ರಾಜಕೀಯ ಬಿಟ್ಟು, ಸರ್ಕಾರಿ ಯೋಜನೆಗಳನ್ನೇ ಬಳಸಿಕೊಂಡು ಉದ್ಧಾರವಾಯ್ತು ಬೆಟ್ಟದೂರು ತಾಂಡಾ

Public TV
1 Min Read
RCR PUBLIC HERO 2 1

– ಗ್ರಾಮದಲ್ಲಿ ಹುಡುಕಿದ್ರೂ ಗುಡಿಸಲುಗಳು ಕಾಣಲ್ಲ, ಮಣ್ಣಿನ ರಸ್ತೆಗಳಿಲ್ಲ

ರಾಯಚೂರು: ಯಾರೋ ಬಂದು ನಮ್ಮನ್ನ ಉದ್ಧಾರ ಮಾಡ್ತಾರೆ ಅಂತ ಕಾಯ್ತಾ ಕುಳಿತರೆ ಯಾರೂ ಬರಲ್ಲ. ಸಿಕ್ಕ ಅವಕಾಶಗಳನ್ನ ಸದ್ಬಳಕೆ ಮಾಡಿಕೊಂಡ್ರೆ ಏನೆಲ್ಲಾ ಸಾಧಿಸಬಹುದು ಅನ್ನೋದಕ್ಕೆ ರಾಯಚೂರಿನ ಈ ಪುಟ್ಟ ತಾಂಡಾವೇ ಸಾಕ್ಷಿ. ರಾಜಕೀಯ ಬಿಟ್ಟು, ಸರ್ಕಾರದ ಯೋಜನೆಗಳನ್ನೇ ಸರಿಯಾಗಿ ಬಳಸಿಕೊಂಡು ಗ್ರಾಮದ ಚಿತ್ರಣವನ್ನೇ ಬದಲಿಸಿದ್ದಾರೆ. ತಾವು ಯಾರಿಗೂ ಕಮ್ಮಿಯಿಲ್ಲ ಅನ್ನೋ ಹಾಗೇ ಬದುಕುತ್ತಿದ್ದಾರೆ. ಈ ಗ್ರಾಮದ ಇಡೀ ಜನರೇ ನಮ್ಮ ಇಂದಿನ ಪಬ್ಲಿಕ್ ಹೀರೋಗಳು.

RCR PUBLIC HERO 4 1

ಜಿಲ್ಲೆಯ ಮಾನ್ವಿ ತಾಲೂಕಿನ ಬೆಟ್ಟದೂರು ತಾಂಡಾದಲ್ಲಿ ಎಲ್ಲಿ ಹುಡುಕಿದ್ರೂ ಗುಡಿಸಲುಗಳು ಸಿಕ್ಕಲ್ಲ ಹಾಗು ಮಣ್ಣಿನ ರಸ್ತೆಗಳಂತೂ ಕಣ್ಣಿಗೂ ಬೀಳಲ್ಲ. ಈ ಗ್ರಾಮದಲ್ಲಿ ಶೇಕಡಾ 80 ರಷ್ಟು ಜನ ಶೌಚಾಲಯ ಹೊಂದಿದ್ದಾರೆ. ಬೇಸಿಗೆಯಲ್ಲೂ ನೀರಿಗೆ ಎಳ್ಳಷ್ಟು ಬರವಿಲ್ಲ. 110 ಮನೆಗಳಿರುವ ಈ ಗ್ರಾಮದಲ್ಲಿ 800ಕ್ಕೂ ಹೆಚ್ಚು ಜನ ವಾಸವಾಗಿದ್ದಾರೆ.

RCR PUBLIC HERO 3 1

ಲಂಬಾಣಿ ಸಮಾಜದವರೇ ಹೆಚ್ಚಾಗಿ ಇರುವ ಈ ಗ್ರಾಮ ಕಳೆದ ಆರೇಳು ವರ್ಷಗಳಲ್ಲಿ ಸಂಪೂರ್ಣ ಬದಲಾಗಿದೆ. ಒಣ ರಾಜಕೀಯಕ್ಕೆ ಬಲಿಯಾಗದೇ ಗ್ರಾಮಸ್ಥರು ಒಗ್ಗಟ್ಟಾಗಿ ಸರ್ಕಾರದ ಯೋಜನೆಗಳ ಸದ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಕರ್ನಾಟಕ ತಾಂಡಾ ಅಭಿವೃದ್ದಿ ನಿಗಮ, ಸ್ಥಳೀಯ ಸಂಸ್ಥೆಗಳ ಕಾಮಗಾರಿಗಳು ಸೇರಿ ಯಾವುದೇ ಯೋಜನೆ ಗ್ರಾಮಕ್ಕೆ ಬಂದ್ರೂ ಒಟ್ಟಾಗಿ ಅನುಷ್ಠಾನಕ್ಕೆ ಮುಂದಾಗಿದ್ದಾರೆ.

RCR PUBLIC HERO 5 1

ತಾಂಡಾಗಳು ಅಂದ್ರೆ ಕಳ್ಳಭಟ್ಟಿ ಕಾಯಿಸುವ ಕೇಂದ್ರಗಳು ಅನ್ನೋ ಭಾವನೆ ಈಗಲೂ ಕೆಲವು ಜನರಲ್ಲಿದೆ. ಆದ್ರೆ ಈ ಗ್ರಾಮದಲ್ಲಿ ಮದ್ಯಪಾನ ನಿಷೇಧವಿದೆ. ಜನರು ಹೈನುಗಾರಿಕೆ, ಕುರಿ ಸಾಕಾಣಿಕೆ ಮಾಡುತ್ತಿದ್ದಾರೆ. ಭೂರಹಿತರಿಗೆ ಸರ್ಕಾರ ಒಂದು ಎಕರೆ ಜಮೀನು ನೀಡಿದ್ದು ಇಲ್ಲಿನ ರೈತರು ಭತ್ತ, ಮೆಣಸಿನಕಾಯಿ, ಹತ್ತಿ ಬೆಳೆಯುತ್ತಿದ್ದಾರೆ. ಸಾಕ್ಷಾರತೆ ಪ್ರಮಾಣ ಕೂಡ ಹೆಚ್ಚಾಗುತ್ತಿದೆ. ಒಟ್ಟಾಗಿ ಬದುಕುತ್ತಿರುವ ಇಲ್ಲಿನ ಜನ ಪೊಲೀಸ್ ಠಾಣೆ, ಕೋರ್ಟ್ ಮೆಟ್ಟಿಲು ಹತ್ತದೇ ತಮ್ಮ ಸಮಸ್ಯೆಗಳನ್ನ ಬಗೆಹರಿಸಿಕೊಳ್ಳುತ್ತಿದ್ದಾರೆ.

ಬಯಲು ಶೌಚಾಲಯ ಮುಕ್ತ, ಗುಡಿಸಲು ಮುಕ್ತ, ಎಲ್ಲೆಡೆ ಸಿಸಿ ರಸ್ತೆಗಳ ಮೂಲಕ ಬೆಟ್ಟದೂರು ತಾಂಡ ಮಾದರಿ ಗ್ರಾಮವಾಗಿದೆ.

RCR PUBLIC HERO 6 1

RCR PUBLIC HERO 7

RCR PUBLIC HERO 1 1

 

 

Share This Article
Leave a Comment

Leave a Reply

Your email address will not be published. Required fields are marked *