ಬಳ್ಳಾರಿ: ಒಂದು ಸರ್ಕಾರಿ ನೌಕರಿ ಸಿಕ್ರೆ ಸಾಕಪ್ಪ, ಲೈಫಲ್ಲಿ ಆರಾಮಾಗಿ ಇರಬಹುದು ಅಂತಾರೆ ಜನ. ಆದ್ರೆ ಇವತ್ತಿನ ಪಬ್ಲಿಕ್ ಹೀರೋ 10 ಸ್ಪರ್ಧಾತ್ಮಕ ಪರೀಕ್ಷೆ ಬರೆದು ಎಲ್ಲದರಲ್ಲೂ ಪಾಸಾಗಿದ್ದಾರೆ. ಇದೀಗ ಐಎಎಸ್ ಕನಸು ಕಾಣ್ತಿದ್ದಾರೆ.
ಬಳ್ಳಾರಿಯ ಸಿರಗುಪ್ಪ ತಾಲೂಕಿನ ಸಿರಿಗೇರಿ ಗ್ರಾಮದ ಗರ್ಜಿಲಿಂಗಪ್ಪ ಇವತ್ತಿನ ನಮ್ಮ ಪಬ್ಲಿಕ್ ಹೀರೋ. ಮೂಲತಃ ಆಂಧ್ರ ಪ್ರದೇಶದ ಹರಿವಾಣದವರು. ಕರೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕರಾಗಿದ್ದುಕೊಂಡೇ ಪೊಲೀಸ್, ಎಫ್‍ಡಿಎ, ಎಸ್‍ಡಿಎ ಪರೀಕ್ಷೆ ಬರೆದಿದ್ದಾರೆ. ಬರೆದ ಪರೀಕ್ಷೆಯಲ್ಲೆಲ್ಲಾ ಪಾಸ್ ಆಗಿದ್ದಾರೆ. ಇತ್ತೀಚೆಗೆ ಕೆಪಿಎಸ್‍ಸಿಯ ಕೆಎಎಸ್ ಪರೀಕ್ಷೆಯಲ್ಲಿ ಪಾಸಾಗಿ ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಯಾಗಿ ಆಯ್ಕೆಯಾಗಿದ್ದಾರೆ.
ಕಡುಬಡತನವಿದ್ದ ಪರಿಣಾಮ ಗರ್ಜಿಲಿಂಗಪ್ಪ 7ನೇ ತರಗತಿವರೆಗೆ ಶಾಲೆಗೆ ಹೋಗಿರಲಿಲ್ಲ. ಆದ್ರೆ ಆಂಧ್ರಪ್ರದೇಶದಲ್ಲಿ ಹಂಪಮ್ಮ ಅನ್ನೋ ಶಿಕ್ಷಕಿ ಇವರಿಗೆ ಪರೀಕ್ಷೆ ಬರೆಸಿ 7ನೇ ತರಗತಿ ಪಾಸ್ ಮಾಡಿ ಹೈಸ್ಕೂಲ್‍ಗೆ ಕಳುಹಿಸಿದ್ರಂತೆ. ನಂತರ ಓದಿನ ಆಸಕ್ತಿ ಬೆಳೆಸಿಕೊಂಡ ಗರ್ಜಿಲಿಂಗಪ್ಪ ಈಗ ಕೆಎಎಸ್ ಅಧಿಕಾರಿಯಾಗ್ತಿದ್ದಾರೆ. ಇವರು ಎಂಎ ಪೂರೈಸಿದ್ದು, ನೆಟ್ ಮತ್ತು ಕೆಸೆಟ್ ಪರೀಕ್ಷೆಗಳಲ್ಲೂ ಪಾಸಾಗಿದ್ದಾರೆ. ಗರ್ಜಿಲಿಂಗಪ್ಪ ನಮಗೆಲ್ಲರಿಗೂ ಸ್ಫೂರ್ತಿ ಅಂತ ಗೆಳೆಯರು ಹೇಳ್ತಾರೆ.
ಗರ್ಜಿಲಿಂಗಪ್ಪ ಈಗಾಗಲೇ 5 ಬಾರಿ ಐಎಎಸ್ ಪರೀಕ್ಷೆ ಬರೆದು ವಿಫಲವಾಗಿದ್ದಾರೆ. ಆದರೂ, ಐಎಎಸ್ ಅಧಿಕಾರಿ ಆಗಿಯೇ ತೀರುತ್ತೇನೆ ಅಂತ ಹಠ ಹೊಂದಿದ್ದಾರೆ.
ಗರ್ಜಿಲಿಂಗಪ್ಪ ಪಾಸಾದ ಪರೀಕ್ಷೆಗಳು:
1. 2007 ರಲ್ಲಿ ಪೊಲೀಸ್ ಪೇದೆ ನೇಮಕಾತಿಯಲ್ಲಿ ರಾಜ್ಯಕ್ಕೆ ಪ್ರಥಮ ಶ್ರೇಯಾಂಕ.
2. 2007 ರಲ್ಲಿ ಪ್ರೌಢಶಾಲಾ ಶಿಕ್ಷಕರ ನೇಮಕಾತಿಯಲ್ಲಿ ರಾಜ್ಯಕ್ಕೆ 2ನೇ ಶ್ರೇಯಾಂಕ ,ಕಲಬುರಗಿ ವಿಭಾಗಕ್ಕೆ ಮೊದಲ ಶ್ರೇಯಾಂಕ.
3. 2008 ರಲ್ಲಿ ಎಫ್‍ಡಿಎ ಹುದ್ದೆಗೆ ಆಯ್ಕೆ.
4. 2012 ರಲ್ಲಿ ಮತ್ತೆ ಎಫ್‍ಡಿಎ ಹುದ್ದೆಗೆ ಆಯ್ಕೆ.
5. 2012 ರಲ್ಲಿ ಹಾಸ್ಟಲ್ ವಾರ್ಡನ್ ಹುದ್ದೆಗೆ ನೇಮಕ.
6. 2012 ರಲ್ಲಿ ಸಾಂಖ್ಯಿಕ ನಿರೀಕ್ಷಕ ಹುದ್ದೆಗೆ ನೇಮಕ.
7. 2012 ರಲ್ಲಿ ಎಸ್‍ಡಿಎ ಹುದ್ದೆಗೆ ಆಯ್ಕೆ.
8. 2013-14 ರಲ್ಲಿ ಮತ್ತೆ ಹಾಸ್ಟಲ್ ವಾರ್ಡನ್ ಆಗಿ ಆಯ್ಕೆ.
9. 2015 ರಲ್ಲಿ ಎಸ್‍ಡಿಎ ಹುದ್ದೆಗೆ ನೇಮಕ.
10. 2017ರಲ್ಲಿ ಕೆಎಎಸ್ ಪರೀಕ್ಷೆ ಪಾಸು ಮಾಡಿ ವಾಣಿಜ್ಯ ತೆರಿಗೆ ಇಲಾಖೆಗೆ ಆಯ್ಕೆ.