– ನ್ಯಾಯಾಂಗ ತನಿಖೆಗೆ ಆಗ್ರಹ
ಬೆಂಗಳೂರು: ಮೈಕ್ರೋ ಫೈನಾನ್ಸ್‌ಗಳ (Microfinance) ಕಿರುಕುಳದಿಂದಾಗಿ ಬಡಜನರು ಸಾಯುತ್ತಿದ್ದರೂ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕಣ್ಣು ತೆರೆದಿಲ್ಲ. ಮೈಕ್ರೋ ಫೈನಾನ್ಸ್‌ನಿಂದ ಸತ್ತವರಿಗೆ ನ್ಯಾಯ ನೀಡಲು ನ್ಯಾಯಾಂಗ ತನಿಖೆ ಮಾಡಬೇಕು ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ (R.Ashok) ಆಗ್ರಹಿಸಿದ್ದಾರೆ.
Advertisement
ಮಂಡ್ಯದ (Mandya) ಕೊನ್ನಾಪುರ ಗ್ರಾಮದಲ್ಲಿ ಮೈಕ್ರೋ ಫೈನಾನ್ಸ್ ಕಿರುಕುಳದಿಂದ ಆತ್ಮಹತ್ಯೆಗೆ ಶರಣಾದ ತಾಯಿ ಮತ್ತು ಮಗನ ಮನೆಗೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಸುಗ್ರೀವಾಜ್ಞೆ ತರುತ್ತೇವೆಂದು ಹೇಳಿ ಒಂದು ತಿಂಗಳು ಕಳೆದಿದೆ. ಮಂಡ್ಯ ಜಿಲ್ಲೆಯಲ್ಲಿ ದಲಿತರ ಪ್ರದೇಶದಲ್ಲಿ 6 ಮಂದಿ ಊರು ಬಿಟ್ಟು ಹೋಗಿದ್ದಾರೆ. ರಾಜ್ಯದಲ್ಲಿ ಲಕ್ಷಾಂತರ ಜನರು ಓಡಿಹೋಗಿರಬಹುದು. ಸರ್ಕಾರ ಸುಗ್ರೀವಾಜ್ಞೆ ತರಲಿಲ್ಲ, ಸಾವುಗಳು ನಿಲ್ಲಲಿಲ್ಲ ಎಂದು ದೂರಿದ್ದಾರೆ.
Advertisement
Advertisement
ಕೊನ್ನಾಪುರದಲ್ಲಿ ತಾಯಿ ಪ್ರೇಮಾ ಮತ್ತು ಮಗ ರಂಜಿತ್ ಮೈಕ್ರೋ ಫೈನಾನ್ಸ್‌ನ ಸಾಲ ತೀರಿಸಲಾಗದೆ ಕೊನ್ನಾಪುರ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬಡವರ ಪರ ಎಂದು ಹೇಳುವ ಸಿಎಂ ಸಿದ್ದರಾಮಯ್ಯನವರಿಗೆ ಕಣ್ಣಿಲ್ಲ. ಕೊನ್ನಾಪುರ ಗ್ರಾಮದಲ್ಲಿ ಚಾಮುಂಡೇಶ್ವರಿ, ನವಚೇತನ, ಸೂರ್ಯೋದಯ, ಯುನಿಟಿ, ಪ್ರಗತಿ ಸೇರಿದಂತೆ 24 ಮೈಕ್ರೋ ಫೈನಾನ್ಸ್‌ಗಳು ಈ ಹಳ್ಳಿಗೆ ಬಂದು ವರ್ಷಕ್ಕೆ 12% ರಂತೆ ಸಾಲ ನೀಡಿವೆ. ಒಬ್ಬರಿಗೆ ಒಂಬತ್ತು ಜನರು ಶೂರಿಟಿ ನೀಡಿದ್ದಾರೆ. ಒಬ್ಬರು ಸಾಲ ಮರುಪಾವತಿ ಮಾಡಿಲ್ಲವೆಂದರೆ ಉಳಿದವರು ಹೊಣೆಯಾಗುತ್ತಾರೆ. ಸಾಲ ಕಟ್ಟದೆ ಮಾನ ಹೋದಾಗ ನೊಂದವರು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ಪೊಲೀಸರು ಕೂಡ ಇಲ್ಲಿ ಮೈಕ್ರೋ ಫೈನಾನ್ಸ್‌ಗೆ ಬೆಂಬಲ ನೀಡಿದ್ದಾರೆ. ಮನೆ ವಶಕ್ಕೆ ಪಡೆಯುವ ಸಮಯದಲ್ಲಿ ಪೊಲೀಸರು ಕುಟುಂಬದ ಸದಸ್ಯರನ್ನು ಎಳೆದು ಹೊರಗೆ ಹಾಕಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
Advertisement
ಮಂಡ್ಯದಲ್ಲಿ 60 ಮೈಕ್ರೋ ಫೈನಾನ್ಸ್‌ಗಳಿದ್ದು, ಕೇವಲ 18 ಮಾತ್ರ ಅಧಿಕೃತವಾಗಿವೆ. ಉಳಿದವುಗಳಲ್ಲಿ ರೌಡಿಗಳಿದ್ದಾರೆ. ತಹಶೀಲ್ದಾರ್ ಹಾಗೂ ಪೊಲೀಸರು ಎಲ್ಲಾ ಹಳ್ಳಿಗೂ ಹೋಗಿ ಕ್ರಮ ಕೈಗೊಳ್ಳಬೇಕಿತ್ತು. ಈ ಸಾವುಗಳಿಗೆ ನ್ಯಾಯ ನೀಡಲು ನ್ಯಾಯಾಧೀಶರ ನೇತೃತ್ವದಲ್ಲಿ ನ್ಯಾಯಾಂಗ ತನಿಖೆ ಮಾಡಬೇಕು. ಅನಧಿಕೃತ ಮೈಕ್ರೋ ಫೈನಾನ್ಸ್‌ಗಳನ್ನು ಪತ್ತೆ ಮಾಡಿ ಕ್ರಮ ವಹಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.