ರಾಮನಗರ: ಪಿಡಿಒಗಳು ಸರಿಯಾಗಿ ಕೆಲಸ ಮಾಡಲ್ಲ, ಅನುದಾನವನ್ನ ಸರಿಯಾಗಿ ಬಳಸಲ್ಲ ಅನ್ನೋ ಆರೋಪ ಇದೆ. ಆದರೆ ಇದಕ್ಕೆ ವಿರೋಧವಾಗಿ ಗ್ರಾಮ ಪಂಚಾಯತ್ ಅಭಿವೃದ್ದಿ ಅಧಿಕಾರಿಯೊಬ್ಬ ನರೇಗಾ ಅನುದಾನವನ್ನ ಬಳಸಿಕೊಂಡು ಪ್ರಾಥಾಮಿಕ ಆರೋಗ್ಯ ಕೇಂದ್ರದ ಆವರಣವನ್ನೇ ಉದ್ಯಾನವನ್ನಾಗಿ ಮಾಡಿದ್ದಾರೆ. ಇವರೇ ನಮ್ಮ ಇವತ್ತಿನ ಪಬ್ಲಿಕ್ ಹೀರೋ.
ಚನ್ನಪಟ್ಟಣ ತಾಲೂಕಿನ ಹೊಂಗನೂರು ಗ್ರಾಮ ಪಂಚಾಯ್ತಿ ಪಿಡಿಒ ಯತೀಶ್ ಇವತ್ತಿನ ನಮ್ಮ ಪಬ್ಲಿಕ್ ಹೀರೋ. ಇವರು ಅನುದಾನವನ್ನು ಬಳಸಿಕೊಂಡು ಕಂಗೊಳಿಸುವ, ಸುಂದರವಾದ ಉದ್ಯಾನವನವನ್ನ ನಿರ್ಮಾಣ ಮಾಡಿದ್ದಾರೆ. ನರೇಗಾ ಅನುದಾನದಲ್ಲಿ 12 ಲಕ್ಷ ರೂ. ಹಾಗೂ ಆಸ್ಪತ್ರೆಯ ಅನುದಾನದಲ್ಲಿ 50 ಸಾವಿರ ರೂಪಾಯಿಗಳನ್ನು ಬಳಸಿಕೊಂಡು ಈ ಉದ್ಯಾನವನವನ್ನ ನಿರ್ಮಾಣ ಮಾಡಲಾಗಿದೆ.
Advertisement
Advertisement
ಉದ್ಯಾನವನದಲ್ಲಿ ಆಸ್ಪತ್ರೆಗೆ ಬರುವ ರೋಗಿಗಳು ಓಡಾಡಲು ವಾಕಿಂಗ್ ಪಾಥ್ ಹಾಗೂ ಬಾಣಂತಿಯರು ಖಾಸಗಿಯಾಗಿ ಕುಳಿತು ಮಕ್ಕಳಿಗೆ ಹಾಲುಣಿಸಲು ಮಂಟಪವೊಂದನ್ನು ಸಹ ಮಾಡಲಾಗಿದೆ. ಈ ಉದ್ಯಾನವನದಲ್ಲಿ ದುರಂತ, ವಿಷಮ್‍ಧಾರಿ, ಪೈಕಾಸ್ ಪಾಂಡಾ, ಅಕಿಲಿಫಾ, ಮೊಜಾಂಡಾದಂತಹದ ಸುಮಾರು 12 ಸಾವಿರ ವಿವಿಧ ಜಾತಿಯ ಸಸ್ಯಗಳು ಹಾಗೂ ಹೂವಿನ ಗಿಡಗಳನ್ನು ಬೆಳೆಸಲಾಗಿದೆ. ಇದು ಜಿಲ್ಲೆಯಲ್ಲಿಯೇ ವಿನೂತನವಾದ ಮಾದರಿಯಾದಂತಹ ಉದ್ಯಾನವನವಾಗಿದೆ ಎಂದು ಯತೀಶ್ ಹೇಳಿದ್ದಾರೆ.
Advertisement
ಪಿಡಿಒ ಯತೀಶ್ ಹೊಂಗನೂರು ಗ್ರಾಮ ಪಂಚಾಯತ್‍ಗೆ ಬರುವ ಮುನ್ನ ಚಕ್ಕೆರೆ ಹಾಗೂ ನೀಲಸಂದ್ರ ಗ್ರಾಮ ಪಂಚಾಯತ್‍ನಲ್ಲಿಯೂ ಪಿಡಿಒ ಆಗಿ ಕೆಲಸ ನಿರ್ವಹಿಸಿದ್ದಾರೆ. ನೀಲಸಂದ್ರ ಗ್ರಾಮದಲ್ಲಿ ಮೊದಲಿಗೆ ಹಳೆಯ ಗ್ರಾಮ ಪಂಚಾಯತ್ ಕಟ್ಟಡದ ಪಕ್ಕದಲ್ಲಿಯೇ ನರೇಗಾ ಅನುದಾನದಲ್ಲಿಯೇ ನೂತನವಾದ ಪಂಚಾಯತ್ ಕಟ್ಟಡವನ್ನ ಕಟ್ಟಿಸಿದ್ದಾರೆ. ಅಲ್ಲದೇ ಪಂಚಾಯತ್ ಆವರಣದಲ್ಲಿಯೂ 4 ಲಕ್ಷ ಅನುದಾನದಲ್ಲಿ ನೂರಾರು ಜಾತಿಯ ಸಸ್ಯಗಳನ್ನು ನೆಟ್ಟು ಉದ್ಯಾನವನವನ್ನ ನಿರ್ಮಾಣ ಮಾಡಿದ್ದಾರೆ.
Advertisement
ನೀಲಸಂದ್ರ ಗ್ರಾಮದಲ್ಲಿ ಕೊಳಚೆ ನೀರಿನಿಂದ ಗಬ್ಬೆದ್ದು ನಾರುತ್ತಿದ್ದ ಕಲ್ಯಾಣಿಯನ್ನ ಮುಚ್ಚುವ ಬದಲು ದುರಸ್ಥಿ ಮಾಡಿಸಿದ್ದಾರೆ. 17 ಲಕ್ಷ ವೆಚ್ಚದಲ್ಲಿ ಕಲ್ಯಾಣಿಯನ್ನ ನವೀಕರಣಗೊಳಿಸಿದ್ದು, ಸುತ್ತಲು ತಡೆಗೋಡೆಯನ್ನ ನಿರ್ಮಿಸಲಾಗಿದೆ. ಪಾರ್ಕ್, ವಾಕಿಂಗ್ ಪಾಥ್ ಕೂಡಾ ಮಾಡಲಾಗಿದೆ. ಇದು ಇಡೀ ಜಿಲ್ಲೆಗೆ ಮಾದರಿಯಾಗಿದ್ದು, ಬೇರೆಡೆ ಇರುವ ಕಲ್ಯಾಣಿಗಳನ್ನು ಸಹ ಇದೇ ರೀತಿಯಲ್ಲಿ ದುರಸ್ಥಿ ಕಾರ್ಯಗೊಳಿಸುವಂತೆ ಜಿಲ್ಲಾ ಪಂಚಾಯತ್ ಸೂಚನೆ ನೀಡಿದೆ. ಪಿಡಿಒ ಯತೀಶ್‍ರವರ ಕಾರ್ಯಕ್ಕೆ ಇದೀಗ ಸಾರ್ವಜನಿಕರು ಸಹ ಮೆಚ್ಚುಗೆ ಸೂಚಿಸುತ್ತಿದ್ದು, ಬೇರೆ ಗ್ರಾಮ ಪಂಚಾಯತ್‍ನ ಪಿಡಿಒಗಳು ಸಹ ಇದೇ ರೀತಿ ಯತೀಶ್‍ರನ್ನೇ ಮಾದರಿಯಾಗಿ ಅನುಸರಿಸುವಂತೆ ಸಾರ್ವಜನಿಕರ ಅನಂತ ಕೃಷ್ಣರಾಜೇ ಅರಸ್ ಮನವಿ ಮಾಡಿದ್ದಾರೆ.
ಜನಪ್ರತಿನಿಧಿಗಳು ಮಾಡದಂತಹ ಕೆಲಸವನ್ನ ಪಿಡಿಒವೊಬ್ಬ ತನ್ನ ಇಚ್ಛಾಶಕ್ತಿಯಿಂದ ಇಷ್ಟೆಲ್ಲ ಕೆಲಸಗಳನ್ನು ಮಾಡುವ ಮೂಲಕ ಇತರೆ ಪಿಡಿಒಗಳಿಗೂ ಮಾದರಿಯಾಗಿದ್ದಾರೆ. ಗ್ರಾಮ ಪಂಚಾಯತ್‍ನಲ್ಲಿ ಹಣವನ್ನೇ ಪೀಕುತ್ತಾ ಕೆಲಸ ಮಾಡದೇ ಕೂರುವ ಪಿಡಿಒಗಳ ನಡುವೆ ಯತೀಶ್ ಮಾದರಿಯಾಗಿದ್ದಾರೆ. ಇನ್ನಾದರೂ ಜಿಲ್ಲೆ ಅಲ್ಲದೇ ರಾಜ್ಯದ ಬೇರೆ ಬೇರೆ ಪಂಚಾಯತ್‍ನ ಪಿಡಿಒಗಳು ಯತೀಶ್‍ರನ್ನ ಮಾದರಿಯಾಗಿ ಅನುಸರಿಸಿ ಉತ್ತಮ ಕೆಲಸ ಮಾಡಬೇಕಿದೆ.
https://www.youtube.com/watch?v=fixsM9gArIg
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv