿ. ಕಳೆದ 17 ವರ್ಷಗಳಿಂದ ಜಿಲ್ಲೆಯಾದ್ಯಂತ ಸಂಚರಿಸಿ ಇದುವರೆಗೂ ಒಂದು ಲಕ್ಷಕ್ಕೂ ಹೆಚ್ಚು ಗಿಡಗಳನ್ನು ನೆಟ್ಟಿದ್ದಾರೆ. ಜೈವಿಕ ಇಂಧನ ಉತ್ಪಾದಿಸುವ ಸಸ್ಯಗಳ ಬಗ್ಗೆ ಅರಿವು ಮೂಡಿಸುತ್ತಿದ್ದಾರೆ.
Advertisement
Advertisement
ಅಷ್ಟೇ ಅಲ್ಲದೆ ಕಳೆದ 7-8 ವರ್ಷಗಳಿಂದ 70ಕ್ಕೂ ಹೆಚ್ಚು ಪುರಾತನ ಕಲ್ಯಾಣಿಗಳ ಹೂಳು ತೆಗೆದು ಅವುಗಳಿಗೆ ಮರುಜೀವ ನೀಡಿದ್ದಾರೆ. ಆ ಕಲ್ಯಾಣಿಗಳೀಗ ಜನ, ಜಾನುವಾರುಗಳಿಗೆ ನೀರಿನ ಮೂಲವಾಗಿವೆ. ನಿರ್ಲಕ್ಷ್ಯಕ್ಕೆ ಒಳಗಾಗಿದ್ದ ಹೋಯ್ಸಳ, ಚಾಲುಕ್ಯರ ಕಾಲದ ಐತಿಹಾಸಿಕ ಸ್ಥಳಗಳಿಗೆ ಹೊಸ ರೂಪ ಕೊಟ್ಟಿದ್ದಾರೆ. ಮಹಾ ಮಸ್ತಕಾಭಿಷೇಕ, ಹಾಸನಾಂಬೆ ಉತ್ಸವ ಸೇರಿ ಯಾವುದೇ ಸರ್ಕಾರಿ ಕಾರ್ಯಕ್ರಮ ನಡೆದರೂ ಗಿರೀಶ್ ಸ್ವಯಂ ಸೇವಕರಾಗಿ ಕೆಲಸ ಮಾಡುತ್ತಾರೆ.
Advertisement
Advertisement
ಕಾಲೇಜು ದಿನಗಳಿಂದಲೇ ಪರಿಸರ ಕಾಳಜಿ ಬೆಳಸಿಕೊಂಡ ಗಿರೀಶ್ ಒಬ್ಬರಿಂದಲೇ ಈ ಕಾರ್ಯ ಆಗುವುದಿಲ್ಲ ಎನ್ನುವುದು ಗೊತ್ತಾಗಿ ನಾಲ್ಕು ವರ್ಷಗಳಿಂದ ಸ್ಕೌಟ್ಸ್ ಅಂಡ್ ಗೈಡ್ಸ್ ನಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ವಿದ್ಯಾರ್ಥಿಗಳನ್ನು ಸೇರಿಸಿಕೊಂಡು ತಮ್ಮ ಪರಿಸರ ಪ್ರೇಮ, ಸಮಾಜಮುಖಿ ಕೆಲಸಗಳನ್ನು ಮುಂದುವರಿಸಿದ್ದಾರೆ.