ಚಿತ್ರದುರ್ಗ: ಕೋಟೆ ನಾಡು ಚಿತ್ರದುರ್ಗದಲ್ಲಿ ವರ್ಷದ ಬಹುತೇಕ ಕಾಲ ಬರವೇ ಇರುತ್ತದೆ. ಇದರಿಂದ ಜಿಲ್ಲೆಯಲ್ಲಿ ಜಾನುವಾರುಗಳು ಮೇವು-ನೀರಿಲ್ಲದೇ ಒದ್ದಾಡಿ ಹೋಗುತ್ತವೆ. ಮೂಕ ಪ್ರಾಣಿಗಳ ವೇದನೆಗೆ ಮರುಗಿದ ಕಬೀರಾನಂದ ಆಶ್ರಮದ ಶಿವಲಿಂಗಾನಂದ ಶ್ರೀಗಳು ಗೋಶಾಲೆ ತೆರೆದು ಗೋಪಾಲನೆಗೆ ಮುಂದಾಗಿದ್ದಾರೆ.
Advertisement
ಹೌದು. ಚಿತ್ರದುರ್ಗದ ಹೊರವಲಯದಲ್ಲಿರೋ ಕಾತ್ರಾಳ್ ಕೆರೆ ಬಳಿ ಶ್ರೀ ಆದಿಚುಂಚನಗಿರಿ ಗೋಶಾಲೆ ಇದೆ. ಇಲ್ಲಿ ಕಳೆದ 10 ವರ್ಷಗಳ ಹಿಂದೆ ಆದಿ ಚುಂಚನಗಿರಿ ಮಹಾಸಂಸ್ಥಾನದಿಂದ ಆರಂಭವಾದ ಗೋಶಾಲೆಯನ್ನು ಕಬೀರಾನಂದ ಆಶ್ರಮದ ಪೀಠಾಧಿಪತಿಗಳಾದ ಶಿವಲಿಂಗಾನಂದ ಶ್ರೀಗಳು ನೋಡಿಕೊಂಡು ಬರುತ್ತಿದ್ದಾರೆ. ಬೀಡಾಡಿ ದನಗಳು, ಸಂಕಷ್ಟದಲ್ಲಿರೋ ಅನ್ನದಾತರ ಜಾನುವಾರುಗಳಿಗಾಗಿಯೇ ತೆರೆದಿರೋ ಈ ಗೋಶಾಲೆಗೆ ವಾಯುವಿಹಾರದ ನೆಪದಲ್ಲಿ ಬರುತ್ತಾರೆ. ಬಳಿಕ ಗೋಪಾಲಕನಂತೆ ಕೊಠಡಿಗಳನ್ನು ಸ್ವಚ್ಛಗೊಳಿಸುತ್ತಾರೆ. ಹಸುಗಳಿಂದ ಹಾಲು ಕರೆಯುತ್ತಾರೆ.
Advertisement
Advertisement
ರೈತರ ದನಗಳನ್ನು ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಪೋಷಿಸುತ್ತಿರೋ ಶ್ರೀಗಳು, ಅತಿಸಣ್ಣ ರೈತರಿಗೆ ಹೋರಿಗಳನ್ನು ರಿಯಾಯಿತಿ ದರದಲ್ಲಿ ನೀಡುವ ಮೂಲಕ ಕೃಷಿಗೆ ಪ್ರೋತ್ಸಾಹಿಸುತ್ತಿದ್ದಾರೆ. ಎಷ್ಟೇ ಬರಗಾಲವಿದ್ದರೂ 365 ದಿನಗಳ ಕಾಲ ಗೋಶಾಲೆ ತೆರೆದಿರುತ್ತದೆ. ಹಬ್ಬ, ಹರಿದಿನ ಹಾಗೂ ಶುಭಕಾರ್ಯಗಳ ವೇಳೆ ಇಲ್ಲಿಗೆ ಜನ ಬಂದು ಗೋವುಗಳಿಗೆ ಪ್ರಿಯವಾದ ಆಹಾರ ನೀಡಿ ಸಂಭ್ರಮಿಸುತ್ತಾರೆ ಎಂದು ಮಠದ ಭಕ್ತರಾದ ವಿ.ಎಲ್ ಪ್ರಶಾಂತ್ ತಿಳಿಸಿದ್ದಾರೆ.
Advertisement
ಸಾಮಾನ್ಯವಾಗಿ ಪ್ರತಿಷ್ಠಿತ ಮಠಗಳ ಪೀಠಾಧಿಪತಿಯಾದವರು ಭಕ್ತಿ, ಭಜನೆಗಳಲ್ಲಿ ಮಗ್ನರಾಗಿರುತ್ತಾರೆ. ಆದರೆ, ಕಬೀರಾನಂದ ಆಶ್ರಮದ ಶ್ರೀಗಳು ಮಾತ್ರ ಗೋಪಾಲನೆಯಲ್ಲಿ ನಿರತರಾಗಿ ಮಾದರಿ ಎನಿಸಿದ್ದಾರೆ.