ಬೀದರ್: ನಗರದಲ್ಲಿ ಬಸ್ ನಿಲ್ದಾಣ ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿರುವ ಅಲೆಮಾರಿಗಳಿಗೆ ಇಂದಿನ ನಮ್ಮ ಪಬ್ಲಿಕ್ ಹೀರೋಗಳು ಅನ್ನದಾತರಾಗಿದ್ದಾರೆ.
ಡಿಗ್ರಿ, ಡಿಪ್ಲೋಮಾ, ವೈದ್ಯಕೀಯ ವಿದ್ಯಾರ್ಥಿಗಳು ಸೇರಿ ಬೀದರ್ ನಗರದ ಹೊಸ ಬಸ್ ನಿಲ್ದಾಣದ ಬಳಿ ರಿಶೈನ್ ಎಂಬ ಎನ್‍ಜಿಓ ಕಟ್ಟಿಕೊಂಡಿದ್ದಾರೆ. ಈ ರಿಶೈನ್ ಎನ್‍ಜಿಓದ ಸದಸ್ಯರೇ ಇವತ್ತಿನ ನಮ್ಮ ಪಬ್ಲಿಕ್ ಹೀರೋ. ಈ ತಂಡದ ಸದಸ್ಯರು ಪ್ರತಿದಿನ ಹಸಿವಿನಿಂದ ಮಲಗುವವರಿಗೆ ಅನ್ನ ನೀಡುತ್ತಿದ್ದಾರೆ. ಮದುವೆ ಸೇರಿದಂತೆ ಇತರೆ ಕಾರ್ಯಕ್ರಮಗಳಲ್ಲಿ ವೇಸ್ಟ್ ಆಗಿರೋ ಉಳಿಯೋ ಅನ್ನವನ್ನು ಈ ತಂಡ ಸಂಗ್ರಹಿಸುತ್ತದೆ. ಭಿಕ್ಷುಕರು, ಅನಾಥರು, ಅಲೆಮಾರಿಗಳಿಗೆ ಸಂಗ್ರಹಿಸಿದ ಆಹಾರವನ್ನು ಹಂಚಿಕೆ ಮಾಡ್ತಿದೆ. ರಿಶೈನ್ ತಂಡದ ಸದಸ್ಯರು ಕಳೆದ 2 ವರ್ಷಗಳಿಂದ 24 ಗಂಟೆಗಳ ಕಾಲವೂ ಈ ಸೇವೆಯನ್ನು ಮಾಡುತ್ತಿದ್ದಾರೆ.
ಅನ್ನ ಸಾಗಿಸಲು ಗಾಡಿ ಇಲ್ಲದೆ ಕೈಯಿಂದ ಹಣ ಹಾಕಿ ಆಟೋದಲ್ಲಿ ಸಾಗಿಸುತ್ತಿದ್ದಾರೆ. ನಿಮ್ಮ ಸಮಾರಂಭಗಳಲ್ಲಿ ಮಣ್ಣುಪಾಲು ಆಗುವ ಆಹಾರವನ್ನು ಇವರಿಗೆ ನೀಡಿದರೆ ಅದನ್ನು ಅನಾಥರಿಗೆ ತಲುಪಿಸುತ್ತಾರೆ. ಜೊತೆಗೆ ಅನ್ನ ಕೊಟ್ಟವರಿಗೆ ಒಂದು ಸಸಿಕೊಟ್ಟು ಪರಿಸರ ಜಾಗೃತಿಯನ್ನೂ ಮೂಡಿಸುತ್ತಿದ್ದಾರೆ. ಪಿಂಚಣಿ, ಆರೋಗ್ಯ ಸಮಸ್ಯೆ ಅನುಭವಿಸುತ್ತಿರುವ ಸಾರ್ವಜನಿಕರಿಗೆ ನೆರವು ಕೊಡಿಸುತ್ತಿದ್ದಾರೆ.
ಎಲ್ಲಿ ಮಾನವೀಯತೆ ಇರುತ್ತದೆಯೋ ಅಲ್ಲಿ ದೇವರ ಪ್ರೀತಿ ಇರುತ್ತದೆ ಎಂಬುವುದು ಈ ತಂಡದ ಮಾತು. ಈ ತಂಡಕ್ಕೆ ಇನ್ಫೋಸಿಸ್ ಪೌಂಡೇಷನ್ ಮುಖ್ಯಸ್ಥೆ ಸುಧಾಮೂರ್ತಿ ಅವರನ್ನು ಭೇಟಿಯಾಗಬೇಕು ಅನ್ನೋದು ಆಸೆಯಾಗಿದೆ.