ಧಾರವಾಡ: ಗಣೇಶ ಹಬ್ಬದ ಸಂದರ್ಭದಲ್ಲಿ ಸೂಕ್ಷ್ಮ ಪ್ರದೇಶದಲ್ಲಿ ಗಸ್ತು ನಿರ್ವಹಿಸದೇ ಮನೆಗೆ ಹೋಗಿ ಮಲಗಿ ಕರ್ತವ್ಯಲೋಪ ಎಸಗಿದ್ದ ಪಿಎಸ್‍ಐಯನ್ನು ಧಾರವಾಡ ಎಸ್‍ಪಿ ಅಮಾನತುಗೊಳಿಸಿ ಆದೇಶಿಸಿದ್ದಾರೆ.
ಧಾರವಾಡ ಜಿಲ್ಲೆಯ ಗರಗ ಠಾಣೆಯ ಪಿಎಸ್‍ಐ ಸಮೀರ್ ಮುಲ್ಲಾ ಅಮಾನತಾಗಿದ್ದಾರೆ. ಗರಗ ಠಾಣಾ ವ್ಯಾಪ್ತಿಯ ಕೋಟೂರ ಗ್ರಾಮದಲ್ಲಿ ಗಣೇಶ ಪ್ರತಿಷ್ಠಾಪನೆಯ ದಿನ ಮೆರವಣಿಗೆ ಸಾಗುವಾಗ ಸ್ವಲ್ಪ ದ್ವೇಷಮಯ ವಾತಾವರಣ ನಿರ್ಮಾಣವಾಗಿತ್ತು. ಈ ಹಿನ್ನೆಲೆಯಲ್ಲಿ ಸೂಕ್ಷ್ಮ ಪ್ರದೇಶವೆಂದು ಪರಿಗಣಿಸಿ, ಮಧ್ಯರಾತ್ರಿ 2 ಗಂಟೆಗೆ ಖುದ್ದು ಜಿಲ್ಲಾ ಮಹಿಳಾ ಎಸ್‍ಪಿ ವರ್ತಿಕಾ ಕಟಿಯಾರ್ ಸ್ಥಳಕ್ಕೆ ಭೇಟಿ ನೀಡಿದ್ದರು.
Advertisement
Advertisement
ಈ ವೇಳೆ ಪಿಎಸ್‍ಐಗೆ ರಾತ್ರಿ ಗಸ್ತು ತಿರುಗುವಂತೆ ಸೂಚಿಸಿ ಹೋಗಿದ್ದರು. ಆದರೆ, ಪಿಎಸ್‍ಐ ಸಮೀರ್ ಮುಲ್ಲಾ ಎಸ್‍ಪಿ ಹೋಗುತ್ತಿದ್ದಂತೆ ಮನೆಗೆ ವಾಪಸ್ ತೆರಳಿದ್ದಾರೆ. ಎಸ್‍ಪಿ ಮತ್ತೆ 4 ಗಂಟೆಗೆ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಆಗ ಅಲ್ಲಿ ಪಿಎಸ್‍ಐ ಸಮೀರ್ ಮುಲ್ಲಾ ಗಸ್ತು ನಿರ್ವಹಿಸದೇ ಮನೆಗೆ ಹೋಗಿದ್ದನ್ನು ಗಮನಿಸಿದ್ದಾರೆ. ಇದನ್ನು ಗಂಭೀರವಾಗಿ ಪರಿಗಣಿಸಿದ ಎಸ್‍ಪಿ ವರ್ತಿಕಾ ಕಟಿಯಾರ ಕರ್ತವ್ಯ ಲೋಪದ ಹಿನ್ನೆಲೆಯಲ್ಲಿ ಸಮೀರ್ ಮುಲ್ಲಾ ಅವರನ್ನು ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.