– 5 ವರ್ಷದಲ್ಲಿ 30 ಸಾವಿರಕ್ಕೂ ಹೆಚ್ಚು ಯೂನಿಫಾರ್ಮ್
ಚಾಮರಾಜನಗರ: ಸೇವೆ ಅನ್ನೋದು ನಗಣ್ಯ, ಬೆಲೆ ಕಟ್ಟಲಾಗದ್ದು. ಇಲ್ಲೊಬ್ಬರು ತಮ್ಮ ವೃತ್ತಿಯಿಂದಲೇ ಹೆಸರು ಗಳಿಸಿದ್ದಾರೆ. ಒಂದು ಜೊತೆ ಬಟ್ಟೆ ಹೊಲಿಯೋದಕ್ಕೆ 300 ರಿಂದ 400 ರೂ. ತೆಗೆದುಕೊಳ್ಳುತ್ತಾರೆ. ಚಾಮರಾಜನಗರದ ಪಬ್ಲಿಕ್ ಹೀರೋ ಶಾಲಾ ಮಕ್ಕಳ ಸಮವಸ್ತ್ರ ಹೊಲಿಯಲು ಸೇವಾ ಮನೋಭಾವದಿಂದ ಕೇವಲ 100 ರೂ. ತೆಗೆದುಕೊಳ್ಳುತ್ತಿದ್ದಾರೆ.
Advertisement
ಚಾಮರಾಜನಗರ ತಾಲೂಕಿನ ಚಂದಕವಾಡಿ ನಿವಾಸಿ ಟೈಲರ್ ಎಸಾಬುಲ್ಲಾ ಖಾನ್ ಕಳೆದ 12 ವರ್ಷಗಳಿಂದ ಟೈಲರ್ ವೃತ್ತಿ ಮಾಡಿಕೊಂಡಿದ್ದಾರೆ. ಇವರಿಗೆ ಮಕ್ಕಳು ಸಮವಸ್ತ್ರ ಧರಿಸಿ ಹೋಗಬೇಕು ಎಂಬುದು ಆಸೆ. ಸರ್ಕಾರ ಮಕ್ಕಳಿಗೆ ಉಚಿತವಾಗಿ ಬಟ್ಟೆ ನೀಡುತ್ತೆ, ಆದ್ರೆ ನೂರಾರು ರೂಪಾಯಿ ಖರ್ಚು ಮಾಡಿ ಸಮವಸ್ತ್ರ ಹೊಲಿಸೋದು ಬಡ ಕುಟುಂಬಗಳಿಗೆ ಹೊರೆಯಾಗಿತ್ತು. ಬಡ ಕುಟುಂಬಗಳ ಮನದಾಳ ಅರಿತ ಎಸಾಬುಲ್ಲಾ ಕಡಿಮೆ ಬೆಲೆಯಲ್ಲಿ ಮಕ್ಕಳಿಗೆ ಸಮವಸ್ತ್ರ ಹೊಲಿಯಲು ಮುಂದಾದರು. ಕಳೆದ ಐದು ವರ್ಷಗಳಿಂದ ಎಸಾಬುಲ್ಲಾ ಕೇವಲ ನೂರು ರೂಪಾಯಿಗೆ ಸಮವಸ್ತ್ರ ಸಿದ್ಧ ಮಾಡಿಕೊಡುತ್ತಿದ್ದಾರೆ.
Advertisement
ಹುಡುಗರಿಗೆ ಅಂಗಿ, ನಿಕ್ಕರ್ ಮತ್ತು ಬಾಲಕಿಯರಿಗೂ ಡ್ರೆಸ್ ಹೊಲಿದು ಕೊಡುತ್ತಿದ್ದಾರೆ. ಪ್ರತಿ ಸರ್ಕಾರಿ ಶಾಲೆಗೆ ಕೂಡ ತಾವೇ ಖುದ್ದಾಗಿ ಭೇಟಿ ನೀಡಿ ಮಕ್ಕಳಿಂದ ಬಟ್ಟೆಯ ಅಳತೆ ಪಡೆದುಕೊಳ್ಳುತ್ತಾರೆ. 5 ವರ್ಷದಿಂದ 30 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಬಟ್ಟೆ ಹೊಲಿದು ಕೊಟ್ಟಿದ್ದಾರೆ. ಪ್ರತಿ ವರ್ಷ 5 ರಿಂದ6 ಸಾವಿರ ವಿದ್ಯಾರ್ಥಿಗಳಿಗೆ ಬಟ್ಟೆ ಹೊಲಿಯುತ್ತಿದ್ದಾರೆ.
Advertisement
Advertisement
ಬೇರೆಯವರ ಬಳಿ ಒಂದು ಜೊತೆ ಬಟ್ಟೆ ಹೊಲಿಸಬೇಕೆಂದ್ರೆ 300 ರಿಂದ 400 ರೂ. ನೀಡಬೇಕು. ಎಸಾಬುಲ್ಲಾ ಖಾನ್ 100 ರೂಪಾಯಿಗೆ ಬಟ್ಟೆ ಹೊಲಿದು ಕೊಡ್ತಿರೋದು ಅವರ ಸೇವಾ ಮನೋಭಾವ ತೋರಿಸುತ್ತದೆ. ಶಾಲಾ ಮಕ್ಕಳು 100 ಜನ ಇದ್ದರೆ, ಅದರಲ್ಲಿ 10 ಬಡ ವಿದ್ಯಾರ್ಥಿಗಳಿಗೆ ಉಚಿತವಾಗಿ ಬಟ್ಟೆ ಹೊಲಿದು ಕೊಡುತ್ತಾರೆ. ಈ ಬಟ್ಟೆ ಹೊಲಿಯುವ ಕಾಯಕದ ಮೂಲಕ 10 ಜನ ಮಹಿಳೆಯರಿಗೆ ಅನ್ನದಾತರಾಗುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ.