ಚಿತ್ರದುರ್ಗ: ಈ ಬೇಸಿಗೆಯಲ್ಲಿ ಪ್ರಾಣಿ ಪಕ್ಷಿಗಳಿಗೆ ಆಹಾರ, ನೀರು ಸಿಗೋದೇ ಕಷ್ಟ. ಕೆಲವರು ಮನೆಗಳ ಮುಂದೆ ಬರುವ ಪ್ರಾಣಿ, ಪಕ್ಷಿಗಳಿಗೆ ಆಹಾರ ಕೊಟ್ಟು ಪ್ರೀತಿ ತೋರುತ್ತಾರೆ. ಆದರೆ ಚಿತ್ರದುರ್ಗದಲ್ಲಿ ಪ್ರಾಣಿ, ಪಕ್ಷಿ ಪ್ರೇಮಿಯೊಬ್ಬರು ನೇರವಾಗಿ ಕಾಡಿಗೆ ಹೋಗಿ ಪಕ್ಷಿ, ಪ್ರಾಣಿಗಳಿಗೆ ಆಹಾರ ನೀರು ಕೊಡ್ತಾರೆ.
ಮನೋಹರ್ ಇವತ್ತಿನ ನಮ್ಮ ಪಬ್ಲಿಕ್ ಹೀರೋ. ಚಿತ್ರದುರ್ಗದ ಮೀಸಲು ಅರಣ್ಯ ಜೋಗಿಮಟ್ಟಿಯಲ್ಲಿ ಬೇಸಿಗೆಯಿಂದಾಗಿ ಬರದ ಛಾಯೆ ಆವರಿಸಿದೆ. ಇದ್ರಿಂದಾಗಿ, ಪ್ರಾಣಿ-ಪಕ್ಷಿಗಳಿಗೆ ನೀರು, ಆಹಾರದ ಸಮಸ್ಯೆ ಹೆಚ್ಚಾಗಿತ್ತು. ಇದನ್ನು ಮನಗಂಡ ಮನೋಹರ್ ಪ್ರಾಣಿ ಪಕ್ಷಿಗಳಿಗಾಗಿ ಹಣ್ಣು-ಹಂಪಲು, ಮಡಿಕೆಗಳ ಮೂಲಕ ನೀರುಣಿಸ್ತಿದ್ದಾರೆ.
ಚಿತ್ರದುರ್ಗದ ನಿವಾಸಿ ಮನೋಹರ್ ಕಳೆದ ಎರಡು ವರ್ಷಗಳಿಂದ ನಿತ್ಯವೂ ತಮ್ಮ ಈ ಕಾರ್ಯವನ್ನ ಮಾಡ್ತಿದ್ದಾರೆ. ಇದಕ್ಕಾಗಿ ಸ್ನೇಹಿತರ ಗುಂಪನ್ನು ಕಟ್ಟಿಕೊಂಡಿದ್ದಾರೆ. ಎಪಿಎಂಸಿಯಿಂದ ಧಾನ್ಯಗಳು ಹಾಗೂ ಹಣ್ಣಿನ ವ್ಯಾಪಾರಿಗಳಿಂದ ಹಣ್ಣನ್ನು ಖರೀದಿ ಮಾಡ್ತಿದ್ದಾರೆ. ಇದಕ್ಕಾಗಿ ತಿಂಗಳಿಗೆ 7 ರಿಂದ 8 ಸಾವಿರ ರೂಪಾಯಿ ಖರ್ಚು ಮಾಡ್ತಿದ್ದಾರೆ.
ಕೇವಲ ಜೋಗಿಮಟ್ಟಿಯಲ್ಲದೇ ಜಿಲ್ಲೆಯ ಚಂದ್ರವಳ್ಳಿತೋಟ, ಅನ್ನಪೂರ್ಣಶ್ವೇರಿ ಮಠದ ಬಳಿಯೂ ಮೂಕಜೀವಿಗಳಿಗೆ ಆಹಾರ ಕೊಡ್ತಾರೆ. ಬೇಸಿಗೆಯ ಬೇಗೆಯಲ್ಲಿ ಮನೋಹರ್ ಮಾಡ್ತಿರೋ ಕಾರ್ಯ ನಿಜಕ್ಕೂ ಶ್ಲಾಘನೀಯ.