ಕೋಲಾರ: ಅದು ಖಾಸಗಿ ಶಾಲೆಯನ್ನೇ ನಾಚಿಸುವಂತ ಪುಟ್ಟದಾದ ಸರ್ಕಾರಿ ಕನ್ನಡ ಕಿರಿಯ ಪ್ರಾಥಮಿಕ ಶಾಲೆ. ಗಡಿನಾಡು ಕುಗ್ರಾಮವೊಂದರಲ್ಲಿರುವ ಪರಿಸರ ಸ್ನೇಹಿ ಶಾಲೆ ಇದಾಗಿದ್ದು, ವಿದ್ಯಾಭ್ಯಾಸಕ್ಕೆ ಬೇಕಾದ ಪೂರಕ ವಾತಾವರಣ ಇಲ್ಲಿದೆ. ಈ ಪರಿಸರ ಸ್ನೇಹಿ ಶಾಲೆ ಹಾಗೂ ಶಿಕ್ಷಕನ ಸಾಧನೆಗೆ ಪರಿಸರ ಮಿತ್ರ ಪ್ರಶಸ್ತಿ ಕೂಡ ಲಭಿಸಿದೆ. ಈ ಶಾಲೆ ವೈಶಿಷ್ಟ್ಯ ಕುರಿತ ವಿಶೇಷ ಸುದ್ದಿ ಇಲ್ಲಿದೆ.
ಹಚ್ಚ ಹಸಿರಿನಿಂದ ಕಂಗೊಳಿಸುತ್ತಿರೋ ಶಾಲೆ, ಇನ್ನೊಂದೆಡೆ ಹಸಿರಿನ ಮದ್ಯೆ ನಲಿದಾಡುತ್ತಿರೋ ಪುಟಾಣಿ ಮಕ್ಕಳು, ವಿದ್ಯಾರ್ಥಿಗಳು ಕಲಿಯಲು ಹಾಗೂ ಕಲಿಸಲು ಬೇಕಾದ ಪೂರಕ ವಾತಾವರಣ ಇರುವ ಶಾಲೆ ಇರೋದು ಕೋಲಾರ ಜಿಲ್ಲೆ ಮಾಲೂರು ತಾಲೂಕಿನ ಗೋಪಸಂದ್ರ ಎಂಬ ಕುಗ್ರಾಮದಲ್ಲಿ. ಈ ಗ್ರಾಮದಲ್ಲಿರುವ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ 45 ಜನ ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ.
Advertisement
Advertisement
ವಿಶೇಷತೆ ಎಂದರೆ ಮೂರು ಬಾರಿ ಜಿಲ್ಲಾ ಮಟ್ಟದಲ್ಲಿ ನೀಡುವ ಪರಿಸರ ಮಿತ್ರ ಪ್ರಶಸ್ತಿಯನ್ನ ಗಳಿಸಿರುವ ಕೀರ್ತಿ ಈ ಶಾಲೆಗಿದೆ. ಹೀಗಾಗಿ ಇದನ್ನ ಪರಿಸರ ಪ್ರೇಮಿ ಶಾಲೆ ಎಂದೇ ಕರೆಯುತ್ತಾರೆ. ಶಾಲೆಯ ಅಂದವನ್ನ ಹೆಚ್ಚಿಸಿರುವ ಮುಖ್ಯಶಿಕ್ಷಕ ಮುನಿನಾರಾಯಣ ಅವರು ಶಾಲೆಯನ್ನ ಹಚ್ಚ ಹಸರಿನಿಂದ ಕಂಗೊಳಿಸುವಂತೆ ಮಾಡಿದ್ದಾರೆ. ಶಾಲೆಗೆ ಒಮ್ಮೆ ಭೇಟಿ ನೀಡಿದರೆ ಸಾಕು ಸಸ್ಯ ಕಾಶಿಯಂತೆ ಭಾಸವಾಗುತ್ತೆ. ಇದರಿಂದ ಈ ಕನ್ನಡ ಮಾಧ್ಯಮ ಶಾಲೆ ಕರ್ನಾಟಕ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ನೀಡುವ ಹಸಿರು ಶಾಲೆ ಪ್ರಶಸ್ತಿಯನ್ನು ಮೂರು ಬಾರಿ ಮುಡಿಗೇರಿಸಿಕೊಳ್ಳುವುದರ ಮೂಲಕ ಹ್ಯಾಟ್ರಿಕ್ ಸಾಧನೆಯನ್ನ ಮಾಡಿದೆ.
Advertisement
ಇನ್ನು ಶಾಲಾ ಆವರಣದಲ್ಲಿ ಮಾವು, ಬಾಳೆ, ಪಪ್ಪಾಯ, ನೇರಳೆ, ಗಸಗಸೆ, ನುಗ್ಗೆ, ಟೀಕ್, ಮೈಸೂರು ಮಲ್ಲಿಗೆ ಸೇರಿದಂತೆ ನಾನಾ ಬಗೆಯ ಹೂವು, ಹಣ್ಣು, ತರಕಾರಿ ಗಿಡಗಳನ್ನ ಬೆಳೆಸುವುದರ ಜೊತೆಗೆ ಪೋಷಣೆ ಮಾಡಲಾಗುತ್ತಿದೆ. ಒಂದರಿಂದ 5ನೇ ತರಗತಿಯವರೆಗೆನ 45 ವಿದ್ಯಾರ್ಥಿಗಳು ಹಾಗೂ ಶಾಲೆಯ ಮುಖ್ಯ ಶಿಕ್ಷಕ ಮುನಿನಾರಾಯಣ ಅವರ ಪರಿಶ್ರಮದಿಂದಾಗಿ ಶಾಲೆಯ ಆವರಣ ಹಸಿರಿನ ಸಿರಿಯಿಂದ ನಳ ನಳಿಸುವಂತೆ ಮಾಡಿದ್ದಾರೆ.
Advertisement
ಗ್ರಾಮಸ್ಥರ ಸಹಕಾರದಿಂದಾಗಿ ಶಾಲಾ ಆವರಣದ ಸುತ್ತಲೂ ಕಾಪೌಂಡ್ ನಿರ್ಮಾಣ ಮಾಡಿ ಆವರಣದಲ್ಲಿ ಇಂಗು ಗುಂಡಿ, ನೀರಿನ ಮಿತಬಳಕೆಗಾಗಿ ತುಂತುರು ನೀರಾವರಿ, ಶಾಲಾ ಆವರಣದಲ್ಲಿ ಸಂಗ್ರಹವಾದ ಕಸವನ್ನ ಗಿಡಮರಗಳಿಗೆ ಮರುಬಳಕೆ ಮಾಡುವಂತಹ ತಂತ್ರಜ್ಞಾನವನ್ನು ಅಳವಡಿಸಿದ್ದಾರೆ. ಮಧ್ಯಾಹ್ನದ ಬಿಸಿಯೂಟಕ್ಕೂ ಕೂಡ ಇಲ್ಲಿನ ತರಕಾರಿಗಳನ್ನು ಬಳಸಲಾಗುತ್ತಿದೆ. ವಿನೂತನ ಕೈತೊಳೆಯುವ ಘಟಕವನ್ನು ಕೂಡ ನಿರ್ಮಾಣ ಮಾಡಲಾಗಿದೆ. ಇನ್ನು ಬೃಹದಾಕಾರವಾಗಿ ಬೆಳೆದಿರುವ ಈ ಮರಗಳಲ್ಲಿ ಪಕ್ಷಿಗಳ ಕಲರವ ಪರಿಸರದ ಅಂದವನ್ನು ಮತ್ತಷ್ಟು ಹೆಚ್ಚಿಸಿದೆ.
ಖಾಸಗಿ ಶಾಲೆಗಳಿಗೆ ಸೆಡ್ಡು ಹೊಡೆಯುವ ಹಾಗೆ ಮರಗಿಡಗಳಿಂದ ಕಂಗೊಳಿಸುತ್ತಿರುವ ಈ ಶಾಲೆ ಹಲವಾರು ಶಾಲೆಗಳಿಗೆ ಮಾದರಿಯಾಗಿದೆ.
https://www.youtube.com/watch?v=XdDsZcSRQew